ಒಂದು ಪಿಸ್ತೂಲ್, ೫.೨೪೦ ಕೆ.ಜಿ. ಹೆರಾಯಿನ್ ವಶ

ಅಮೃತಸರ, ನ. ೨೬: ಭಾರತದ ವಾಯುಪ್ರದೇಶಕ್ಕೆ ಬಂದಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ತಡೆದಿದ್ದು, ಡ್ರೋನ್ ಸೇರಿದಂತೆ ಪಿಸ್ತೂಲ್ ಮತ್ತು ೫.೨೪೦ ಕೆ.ಜಿ. ಹೆರಾಯಿನ್ ಅನ್ನು ಅಮೃತಸರ ಜಿಲ್ಲೆಯ ಚಕ್ ಅಲ್ಲಾ ಬಕ್ಷ್ನಲ್ಲಿ ವಶಪಡಿಸಿಕೊಂಡಿದೆ. ನವೆಂಬರ್ ೨೬ರ ಮುಂಜಾನೆ, ಪಾಕಿಸ್ತಾನದ ಡ್ರೋನ್ ನಿಯಮ ಉಲ್ಲಂಘಿಸಿ ಭಾರತೀಯ ವಾಯುಪ್ರದೇಶಕ್ಕೆ ಬಂದಿದೆ. ಇದನ್ನು ಬಿಎಸ್‌ಎಫ್ ಪಡೆಗಳು ಗುಂಡಿನ ದಾಳಿಯೊಂದಿಗೆ ತಡೆದವು. ಶೋಧ ಕಾರ್ಯಾಚರಣೆ ವೇಳೆ, ಬಿಎಸ್‌ಎಫ್ ಪಂಜಾಬ್ ಫ್ರಾಂಟಿಯರ್‌ನ ಪಡೆಗಳು ಅಮೃತಸರ ಜಿಲ್ಲೆಯ ಚಕ್ ಅಲ್ಲಾ ಬಕ್ಷ್ ಗ್ರಾಮದಿಂದ ಒಂದು ಪಿಸ್ತೂಲ್, ೨ ಮ್ಯಾಗಜೀನ್‌ಗಳು, ೨೦ ಲೈವ್ ರೌಂಡ್ಸ್ ಮತ್ತು ೫.೨೪೦ ಕೆ.ಜಿ. ಹೆರಾಯಿನ್ ಅನ್ನು ವಶಪಡಿಸಿಕೊಂಡಿವೆ. ಈ ಮೂಲಕ ಪಾಕಿಸ್ತಾನಿ ಸ್ಮಗ್ಲರ್‌ಗಳ ಮತ್ತೊಂದು ಕಳ್ಳಸಾಗಣೆ ಪ್ರಯತ್ನವನ್ನು ಬಿಎಸ್‌ಎಫ್ ವಿಫಲಗೊಳಿಸಿದೆ' ಎಂದು ಪಂಜಾಬ್ ಬಿಎಸ್‌ಎಫ್ ಟ್ವೀಟ್ ಮಾಡಿದೆ. ಇದಕ್ಕೂ ಮೊದಲು, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಈ ವರ್ಷದ ಕಳೆದ ೧೦ ತಿಂಗಳಲ್ಲಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ ೬೯ ಪಾಕಿಸ್ತಾನಿ ಡ್ರೋನ್‌ಗಳನ್ನು ವಶಪಡಿಸಿಕೊಂಡಿದೆ. ಈ ಮೂಲಕ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಯತ್ನಗಳನ್ನು ವಿಫಲಗೊಳಿಸಿದೆ ಎಂದು ಗಡಿ ಕಾವಲು ಪಡೆ ಸಂಗ್ರಹಿಸಿದ ಅಂಕಿಅAಶಗಳು ಬಹಿರಂಗಪಡಿಸಿವೆ.

ಪAಜಾಬ್ ಎಸ್‌ಪಿ ಸೇರಿ ೭ ಮಂದಿ ಅಮಾನತು

ನವದೆಹಲಿ, ನ. ೨೬: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಪಂಜಾಬ್ ಎಸ್.ಪಿ. ಸೇರಿದಂತೆ ೭ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಕಳೆದ ವರ್ಷ ಜನವರಿಯಲ್ಲಿ ಪ್ರಧಾನಿ ಮೋದಿ ಪಂಜಾಬ್‌ಗೆ ಭೇಟಿ ನೀಡಿದ್ದಾಗ ಭದ್ರತಾ ಉಲಂಘನೆಯಾಗಿತ್ತು. ಈ ವೇಳೆ ಕರ್ತವ್ಯ ಲೋಪ ಉಂಟುಮಾಡಿದ್ದ ಆರೋಪದಲ್ಲಿ ಬಟಿಂಡಾ ಎಸ್.ಪಿ. ಸೇರಿದಂತೆ ೭ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಎಸ್.ಪಿ. ಗುರ್ಬಿಂದರ್ ಸಿಂಗ್, ಡಿವೈಎಸ್‌ಪಿ ಪರ್ಸೋನ್ ಸಿಂಗ್, ಡಿಎಸ್‌ಪಿ ಜಗದೀಶ್ ಕುಮಾರ್, ಮೂವರು ಇನ್ಸ್ಪೆಕ್ಟರ್‌ಗಳಾದ ತೇಜೇಂದ್ರ ಸಿಂಗ್, ಬಲ್ವಿಂದರ್ ಸಿಂಗ್ ಹಾಗೂ ಜತೀಂದರ್ ಸಿಂಗ್, ಓರ್ವ ಸಹಾಯಕ ಸಬ್ ಇನ್ಸ್ಪೆಕ್ಟರ್ ರಾಕೇಶ್ ಕುಮಾರ್‌ನ್ನು ಅಮಾನತುಗೊಳಿಸಲಾಗಿದೆ. ಅಧಿಕಾರಿ, ಗುರ್ಬಿಂದರ್ ಸಿಂಗ್, ಘಟನೆಯ ಸಮಯದಲ್ಲಿ ಪೊಲೀಸ್ ಸೂಪರಿಂಟೆAಡೆAಟ್ (ಕಾರ್ಯಾಚರಣೆ) ಆಗಿ ನೇಮಕಗೊಂಡರು ಮತ್ತು ಫಿರೋಜ್‌ಪುರದಲ್ಲಿ ಕರ್ತವ್ಯದಲ್ಲಿದ್ದರು.

ಮನೆ ಮುಂದೆ ನಿಂತಿದ್ದವರ ಮೇಲೆ ಕಚ್ಚಾ ಬಾಂಬ್ ದಾಳಿ

ಬರ್ಹಾಂಪುರ, ನ. ೨೬: ಒಡಿಶಾದ ಗಂಜಾA ಜಿಲ್ಲೆಯಲ್ಲಿ ನಡೆದ ಕಚ್ಚಾ ಬಾಂಬ್ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಕಲ್ಲಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಪುರ ಗ್ರಾಮದಲ್ಲಿ ಶನಿವಾರ ನಿರಂಜನ್ ದಾಸ್ (೨೭) ಮತ್ತು ಶ್ರೀನಿವಾಸ್ ದಾಸ್ (೨೫) ತಮ್ಮ ಮನೆಯ ವರಾಂಡಾದಲ್ಲಿ ನಿಂತಿದ್ದಾಗ ಈ ಘಟನೆ ನಡೆದಿದೆ. ಈ ಘಟನೆಗೆ ಎರಡು ಗುಂಪುಗಳ ನಡುವಿನ ದೀರ್ಘಕಾಲದ ಹಳೆ ವೈಷಮ್ಯವೇ ಕಾರಣವಾಗಿದ್ದು, ಇದು ಆಗಾಗ್ಗೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಗುತ್ತದೆ. ವಿಚಾರಣೆಗಾಗಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಲ್ಲಿಕೋಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಗನ್ನಾಥ್ ಮಲ್ಲಿಕ್ ತಿಳಿಸಿದ್ದಾರೆ. ಘಟನೆಯ ಹಿಂದಿರುವವರನ್ನು ನಾವು ಗುರುತಿಸಿದ್ದು, ಅವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಗ್ರಾಮದಲ್ಲಿ ಶೋಧ ನಡೆಸಿದಾಗ ಕಚ್ಚಾ ಬಾಂಬ್‌ಗಳನ್ನು ತಯಾರಿಸಲು ಬಳಸುವ ಸ್ಫೋಟಕಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದ್ದರೂ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದರು.

ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ಬಂಧನ

ಧಾರವಾಡ, ನ. ೨೬: ಹುಬ್ಬಳ್ಳಿ ನಗರದಲ್ಲಿ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ಸತೀಶ್ ಗೋನಾ ಎಂಬಾತನನ್ನು ಬಂಧಿಸಲಾಗಿದೆ. ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸತೀಶ ಗೋನಾ ವ್ಯಕ್ತಿಯೊಬ್ಬರ ಕೊಲೆಗೆ ಸಂಚು ರೂಪಿಸಿ ಶನಿವಾರ ಕೈಯಲ್ಲಿ ತಲವಾರು ಹಿಡಿದು ಹುಬ್ಬಳ್ಳಿ-ಗದಗ ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿ ಕಾಯುತ್ತಿದ್ದ ಎನ್ನಲಾಗಿದೆ. ಈ ವೇಳೆ ಪಟ್ಟಣ ಠಾಣೆ ಇನ್‌ಸ್ಪೆಕ್ಟರ್ ರಫೀಕ್ ತಹಶೀಲ್ದಾರ್ ನೇತೃತ್ವದ ಪೊಲೀಸ್ ತಂಡ ಆತನನ್ನು ಬಂಧಿಸಿದೆ. ಸಂಜೆ ಸತೀಶ ಗೋನಾನನ್ನು ಸ್ಥಳ ಮಹಜರಿಗೆ ಕರೆ ತಂದಾಗ ಆತ ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ಪಿಎಸ್‌ಐ ವಿನೋದ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಇನ್‌ಸ್ಪೆಕ್ಟರ್ ರಫೀಕ್ ತಹಶೀಲ್ದಾರ್ ಅವರು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ, ನಿಲ್ಲದ ಸತೀಶನ ಕಾಲಿಗೆ ಗುಂಡು ಹಾರಿಸಿದ್ದಾರೆ. ಕಳೆದ ೧೫ ದಿನಗಳಿಂದ ರೌಡಿ ಶೀಟರ್‌ಗಳ ವಿರುದ್ಧ ವಿಶೇಷ ಅಭಿಯಾನ ನಡೆಸುತ್ತಿದ್ದೇವೆ. ಈ ಕಾರ್ಯಾಚರಣೆಯಲ್ಲಿ ಸತೀಶ್ ಗೋನಾನ ಚಲನವಲನಗಳ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ಈ ಮಾಹಿತಿ ಮೇರೆಗೆ ಪಟ್ಟಣದ ಪೊಲೀಸರು ಆತನನ್ನು ಬಂಧಿಸಿ, ಹೇಗೋ ಠಾಣೆಗೆ ಕರೆತಂದರು. ನಂತರ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಇಬ್ಬರು ಸ್ಥಳ ಮಹಜರಿಗೆ ಹೋದರು. ಈ ವೇಳೆ ರೌಡಿಶೀಟರ್ ಶೀಟರ್, ಪಿಎಸ್‌ಐ ವಿನೋದ್ ಅವರ ತಲೆಗೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿ, ಪರಾರಿಯಾಗಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಪಿಎಸ್‌ಐ ಹಾಗೂ ರೌಡಿಶೀಟರ್ ಸತೀಶ್ ಗೋನಾ ಗಾಯಗೊಂಡಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.

ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ಮೂವರ ಬಂಧನ!

ಬಾರಾಮುಲ್ಲಾ, ನ. ೨೬: ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಯ್ಬಾದ ಉಗ್ರರೊಂದಿಗೆ ನಂಟು ಹೊಂದಿದ್ದ ಮೂವರು ಸಹಚರರನ್ನು ಬಾರಾಮುಲ್ಲಾ ಜಿಲ್ಲೆಯಲ್ಲಿ ಬಂಧಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಬಂಧಿತರಿAದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನವೆಂಬರ್ ೨೫ ರಂದು ೧೩ ಎಸ್‌ಐಕೆಎಚ್‌ಎಲ್‌ಐ, ೧೮೫ ಬಿಎನ್ ಬಿಎಸ್‌ಎಫ್ ಮತ್ತು ಬಾರಾಮುಲ್ಲಾ ಪೋಲೀಸರು ನಡೆಸಿದ ಜಂಟಿ ನಾಕಾ ತಪಾಸಣೆ ಮತ್ತು ಗಸ್ತು ತಿರುಗುತ್ತಿದ್ದಾಗ, ಕಮಾಲ್‌ಕೋಟೆಯಿಂದ ಎನ್‌ಎಚ್‌ಡಬ್ಲ್ಯೂ ಕಡೆಗೆ ಬ್ಯಾಗ್‌ಗಳನ್ನು ಹೊತ್ತುಕೊಂಡು ಬರುತ್ತಿದ್ದ ಇಬ್ಬರು ಶಂಕಿತ ವ್ಯಕ್ತಿಗಳನ್ನು ಗುರುತಿಸಿದ್ದಾರೆ. ಅವರನ್ನು ಮಡಿಯನ ಕಮಾಲಕೋಟೆಯ ಖಾಂಡೆ ನಿವಾಸಿ ಅಜೀಂ ಖಂಡೆ ಅವರ ಪುತ್ರ ಜಮೀರ್ ಅಹ್ಮದ್ ಖಾಂಡೆ ಮತ್ತು ಮಡಿಯನ್ ಕಮಲಕೋಟೆ ನಿವಾಸಿ ಅಬ್ದುಲ್ ಮಜೀದ್ ಖಂಡೆ ಪುತ್ರ ಮೊಹಮ್ಮದ್ ನಸೀಮ್ ಖಂಡಯ್ಯ ಎಂದು ಗುರುತಿಸಲಾಗಿದೆ. ಶೋಧದ ವೇಳೆ ಇವರಿಂದ ಮೂರು ಚೈನೀಸ್ ಗ್ರೆನೇಡ್ ಹಾಗೂ ೨.೫ ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ, ಉರಿ ಪೊಲೀಸ್ ಠಾಣೆಯಲ್ಲಿ ಸಂಬAಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಚೀನಾದಲ್ಲಿ ಹೆಚ್೯ಎನ್೨ ಉಲ್ಬಣ: ಚಿಕಿತ್ಸೆ ಸನ್ನದ್ಧತೆ ಪರಿಶೀಲನೆಗೆ ಸೂಚನೆ

ನವದೆಹಲಿ, ನ. ೨೬: ಚೀನಾದಲ್ಲಿ ಉಲ್ಬಣವಾಗಿರುವ ಹೆಚ್೯ಎನ್೨ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಕೂಡಲೇ ಚಿಕಿತ್ಸೆ ಸನ್ನದ್ಧತೆ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಹೆಚ್೯ಎನ್೨ ಸಾಂಕ್ರಾಮಿಕ ಉಲ್ಬಣದ ಬೆನ್ನಲ್ಲೇ ಚೀನಾದಲ್ಲಿ ಉಸಿರಾಟ ಸಂಬAಧಿ ಅನಾರೋಗ್ಯ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಪ್ರಕರಣಗಳು ಗಣನೀಯವಾಗಿ ಏರಿಕೆ ಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಅಂತಹ ಪರಿಸ್ಥಿತಿ ಎದುರಾದರೆ ಅದನ್ನು ನಿರ್ವಹಿಸುವ ನಿಟ್ಟಿನಲ್ಲಿ ಚಿಕಿತ್ಸೆಗೆ ಬೇಕಾದ ತಯಾರಿ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರದ ಆರೋಗ್ಯ ಸಚಿವಾಲಯ ಮುಂದಾಗಿದೆ. ರಾಜ್ಯ ಸರ್ಕಾರ ಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸನ್ನದ್ಧತೆಯ ಕ್ರಮಗಳನ್ನು ತಕ್ಷಣವೇ ಪರಿಶೀಲಿಸಬೇಕು ಎಂದು ಅದು ಸಲಹೆ ನೀಡಿದೆ.