ಕೊಡಗು ಜಿಲ್ಲೆಯ ಪ್ರಮುಖ ಮೂರು ಹಬ್ಬಗಳಲ್ಲಿ ಪುತ್ತರಿ ಹಬ್ಬವೂ ಒಂದು. ಮೊದಲ ಹಬ್ಬ ಕೈಲುಪೋದು ಗದ್ದೆಗಳ ಆರಂಭದ ಕೆಲಸಗಳನ್ನು ಮುಗಿಸಿದ ಆನಂತರ ಬರುವ ಹಬ್ಬವಾದರೆ ಪುತ್ತರಿ ಹಬ್ಬವು ಸುಗ್ಗಿ ಹಬ್ಬಗಳಂತೆ ಕೃಷಿಯ ಫಸಲುಗಳನ್ನು ಕಟಾವು ಮಾಡುವ ಮೊದಲು ನಡೆಸುವ ಹಬ್ಬ. ಪುದಿಯ ಅರಿ ಎನ್ನುವ ಮಲೆಯಾಳಮ್ ಮೂಲದ ಈ ಪದವು ಅಪಂಭ್ರAಶ ಗೊಂಡು ಹುತ್ತರಿಯಾಗಿ ಕನ್ನಡಿಗರ ಬಾಯಿಯಲ್ಲಿ ಮಾರ್ಪಟ್ಟಿತ್ತೆಂಬುದು ಭಾಷಾಪಂಡಿತರ ಅಂಬೋಣವಾದರೂ ಕೊಡಗಿನ ಸಂಪ್ರದಾಯಸ್ಥ ಹಿರಿಯ ರಲ್ಲಿ ಈಗಲೂ ಇದು ಪುತ್ತರಿಯಾಗಿಯೇ ಉಳಿದಿದೆ. ಈ ಸಮಯದಲ್ಲಿ ಗದ್ದೆಗಳಲ್ಲಿ ನೆಟ್ಟಿದ್ದ ಭತ್ತದ ಪೈರುಗಳು ಬೆಳೆದು ಕಟಾವಿಗೆ ಸಿದ್ಧವಾಗಿರುತ್ತವೆ. ಮಳೆರಾಯನೂ ತನ್ನ ಆರ್ಭಟವನ್ನು ಮುಗಿಸಿ ಮೌನವನ್ನು ತಾಳುತ್ತಾನಲ್ಲದೆ ಕಾಫಿ ತೋಟಗಳಲ್ಲಿ ಕಾಫಿ ಹಣ್ಣುಗಳೂ ನಿಧಾನವಾಗಿ ಹಸಿರಿನಿಂದ ಕೆಂಪುಬಣ್ಣಕ್ಕೆ ತಾಳುತ್ತ ಕಾಫಿಯು ಕೊಯ್ಲಿಗೆ ಬಂದಿರುವ ಸೂಚನೆಯನ್ನು ಕೊಡುತ್ತಿರುತ್ತದೆ. ಹೀಗಾಗಿ ರೈತಾಪಿ ಜನರು ಭತ್ತದ ಮತ್ತು ಕಾಫಿಯ ಕಣ ಗಳನ್ನು ಶುಚಿಗೊಳಿಸಿ ಕಟಾವಿಗೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಪರವೂರಿನಲ್ಲಿರುವ ತಮ್ಮ ಬಂಧು ಬಾಂಧವರನ್ನು ಸಹ ಈ ಹಬ್ಬದ ಆಚರಣೆಗಾಗಿ ಆತ್ಮೀಯವಾಗಿ ಆಹ್ವಾನಿಸುವರು.
ಹುತ್ತರಿ ಹಬ್ಬವನ್ನು ಆಚರಿಸುವುದಕ್ಕೆ ವಾರಕ್ಕೂ ಮುನವೇ ಬಹುತೇಕ ಎಲ್ಲರೂ ತಮ್ಮ ಮನೆಗಳನ್ನು ನೂತನ ವಧುವಿನಂತೆ ಅಲಂಕರಿಸುವರು. ಹೊಸದಾಗಿ ಸುಣ್ಣ-ಬಣ್ಣವನ್ನು ಹೊಡೆಯುವುದು, ಹಳೆಯ ಮನೆಯಾದಲ್ಲಿ ಅದಕ್ಕಿರುವ ಸಣ್ಣಪುಟ್ಟ ದುರಸ್ತಿಗಳನ್ನು ಮಾಡುವುದು ಮೊದಲಾದ ಕೆಲಸಗಳಲ್ಲಿ ತೊಡಗಿಕೊಳ್ಳುವರು. ಕದಿರು ತೆಗೆಯುವ ದಿವಸ ಪಾತಃಕಾಲದಲ್ಲಿ ಮನೆಯ ಎದುರಿನ ಅಂಗಳವನ್ನು ಗುಡಿಸಿ, ಸೆಗಣಿಯಿಂದ ಸಾರಿಸಿ, ಅಲ್ಲಿರುವ ತುಳಸಿ ಗಿಡದೆದುರು ರಂಗೋಲಿಯನ್ನು ಹಾಕುತ್ತಾರೆ. ಆ ರಂಗೊಲಿಯ ಮೇಲೆ ಹೊಸ ಚಾಪೆಯನ್ನಿರಿಸಿ ಅದರಲ್ಲಿ ಕುಕ್ಕೆಯೊಂದನ್ನಿಟ್ಟು ಆ ಕುಕ್ಕೆಯಲ್ಲಿ ಅರಳಿ, ಮಾವು, ಹಲಸು, ಗೇರು ಮತ್ತು ಕುಂಬಳಿ ಎಲೆಗಳನ್ನಿರಿಸುತ್ತಾರೆ. ಈ ಎಲೆಗಳನ್ನು ಕಟ್ಟಲು ಅಚ್ಚನಾರು ಎನ್ನುವ ಬಳ್ಳಿಯ ಹಗ್ಗವನ್ನೂ ಇರಿಸಲಾಗುತ್ತದೆ. ಗದ್ದೆಯಲ್ಲಿ ಕತ್ತರಿಸಿ ತೆಗೆದ ಕದಿರನ್ನು ಈ ಐದು ಎಲೆಗಳನ್ನು ಸುರುಳಿಯಾಕಾರವಾಗಿ ಮಾಡಿ, ಅದನ್ನು ಅಚ್ಚನಾರು ಹಗ್ಗದಿಂದ ಕಟ್ಟಲಾಗುತ್ತದೆ. ಕುಟುಂಬದ ಹಿರಿಯರು ದೇವಸ್ಥಾನದ ಗದ್ದೆಗಳಲ್ಲಿ ಅಥವಾ ತಮ್ಮ ಸ್ವಂತ ಗದ್ದೆಗಳಲ್ಲಿ ಕದಿರನ್ನು ಕತ್ತರಿಸಿದ ಅನಂತರ ಇತರರೂ ಕದಿರನ್ನು ಕುಯ್ಯುತ್ತಾರೆ. ‘ಪೊಲಿಪೊಲಿಯೇ ದೇವ’ ಎಂದು ಗಟ್ಟಿಯಾಗಿ ದೇವರನ್ನು ಸ್ಮರಿಸುತ್ತಾ ಕದಿರನ್ನು ತರಲಾಗುವುದು. ಈ ಕದಿರನ್ನು ನೆರೆಕಟ್ಟಿ ಮನೆಯ ಕಂಬ, ದೇವರಕೋಣೆ, ಪತ್ತಾಯ, ಬಾವಿ ಕಣಗಳಲ್ಲಿ ಕಟ್ಟುವುದೇ ಅಲ್ಲದೆ ತಮ್ಮ ವಾಹನಗಳಲ್ಲೂ ಇವನ್ನು ಕಟ್ಟುತ್ತಾರೆ. ಇದೇ ಸಂದರ್ಭದಲ್ಲಿ ಉತ್ಸಾಹೀ ತರುಣರು ಪಟಾಕಿಗಳನ್ನು ಸಿಡಿಸಿ ತಮ್ಮ ಪುತ್ತರಿ ಹಬ್ಬದ ಕಳೆಯನ್ನು ಏರಿಸಿ ಬಿಡುತ್ತಾರೆ. ಪೊಳದು ಕಳೆದ ಅನಂತರ ಆ ಗ್ರಾಮದ ಎಲ್ಲ ಮನೆಗಳಿಗೂ ಹೋಗಿ ದುಡಿ ಬಾರಿಸುತ್ತಾ ‘ಮನೆ ಪಾಡವೋ’ ಎನ್ನುವ ದೇವರ ಹಾಡನ್ನು ಹಾಡುವ ಕ್ರಮವಿದೆ. ಆನಂತರದ ದಿನಗಳಲ್ಲಿ ಊರು ಕೋಲು, ಕೇರಿ ಕೋಲು ಎಂಬ ಕೋಲು ಹೊಡೆಯುತ್ತಾ ಹಾಡುವ ಪದ್ಧತಿಗಳಿವೆ.
- ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು ಮೊ. ೯೧೪೧೩ ೯೫೪೨೬.