ಮಡಿಕೇರಿ, ನ. ೨೬: ಜನಾಂಗಗಳ ನಡುವಿನ ಸಂಸ್ಕೃತಿ, ಆಚಾರ-ವಿಚಾರದಲ್ಲಿ ಬದಲಾವಣೆಗಳಿರಬಹುದು. ಆದರೆ, ದೇಶದ ರಕ್ಷಣೆ ವಿಚಾರ ಎಂದು ಬಂದರೆ ‘ನಾವೆಲ್ಲ ಒಂದು, ನಾವೆಲ್ಲ ಬಂಧು' ಎಂಬ ಮನಸ್ಥಿತಿ ಹೊಂದಬೇಕು ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದರು.

ನಗರದ ಕಾವೇರಿ ಹಾಲ್ ಸಭಾಂಗಣದಲ್ಲಿ ಮಡಿಕೇರಿ ಹಿಂದೂ ಮಲಯಾಳಿ ಸಂಘದ ವತಿಯಿಂದ ಓಣಂ ಹಬ್ಬದ ಅಂಗವಾಗಿ ಆಯೋಜಿಸಿದ್ದ 'ಓಣಾಘೋಷಂ-ಓಣA ಸದ್ಯ' ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿದೆ. ಸಂವಿಧಾನ ಮೂಲಕ ಆಡಳಿತ ವ್ಯವಸ್ಥೆ ಕೆಲಸ ಮಾಡುತ್ತಿದೆ. ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸಬೇಕು. ದೇಶದ ಏಕತೆ, ಅಖಂಡತೆ, ಸಮಗ್ರತೆ ಕಾಪಾಡುವುದು ನಮ್ಮ ಆದ್ಯತೆಯಾಗಬೇಕು. ದೇಶದ ರಕ್ಷಣೆಗೆ ಪಣ ತೊಡಬೇಕು ಎಂದು ಕರೆ ನೀಡಿದ ಅವರು, ಸಂಘಟನಾತ್ಮಕವಾಗಿದ್ದರೆ ಮಾತ್ರ ನಮ್ಮ ಬೇಡಿಕೆಗಳು ಈಡೇರಿಕೆ ಸಾಧ್ಯ. ಭಾರತ ವಿವಿಧತೆಯಲ್ಲಿ ಏಕತೆ ಕಾಣುವ ದೇಶ. ಆದರೆ, ಹಿಂದೂಗಳನ್ನು ದಮನ ಮಾಡುವ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಈ ಬಗ್ಗೆ ಜಾಗೃತಗೊಂಡು ಒಂದಾಗಬೇಕು. ಆಚಾರ-ವಿಚಾರ ಉಳಿಸಿ, ಬೆಳೆಸಬೇಕು. ಮತಾಂತರ ಆಮಿಷಗಳಿಗೆ ಬಲಿಯಾಗಬಾರದು ಎಂದು ಒತ್ತಿ ಹೇಳಿದರು.

ಮಾಜಿ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಮೊದಲು ಗೌರವಿಸಬೇಕು. ಆಗಿದ್ದ ಮಾತ್ರ ಜನಾಂಗದ ಅಸ್ತಿತ್ವ ಉಳಿಯುತ್ತದೆ. ಕೊಡಗಿಗೂ ಕೇರಳಕ್ಕೂ ಅವಿನಾಭಾವ ಸಂಬAಧವಿದೆ. ಧಾರ್ಮಿಕ ವಿಚಾರದಲ್ಲಿ ಕೊಡಗಿನೊಂದಿಗೆ ಕೇರಳ ಜನರು ಬೆರೆತಿದ್ದಾರೆ. ಕೊಡವ ಭಾಷೆಯಲ್ಲೂ ಮಲಯಾಳ ಭಾಷೆ ಪದಗಳಿವೆ. ಇದು ಮಲಯಾಳಿ-ಕೊಡವರ ಅನ್ಯೋನ್ಯಕ್ಕೆ ಸಾಕ್ಷಿ. ಆರ್ಥಿಕ, ಶೈಕ್ಷಣಿಕರಾಗಿ ಸಬಲರನ್ನಾಗಿ ಮಾಡಲು ಸಂಘ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ನಗರಸಭಾ ಸದಸ್ಯೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಒಗ್ಗಟ್ಟು ಮನೋಭಾವದಿಂದ ಸುಭದ್ರ ಭಾರತ ನಿರ್ಮಾಣ ಸಾಧ್ಯ. ಸಂಘಟನೆಗಳ ಮೂಲಕ ಜನಾಂಗದ ಆಚಾರ-ವಿಚಾರ ಉಳಿಸಿ, ಬೆಳೆಸುವ ಕೆಲಸವಾಗುತ್ತದೆ ಎಂದರು.

ನಗರಸಭಾ ಮಾಜಿ ಸದಸ್ಯ ಕೆ.ಎಂ.ಬಿ.ಗಣೇಶ್, ಮಲಯಾಳಿಗರು ಸಹಕಾರ ಸಂಘ ಸ್ಥಾಪನೆ ಮೂಲಕ ಆರ್ಥಿಕ ಸದೃಢಕ್ಕೆ ಮುಂದಾಗಬಹುದು. ಜೊತೆಗೆ ಮಲಯಾಳಿ ಸಮುದಾಯ ಭವನ ನಿರ್ಮಾಣಕ್ಕೆ ಸರಕಾರದ ಗಮನ ಸೆಳೆಯುವಂತೆ ಸಲಹೆ ನೀಡಿದರು.

ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಓಣಂ ನೆಪದಲ್ಲಿ ಜನಾಂಗ ಬಾಂಧವರು ಸೇರಲು ವೇದಿಕೆಯಾಗಿದೆ. ಸಂಘ ಸ್ಥಾಪನೆಯಾಗಿ ಹಲವು ವರ್ಷ ಕಳೆದಿದೆ. ವರ್ಷದಿಂದ ವರ್ಷಕ್ಕೆ ಕಾರ್ಯಚಟುವಟಿಕೆ ಹೆಚ್ಚಾಗಿದೆ. ವರ್ಷಕ್ಕೆ ೧೪ ಕಾರ್ಯಕ್ರಮ ನಡೆಸಲಾಗುತ್ತದೆ. ಒಗ್ಗೂಡುವಿಕೆ ಸಂಘದ ಉದ್ದೇಶ. ಮರಣನಿಧಿಯನ್ನು ಸಂಘದ ಸದಸ್ಯರ ಕುಟುಂಬಕ್ಕೆ ಮಾತ್ರ ನೀಡಲು ನಿರ್ಧರಿಸಲಾಗಿದೆ. ಜನಾಂಗದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಓಣಂ ಆಚರಣಾ ಸಮಿತಿ ಅಧ್ಯಕ್ಷ ಟಿ.ಆರ್. ವಾಸುದೇವ್, ನಗರಸಭಾ ಮಾಜಿ ಸದಸ್ಯ ಉಣ್ಣಿಕೃಷ್ಣ, ಮಾಜಿ ಸೈನಿಕ, ಕಾವೇರಿ ಗ್ರೂಪ್ ವ್ಯವಸ್ಥಾಪಕ ಗಣೇಶ್, ಮುತ್ತಪ್ಪ ದೇವಾಲಯ ಅಧ್ಯಕ್ಷ ಟಿ.ಕೆ. ಸುಧೀರ್, ಖಜಾಂಜಿ ಕೆ.ಟಿ. ಉತ್ತಮ್ಮನ್ ಹಾಜರಿದ್ದರು.

ದೀಪ್ತಿ ಧರ್ಮೇಂದ್ರ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಕೆ.ವಿ. ಧರ್ಮೇಂದ್ರ ಸ್ವಾಗತಿಸಿ, ಅಶೋಕ್ ವಂದಿಸಿದರು. ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಆಕರ್ಷಕ ಮೆರವಣಿಗೆ: ನಗರದ ಗಾಂಧಿಮೈದಾನದಲ್ಲಿ ಮುಖ್ಯಬೀದಿಯಲ್ಲಿ ಸಾಗಿದ ಮೆರವಣಿಗೆ ಆಕರ್ಷಕವಾಗಿ ಮೂಡಿಬಂತು. ಸಾಂಪ್ರದಾಯಿಕ ಉಡುಗೆ ತೊಟ್ಟು ಪುರುಷ -ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಜೊತೆಗೆ ಪುಟಾಣಿಗಳು ಛದ್ಮವೇಷ ಧರಿಸಿ ಗಮನಸೆಳೆದರು.

ಮೆರವಣಿಗೆಯಲ್ಲಿ ವಿಶೇಷವಾಗಿ ಸಂವಿಧಾನ ಪೀಠಿಕೆ ಇರುವ ರಥ ಸಾಗಿತು. ಇದರೊಂದಿಗೆ ಕೇರಳದ ಚಂಡೆ ವಾದ್ಯ ಆಕರ್ಷಕವಾಗಿತ್ತು. ಕಾವೇರಿ ಹಾಲ್‌ನಲ್ಲಿ ಮಹಿಳೆಯರು ರಚಿಸಿದ್ದ ಹೂವಿನ ರಂಗೋಲಿಗಳು (ಪೂಕೊಳಂ) ಜನಮನ ಸೆಳೆದವು.

ಸಾಂಸ್ಕೃತಿಕ ಕಾರ್ಯಕ್ರಮ - ಪ್ರತಿಭಾ ಪುರಸ್ಕಾರ: ಕಾರ್ಯಕ್ರಮದ ಅಂಗವಾಗಿ ಮಹಿಳೆಯರು, ಮಕ್ಕಳಿಂದ ಮೂಡಿಬಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು. ಕೇರಳದ ಸಾಂಪ್ರದಾಯಕ ನೃತ್ಯಗಳು ಮೂಡಿಬಂದವು. ಇದೇ ಸಂದರ್ಭ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಸಬ್ ಜೂನಿಯರ್ ಹಾಕಿ ತಂಡ ಪ್ರತಿನಿಧಿಸಿದ ತೃಪ್ತ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಂದಿ ಓಣಂ ವಿಶೇಷ ಬೋಜನ ಸವಿದರು.