ಮಡಿಕೇರಿ, ನ. ೨೪: ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಎನ್.ಎಸ್.ವಿ. ಪಾಕ್ಷಿಕ ಕಾರ್ಯಕ್ರಮ ಡಿಸೆಂಬರ್ ೪ ರವರೆಗೆ ನಡೆಯಲಿದೆ.
ತಾ. ೨೭ ರವರೆಗೆ “ಅರಿವು ಮೂಡಿಸುವ ಸಪ್ತಾಹ” ಹಮ್ಮಿಕೊಂಡಿದ್ದು, ಇದರಲ್ಲಿ ಪುರುಷ ಗರ್ಭ ನಿರೋಧಕ ಬಳಕೆ (ಕಾಂಡೋಮ್, ವ್ಯಾಸೆಕ್ಟಮಿ) ಬಯಸುವ ದಂಪತಿಗಳನ್ನು ಗುರುತಿಸಿ ಅರಿವು ಮೂಡಿಸುವುದು ಹಾಗೂ ನೋಂದಣಿಯನ್ನು ಪ್ರತಿ ತಾಲೂಕಿನ ಆರೋಗ್ಯ ನಿರೀಕ್ಷಕ/ ಪ್ರಾ.ಆ. ಸುರಕ್ಷಾಧಿಕಾರಿಗಳು ಮಾಡುತ್ತಾರೆ. ಇದರಲ್ಲಿ ಅರಿವು ಮೂಡಿಸುವ ಚಟುವಟಿಕೆಗಳ ಮುಖಾಂತರ ಪುರುಷ ಸಂತಾನಹರಣ ಶಸ್ತçಚಿಕಿತ್ಸೆ ಮಾಡಿಸಲು ಇಚ್ಚಿಸುವವರನ್ನು ಪಿಯರ್ ನೆಟ್ವರ್ಕ್ಗಳ ಮುಖಾಂತರ ಗುರುತಿಸಬೇಕು.
ಸಮುದಾಯದಲ್ಲಿ ಎನ್.ಎಸ್.ವಿ. ಸೇವೆಗಳನ್ನು ಉತ್ತೇಜಿಸುವಲ್ಲಿ ಪಾಲುದಾರ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವುದಾಗಿದೆ. ಎನ್ಎಸ್ವಿ ಪಾಕ್ಷಿಕದಲ್ಲಿ ತಾ. ೨೮ ರಿಂದ ಡಿಸೆಂಬರ್-೪ರವರೆಗೆ ಸೇವಾ ಸಪ್ತಾಹದ ಹಂತದ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಜಿಲ್ಲೆಯಲ್ಲಿನ ಜಿಲ್ಲಾ ಮಟ್ಟದ ಆಸ್ಪತ್ರೆ ಮತ್ತು ಪ್ರತಿ ತಾಲೂಕಿಗೆ ಒಂದು ತಾಲೂಕು ಆಸ್ಪತ್ರೆ-ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಎನ್.ಎಸ್.ವಿ ಸೇವೆ ಒದಗಿಸಲಾಗುವುದು.
ಶಸ್ತçಚಿಕಿತ್ಸಾ ಸೇವೆಗಳಿಗೆ ಫಲಾನುಭವಿಗಳ ಪೂರ್ವ ನೋಂದಣಿಯನ್ನು ಕೈಗೊಂಡು ಶಸ್ತçಚಿಕಿತ್ಸೆ ಮಾಡಿಸಲಾಗುವುದು. ಅಲ್ಲದೇ ತಾಲೂಕು ಮಟ್ಟದಲ್ಲಿ ಎನ್.ಎಸ್.ವಿ. ಶಸ್ತçಚಿಕಿತ್ಸಾ ಶಿಬಿರ ನಡೆಸಲಾಗುವುದು. ಅಲ್ಲದೇ ಪಾಲುದಾರ ಸಂಸ್ಥೆಗಳು ತಮ್ಮ ಸ್ವಂತ ಕ್ಲಿನಿಕ್-ಪಾಂಚೈಸಿ ಕ್ಲಿನಿಕ್ಗಳಲ್ಲಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ತಮ್ಮ ಸಹಕಾರ ನೀಡಲು ಕ್ರಮಕೈಗೊಳ್ಳುವುದು. ಎನ್.ಎಸ್.ವಿ ಪಾಕ್ಷಿಕ ಸಮಯದಲ್ಲಿ ಅರ್ಹ ದಂಪತಿಗಳಿಗೆ ಕುಟುಂಬ ಕಲ್ಯಾಣ ವಿಧಾನಗಳ ಬಗ್ಗೆ ಆಶಾ-ಪ್ರಾ.ಆ.ಸುರಕ್ಷಾಧಿಕಾರಿಗಳು-ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಪ್ತ ಸಮಾಲೋಚನೆ ಮೂಲಕ ಅರಿವು ಮೂಡಿಸಿ ಶಸ್ತçಚಿಕಿತ್ಸೆ ಮಾಡಿಸಿಕೊಳ್ಳಲು ಮನವೊಲಿಸಲಾಗುವುದು.
ಪ್ರಮುಖ ಸ್ಥಳಗಳಲ್ಲಿ ಬ್ಯಾನರ್ ಮತ್ತು ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗುವುದು. ಮೊಬೈಲ್ ಪ್ರಚಾರ ವ್ಯಾನ್ಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು. ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಕಾಂಡೋಮ್ ಬಾಕ್ಸ್ಗಳನ್ನು ಸ್ಥಾಪಿಸಲಾಗುವುದು. ತಾ. ೨೮ ರಿಂದ ಡಿಸೆಂಬರ್ ೪ ರವರೆಗೆ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಶಿಬಿರ ನಡೆಸಿ ಶಸ್ತçಚಿಕಿತ್ಸೆ ಮಾಡಲಾಗುವುದು. ಇದಕ್ಕೆ ಅರ್ಹ ಪುರುಷ ಫಲಾನುಭವಿಗಳು ಸಹಕರಿಸಿ ಶಸ್ತçಚಿಕಿತ್ಸೆ ಮಾಡಿಸಿಕೊಂಡು ತಮ್ಮ ಕುಟುಂಬದ ಆರೋಗ್ಯಾಭಿವೃದ್ಧಿಗೆ ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.