ಸೋಮವಾರಪೇಟೆ, ನ. ೨೫: ಜಿಲ್ಲೆಯ ಎಲ್ಲಾ ಭಾಗದಲ್ಲೂ ಮೊಬೈಲ್ ನೆಟ್‌ವರ್ಕ್ ಸೇವೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೂತನವಾಗಿ ಕೊಡಗಿನಲ್ಲಿ ೬೩ ಬಿಎಸ್‌ಎನ್‌ಎಲ್ ಟವರ್‌ಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದು, ಮುಂದಿನ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಂಡು ಸೇವೆಗೆ ಲಭ್ಯವಾಗಲಿದೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ತಾಲೂಕಿನ ಗರ್ವಾಲೆ- ಶಿರಂಗಳ್ಳಿ, ಹಂಡ್ಲಿ ಹಾಗೂ ಸಂಪಿಗೆದಾಳು, ಐಗೂರು ಗ್ರಾ.ಪಂ. ವ್ಯಾಪ್ತಿಯ ಯಡವನಾಡು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ಚೌಡ್ಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಪೂರ್ಣಗೊಂಡಿರುವ ಜಲಜೀವನ್ ಮಿಷನ್ ಕಾಮಗಾರಿ ಯನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು.

ಕೊಡಗಿನಲ್ಲಿ ಒಟ್ಟು ೬೩ ಕಡೆಗಳಲ್ಲಿ ನೂತನ ಬಿಎಸ್‌ಎನ್‌ಎಲ್ ಟವರ್‌ಗಳ ನಿರ್ಮಾಣಕ್ಕೆ ಕಾರ್ಯಯೋಜನೆ ಮಾಡಲಾಗಿದೆ. ಇದರಲ್ಲಿ ಈಗಾಗಲೇ ೨೦ ಕಾಮಗಾರಿಗಳು ಪ್ರಾರಂಭವಾಗಿವೆ. ಮಾರ್ಚ್ ಒಳಗಡೆ ಎಲ್ಲಾ ಟವರ್ ನಿರ್ಮಾಣ ಕಾಮಗಾರಿ ಪೂರ್ಣ ಗೊಂಡು ಸೇವೆ ಒದಗಿಸುವ ಗುರಿ ಹೊಂದಲಾಗಿದೆ ಎಂದು ಸಂಸದರು ತಿಳಿಸಿದರು.

ಕೊಡಗಿನಲ್ಲಿ ರಸ್ತೆ, ನೀರಿನ ಬೇಡಿಕೆಯಷ್ಟೇ ಮೊಬೈಲ್ ನೆಟ್‌ವರ್ಕ್ಗೂ ಸಾರ್ವಜನಿಕರಿಂದ ಬೇಡಿಕೆ ಅಧಿಕವಿದೆ. ಪ್ರಧಾನಿ ಮೋದಿ ಅವರು ೬೩ ಟವರ್ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಇನ್ನೂ ಕೆಲವು ಭಾಗಗಳಲ್ಲಿ ಟವರ್ ನಿರ್ಮಾಣದ ಬೇಡಿಕೆಯಿದ್ದು, ಮುಂದಿನ ದಿನಗಳಲ್ಲಿ ಆದ್ಯತೆಯ ಮೇರೆ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

೬೩ ಟವರ್‌ಗಳ ಪೈಕಿ ೪೩ ಕಡೆಗಳಲ್ಲಿ ಇನ್ನಷ್ಟೇ ಆರಂಭ ಗೊಳ್ಳಬೇಕಿದೆ. ೪ ಟವರ್‌ಗಳ ನಿರ್ಮಾಣಕ್ಕೆ ಗುರುತಿಸಿರುವ ಜಾಗವು ವೈಲ್ಡ್ಲೈಫ್ ವ್ಯಾಪ್ತಿಯಲ್ಲಿ ಬರುತ್ತಿದ್ದು, ಇದಕ್ಕೆ ಸಂಬAಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಲು ಪತ್ರ ವ್ಯವಹಾರ ನಡೆಸಲಾಗಿದೆ. ಉನ್ನತ ಮಟ್ಟದಿಂದ ಅನುಮೋದನೆ ಲಭಿಸಬೇಕಿದ್ದು, ಅನುಮತಿ ದೊರೆತೊಡನೆ ಕೆಲಸ ಪ್ರಾರಂಭಿಸಲಾಗುವುದು ಎಂದರು.

ಕೇAದ್ರ ಸರ್ಕಾರದಿಂದ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲಜೀವನ್ ಮಿಷನ್ ಅಡಿಯಲ್ಲಿ ಕೊಡಗಿನಲ್ಲೂ ಹಲವಷ್ಟು ಕಾಮಗಾರಿಗಳು ನಡೆದಿವೆ. ರೂ. ೧.೯ ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಚೌಡ್ಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಚೆಕ್‌ಡ್ಯಾಂ ಹಾಗೂ ಜಾಕ್‌ವೆಲ್ ನಿರ್ಮಾಣ ಮಾಡಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿದೆ. ಕೆಲಸ ಪೂರ್ಣ ಗೊಂಡಿದ್ದು, ಈಗಾಗಲೇ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಶುದ್ಧ ನೀರು ಒದಗಿಸುವ ಕೇಂದ್ರ ಸರ್ಕಾರದ ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣ ಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದರು ತಿಳಿಸಿದರು.

ಈ ಸಂದರ್ಭ ಮಾಜೀ ಶಾಸಕರುಗಳಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಜಿ.ಪಂ. ಮಾಜಿ ಸದಸ್ಯ ಬಿ.ಬಿ. ಭಾರತೀಶ್, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಪ್ರಮುಖರಾದ ಹೆಚ್.ಕೆ. ಮಾದಪ್ಪ, ಅಭಿಯಂತರ ಟಿ.ಪಿ. ವೀರೇಂದ್ರ, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ಗೀತಾ ಶಶಿಕುಮಾರ್, ಮಾಜಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.