ಕುಶಾಲನಗರ, ನ. ೨೫:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತನ್ನ ಪ್ರಯಾಣಿಕರ ಸುರಕ್ಷತೆ ಕಾಪಾಡುವ ಹಾಗೂ ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕ್ಷೇತ್ರ ಶಾಸಕರ ಸೂಚನೆಯಂತೆ ಯೋಜನೆಯೊಂದನ್ನು ರೂಪಿಸಿದ್ದು ಪ್ರಯಾಣಿಕರು ತೆರಳುವ ಕಾಲು ದಾರಿಯಲ್ಲಿ ಮೇಲ್ಛಾವಣಿ ಕಾಮಗಾರಿ ಕೈಗೆತ್ತಿಕೊಂಡಿದೆ. ಕುಶಾಲನಗರ ಸರ್ಕಾರಿ ಬಸ್ ನಿಲ್ದಾಣ ಆವರಣದ ಹೊರಭಾಗದಲ್ಲಿ ಸ್ಥಳೀಯ ಕಾವೇರಿ ಪರಿಸರ ರಕ್ಷಣಾ ಬಳಗದ ಮೂಲಕ ಹಲವು ಮರಗಳು ಬೆಳೆದು ನಿಂತಿದ್ದು ಅದರಲ್ಲಿ ನೂರಾರು ಪಕ್ಷಿಗಳು ನೆಲೆ ಕಂಡಿವೆ. ನೂರಾರು ಪಕ್ಷಿಗಳು ವಲಸೆ ಬಂದು ಮರಗಳಲ್ಲಿ ಗೂಡು ಕಟ್ಟಿ ಕೆಲವು ಸಮಯ ನಂತರ ಮರಿಗಳೊಂದಿಗೆ ಹಿಂತಿರುಗುವುದು ವಾಡಿಕೆ.

ಈ ಅವಧಿಯಲ್ಲಿ ಪಕ್ಷಿಯ ಗಲೀಜು ಬಸ್ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರ ಮೇಲೆ ಬೀಳುತ್ತಿದ್ದು, ಈ ಸಂಬAಧ ಮರಗಳನ್ನು ತೆರವುಗೊಳಿಸಲು ಕೆಲವರು ಅರಣ್ಯ ಇಲಾಖೆಗೆ ಮನವಿ ಕೂಡ ಸಲ್ಲಿಸಿದ್ದರು. ಇದನ್ನು ಗಮನಿಸಿದ ಪರಿಸರ ಪ್ರೇಮಿಗಳು ಮರಗಳನ್ನು ಮತ್ತು ಪಕ್ಷಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಿಂದ ಸಂಬAಧಿಸಿದ ಇಲಾಖೆಗಳಿಗೆ ನೋಟೀಸ್ ನೀಡಿ ಮರಗಳನ್ನು ತೆರವುಗೊಳಿಸಲು ತಡೆಯೊಡ್ಡಿ ಪಕ್ಷಿಗಳನ್ನು ಸಂರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಈ ನಡುವೆ ಪ್ರಯಾಣಿಕರ ಸಂಕಷ್ಟಗಳನ್ನು ಅರಿತ ಬಳಗದ ಸಂಚಾಲಕ ಚಂದ್ರಮೋಹನ್ ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಮಂಥರ್ ಗೌಡ ಅವರಿಗೆ ಮರ ಗಿಡ ಪಕ್ಷಿಗಳನ್ನು ಸಂರಕ್ಷಿಸುವAತೆ ಮೌಖಿಕ ಮನವಿ ಸಲ್ಲಿಸಿದ್ದರು.

ತಕ್ಷಣ ಸ್ಪಂದಿಸಿದ ಶಾಸಕರು ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗದ ವಿಭಾಗಿಯ ಅಧಿಕಾರಿ ಜಯಕರ್ ಶೆಟ್ಟಿ ಅವರಿಗೆ ಪ್ರಯಾಣಿಕರ ಮೇಲೆ ಹಕ್ಕಿಗಳ ಗಲೀಜು ಬೀಳುವುದನ್ನು ತಪ್ಪಿಸಲು ಮೇಲ್ಛಾವಣಿ ನಿರ್ಮಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಇದೀಗ ಬಸ್ ನಿಲ್ದಾಣದಿಂದ ಮುಖ್ಯರಸ್ತೆ ತನಕ ಮೇಲ್ಛಾವಣಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗಿಯ ನಿಯಂತ್ರಕರಾದ ಜಯಕರ ಶೆಟ್ಟಿ ತಿಳಿಸಿದ್ದಾರೆ. ಈ ಮೂಲಕ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ದೊರೆತಿದ್ದು ಇನ್ನೊಂದೆಡೆ ಮರ ಗಿಡಗಳು ಹಾಗೂ ಪಕ್ಷಿಗಳ ಸಂರಕ್ಷಣೆಗೆ ಶಾಸಕರ ಸೂಚನೆ ಮೇರೆಗೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಅವಕಾಶ ಕಲ್ಪಿಸಿದಂತಾಗಿದೆ.