ಜಿ. ರಾಜೇಂದ್ರ

ಮಡಿಕೇರಿ, ನ. ೨೫: ಮಡಿಕೇರಿ ನಗರಸಭೆಯ ಆಡಳಿತ ವ್ಯವಸ್ಥೆ ತೀರಾ ಅಯೋಮಯವಾಗುತ್ತಿದೆ. ಯಾವ ಕೆಲಸವೂ ಆಗುತ್ತಿಲ್ಲ. ನಾಗರಿಕರ ಪರದಾಟ ತಪ್ಪುವಂತಿಲ್ಲ. ಪರಿಸ್ಥಿತಿ ತೀರ ಗಂಭೀರವಾಗಿದೆ. ೨೩೬ ಸಿಬ್ಬಂದಿ ಪೈಕಿ ೬೭ ಜನ ಮಾತ್ರ ಇದ್ದಾರೆ. ಇದರಲ್ಲೂ ಕೆಲವರು ಬೇರೆ ಕಡೆ ಹೆಜ್ಜೆಯಿರಿಸಿದ್ದಾರೆ.

ನಗರದ ನಿರ್ಮಲೀಕರಣಕ್ಕೆ ಅಗತ್ಯವಿರುವ ೧೦೦ ಸಿಬ್ಬಂದಿಗಳ ಪೈಕಿ ೪೦ ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ಸಿಬ್ಬಂದಿಗಳ ನೇಮಕಾತಿ ನೆನೆಗುದಿಗೆ ಬಿದ್ದಿದೆ. ನಾಗರಿಕರು ಆಗಿಂದಾಗ್ಗೆ ನಗರಸಭೆಗೆ ತೆರಳುವುದು, ಮುಖ್ಯವಾಗಿ ಅವರಿಗೆ ಬೇಕಾದ ನಮೂನೆ-೩ ಅನ್ನು ಪಡೆಯುವುದಕ್ಕಾಗಿ. ಇದು ಪ್ರತಿಯೊಂದು ಕೆಲಸಗಳಿಗೂ ಅತ್ಯಗತ್ಯವಾಗಿದೆ. ಆದರೆ, ನಗರಸಭೆಗೆ ದುಬಾರಿ ತೆರಿಗೆ ನೀಡುತ್ತಿರುವ ನಾಗರಿಕರಿಗೆ ಈ ನಮೂನೆ ಕೂಡ ಲಭ್ಯವಾಗುತ್ತಿಲ್ಲ. ಕೊಡುವವರೇ ಇಲ್ಲದಂತಾಗಿದೆ. ನಮೂನೆ ಖಾತೆಯನ್ನು ನೀಡಬೇಕಾದ ೪ ಮಂದಿ ಎಫ್‌ಡಿಸಿ ಪೈಕಿ ೪ ಹುದ್ದೆಯೂ ಖಾಲಿ ಇದೆ. ಹೀಗಾಗಿ ನಾಗರಿಕರು ‘ಬಂದ ದಾರಿಗೆ ಸುಂಕವಿಲ್ಲ’ ಎಂಬAತೆ ಕೆಲಸವಾಗದೆ ವಾಪಸಾಗುತ್ತಿದ್ದಾರೆ. ೭ ಮಂದಿ ಎಸ್‌ಡಿಸಿ ಹುದ್ದೆ ಇದೆ. ಈ ಪೈಕಿ ೩ ಮಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ೪ ಹುದ್ದೆಗಳು ಭರ್ತಿಯಾಗದೆ ಉಳಿದಿವೆ.

ಮಡಿಕೇರಿಯಂತಹ ದಿನದಿಂದ ದಿನಕ್ಕೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ನಗರಕ್ಕೆ ಹಾಗೂ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನವಾಗುತ್ತಿರುವ ಸನ್ನಿವೇಶದಲ್ಲಿ ಮುಖ್ಯವಾಗಿ ಆರೋಗ್ಯ ರಕ್ಷಣೆಗೆ ಅಗತ್ಯವಾದ ಕಾರ್ಯಗಳು ಸಾಗಬೇಕಿವೆ. ಆಶ್ಚರ್ಯವೆಂದರೆ ನಾಲ್ಕು ಮಂದಿ ಆರೋಗ್ಯ ನಿರೀಕ್ಷಕರ ಹುದ್ದೆಯಿದ್ದು, ಈ ನಾಲ್ಕು ಸ್ಥಾನಗಳೂ ಖಾಲಿಯಾಗಿದ್ದು, ನಾಗರಿಕರ ಆರೋಗ್ಯದ ಕುರಿತು ಮುನ್ನೆಚ್ಚರಿಕೆ ಕೈಗೊಳ್ಳುವ ಸಿಬ್ಬಂದಿಗಳೇ ಇಲ್ಲವಾಗಿದೆ.

ಮತ್ತೊಂದೆಡೆ ನಗರದ ರಸ್ತೆಗಳು ಇನ್ನು ಬಾವಿಗಳಾಗಿ ಪರಿವರ್ತನೆಗೊಳ್ಳುವ ದುಸ್ಥಿತಿಗೆ ತಲುಪಿವೆೆ. ಈ ಕುರಿತಾಗಿ ಚಿಂತಿಸುವವರೇ ಇಲ್ಲವಾಗಿದೆ. ಈ ಕಾರ್ಯ ನಿರ್ವಹಿಸಬೇಕಾದರೆ ೫ ಮಂದಿ ಇಂಜಿನಿಯರ್‌ಗಳ ಅಗತ್ಯವಿದೆ. ಆದರೆ, ಸದ್ಯಕ್ಕೆ ಓರ್ವ ಇಂಜಿನಿಯರ್ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಆಡಳಿತ ಮಂಡಳಿಯ ನಿರ್ಲಕ್ಷö್ಯಕ್ಕೆ ಸಾಕ್ಷಿಯೋ ಎಂಬAತೆ ಈತನನ್ನು ಕೂಡ ವರ್ಗಾವಣೆ ಮಾಡಲಾಗಿದೆ. ಇಂಜಿನಿಯರ್ ಇಲ್ಲದ ಈ ನಗರಸಭೆ ಇದ್ದರೇನೂ, ಬಿಟ್ಟರೇನು? ಎನ್ನುವಂತಾಗಿದೆ.

ಕಾರಣ ಕೇಳಿದರೆ ಸಿಬ್ಬಂದಿಗಳ ಉತ್ತರವಿಷ್ಟೆ. ಮಡಿಕೇರಿ ನಗರದಲ್ಲಿ ಕೆಲಸ ಮಾಡಲು ಇಷ್ಟವಿಲ್ಲ. ಆಡಳಿತ ಮಂಡಳಿ ಕಡೆಯಿಂದ ನಿತ್ಯ ಒತ್ತಡವನ್ನು ಸಹಿಸುವುದು ಕಷ್ಟಸಾಧ್ಯ ಎಂಬ ಪ್ರತಿಕ್ರಿಯೆ ಈ ದುರವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಇನ್ನೊಂದೆಡೆ ಈ ಎಲ್ಲಾ ಕಾರ್ಯವನ್ನು ಅಧಿಕೃತವಾಗಿ ನಿರ್ವಹಿಸಬೇಕಾದ ನಗರಸಭಾ ಆಯುಕ್ತರ ಸ್ಥಿತಿಯೂ ಶೋಚನೀಯವಾಗುತ್ತಿದೆ. ‘ಶಕ್ತಿ’ಗೆ ತಿಳಿದುಬಂದAತೆ ಆಯುಕ್ತರು ಈ ಎಲ್ಲಾ ಒತ್ತಡಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ರಜೆ ಹಾಕಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಒಂದೆಡೆ ಸಿಬ್ಬಂದಿ ಕೊರತೆ, ಇನ್ನೊಂದೆಡೆ ಆಡಳಿತ ಮಂಡಳಿಯೊAದಿಗಿನ ಸಮನ್ವಯ ಕೊರತೆ - ಹೀಗೆ ಹತ್ತು ಹಲವಾರು ಗಂಭೀರ ಸಮಸ್ಯೆಗಳಿಂದ ಬೇಸತ್ತು ಆಯುಕ್ತರು ೨ ತಿಂಗಳ ರಜೆ ಬಯಸಿದ್ದರೂ ಜಿಲ್ಲಾಧಿಕಾರಿಯ ಕೋರಿಕೆ ಮೇಲೆ ಅದನ್ನು ಮೊಟಕುಗೊಳಿಸಿದ್ದಾರೆ. ಆಯುಕ್ತರ ಮಟ್ಟದಲ್ಲಿಯೂ ಆಗಿಂದಾಗ ಕೆಲಸ ಕಾರ್ಯಗಳಲ್ಲಿ ಮಧ್ಯಪ್ರವೇಶಿಸುವ ಮೂಲಕ ಒತ್ತಡ (ಮೊದಲ ಪುಟದಿಂದ) ಹೇರುವ ಕಾರ್ಯವೂ ನಡೆಯುತ್ತಿದೆ ಎಂಬ ಆರೋಪವಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಆಯುಕ್ತರಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶವಿಲ್ಲದಂತಾಗಿರುವುದು ಕೂಡ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.

ಮತ್ತೊಂದೆಡೆ ಅಭಿವೃದ್ಧಿ ಪೂರಕವಾಗಬೇಕಾಗಿದ್ದ ನಗರೋತ್ಥಾನದ ಕೋಟಿಗಟ್ಟಲೆ ಹಣ ಕಳೆದ ವಿಧಾನಸಭಾ ಚುನಾವಣೆ ಬಳಿಕ ಬದಲಾದ ರಾಜಕೀಯದಲ್ಲಿ ಹಳೆಯ ಎಲ್ಲಾ ಕ್ರಿಯಾಯೋಜನೆಗಳು ಬದಲಾವಣೆಗೆ ಒಳಪಟ್ಟಿವೆ. ಈ ಹಿಂದೆ ಸಿದ್ಧಪಡಿಸಿದ್ದ ರೂಪುರೇಷೆಗಳು, ಯೋಜನೆಗಳು ಸ್ಥಗಿತಗೊಂಡು ಅದೇ ಹಣವನ್ನು ಹೊಸ ಯೋಜನೆಗಳಾಗಿ ರೂಪಿಸಲು ಪ್ರಯತ್ನ ನಡೆದಿದೆ. ಈ ಹಿನ್ನೆಲೆ ಬಿಜೆಪಿ ಸರಕಾರದ ಅವಧಿಯಲ್ಲಿ ಕೈಗೊಂಡಿದ್ದ ಯೋಜನೆಗಳು ಇದೀಗ ಕಾಂಗ್ರೆಸ್ ಆಡಳಿತದಲ್ಲಿ ಬದಲಾವಣೆಯ ಹಂತದಲ್ಲಿದ್ದು, ಅದು ಕೂಡ ಸಮರ್ಪಕವಾಗಿ ನಿರ್ವಹಿಸಲ್ಪಡದೆ ಕೋಟಿಗಟ್ಟಲೆ ಹಣವೂ ಸದುಪಯೋಗವಾಗದೆ ಸರಕಾರದ ಮಟ್ಟದಲ್ಲಿ ವಾಪಸಾಗುವ ದಿಕ್ಕಿನಲ್ಲಿ ಚಲಿಸುತ್ತಿದೆ.

ರಸ್ತೆ, ಚರಂಡಿ ದುರಸ್ತಿಗಳಿಗೆ ೧೫ನೇ ಆರ್ಥಿಕ ವರ್ಷದ ಯೋಜನೆಯಲ್ಲಿ ಹಣ ಬಿಡುಗಡೆಯಾಗಿದ್ದರೂ ಆ ಬಗ್ಗೆ ತುರ್ತಾದ ನಿರ್ಧಾರಗಳನ್ನು ಕೈಗೊಳ್ಳಲು ಆಡಳಿತ ಮಂಡಳಿ ಗಂಭೀರ ಚಿಂತನೆ ಹರಿಸಿಲ್ಲ. ಈಗಾಗಲೇ ಟೆಂಡರ್ ಪ್ರಕ್ರಿಯೆ ಆಗಬೇಕಾಗಿತ್ತು. ಅದು ಕೂಡ ತೀರ ವಿಳಂಬವಾಗುತ್ತಿದೆ. ಅಲ್ಲದೆ, ಇತ್ತೀಚೆಗೆ ಟೆಂಡರ್ ಕರೆದಾಗಲೂ ಸ್ಥಳೀಯ ಒಂದೆರಡು ಮಂದಿ ಗುತ್ತಿಗೆದಾರರನ್ನು ಬಿಟ್ಟರೆ ಸಮರ್ಥ ಗುತ್ತಿಗೆದಾರರು ಈ ಕೆಲಸಕ್ಕೆ ಟೆಂಡರ್ ನೀಡಲು ಬಾರದಿರುವುದು ಕಂಡುಬAದಿದೆ. ಹೀಗಾಗಿ ಈಗಾಗಲೇ ದಸರಾ ಸಂದರ್ಭ ನಗರದಲ್ಲಿ ಅರ್ಧಂಬರ್ಧ ರಸ್ತೆಗಳ ದುರಸ್ತಿ ಮಾಡಿ ಕಾಟಾಚಾರದ ಕೆಲಸ ಮಾಡಿದಂತೆ ಅಪೂರ್ಣ ಕಾಮಗಾರಿಗಳು ಕಂಡುಬAದಿವೆ. ಮುಂದೆಯೂ ಸಮರ್ಪಕ ಗುತ್ತಿಗೆದಾರರು ಬರದಿದ್ದರೆ ಹಣ ವ್ಯಯವಾಗುವುದೇ ಹೊರತು ಗುಣಮಟ್ಟದ ಕೆಲಸಗಳು ಪೂರ್ಣಗೊಳ್ಳುವುದಿಲ್ಲ.

ನಗರದಲ್ಲಿ ವಿರೋಧ ಪಕ್ಷಗಳ ಸದಸ್ಯರ ಸಂಖ್ಯೆ ಕಡಿಮೆ ಇದೆ. ಇತ್ತೀಚೆಗೆ ಎಸ್.ಡಿ.ಪಿ.ಐ. ಸದಸ್ಯರು ಅಸಹಾಯಕರಾಗಿ ನಗರಸಭಾ ಆಡಳಿತ ಮಂಡಳಿಯನ್ನು ವಿಸರ್ಜಿಸುವಂತೆ ಒತ್ತಾಯಿಸಿರುವುದನ್ನು ನೋಡಿದಾಗ ನಗರಸಭಾ ಸದಸ್ಯರುಗಳೇ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷರು ಕೂಡ ಕಾಮಗಾರಿಗಳ ಬಗ್ಗೆ ಕೇಳುವಾಗ ಒಳಗಿನ ಬಗೆಹರಿಸಲಾಗದ ಸಮಸ್ಯೆಗಳ ನಡುವೆ ಸಿಲುಕಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಅಧ್ಯಕ್ಷರನ್ನು ಪ್ರಶ್ನಿಸಿದಾಗ ಸಮಾಧಾನಕರವಾಗಿಯೇ ಮಾತನಾಡುತ್ತ ಎಲ್ಲವನ್ನೂ ಮಾಡುವುದಾಗಿ ಭರವಸೆಯನ್ನು ಕೊಡುತ್ತಾ ಬಂದಿದ್ದಾರೆ. ಆದರೆ, ಪ್ರಾಯೋಗಿಕವಾಗಿ ನಗರಸಭೆ ಸ್ಥಿತಿ ಅಯೋಮಯವಾಗುತ್ತಿದೆ. ಏಕೆಂದರೆ ಒಂದೆಡೆ ‘ಶಕ್ತಿ’ಗೆ ತಿಳಿದು ಬಂದAತೆ ಅಧ್ಯಕ್ಷರ ಬಣ, ಮತ್ತೊಂದೆಡೆ ಉಪಾಧ್ಯಕ್ಷರ ಬಣ, ಇನ್ನೊಂದೆಡೆ ಸ್ಥಾಯಿ ಸಮಿತಿ ಅಧ್ಯಕ್ಷರ ಬಣಗಳು ಸೆಣಸಾಟ ನಡೆಸುತ್ತಿರುವುದು ಅತಿಶಯೋಕ್ತಿಯಲ್ಲ. ಈ ಹೊಂದಾಣಿಕೆ ಕೊರತೆಯಿಂದಾಗಿ ಮಡಿಕೇರಿಯ ನಾಗರಿಕರು ಬವಣೆಗೀಡಾಗುತ್ತಿದ್ದಾರೆ.

ಈ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಸಾಮರಸ್ಯ ಏರ್ಪಡಿಸುವ ಅಗತ್ಯವಿದೆ. ಸಿಬ್ಬಂದಿಗಳ ಕೊರತೆ ಕುರಿತು ಈಗಾಗಲೇ ಜಿಲ್ಲಾಧಿಕಾರಿಯವರ ಗಮನಕ್ಕೆ ಬಂದಿದೆ ಎಂದು ತಿಳಿದು ಬಂದಿದೆ. ಆದರೆ, ಅವರು ಶೀಘ್ರವಾಗಿ ಸರಕಾರಿ ಮಟ್ಟದಲ್ಲಿ ಸಿಬ್ಬಂದಿಗಳ ನೇಮಕಾತಿಗೆ ಶಿಫಾರಸ್ಸು ಮಾಡಿ ಭರ್ತಿ ಮಾಡಲು ವಿಶೇಷ ಪ್ರಯತ್ನ ನಡೆಸಬೇಕಾಗಿದೆ. ಅಲ್ಲದೆ ಆಡಳಿತ ಮಂಡಳಿ ಕೂಡ ಬಣ ರಾಜಕೀಯ ಮರೆತು ರಾಜ್ಯ ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮಡಿಕೇರಿ ನಗರದ ಗಂಭೀರ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೆ ತಂದು ಸಿಬ್ಬಂದಿಗಳ ನೇಮಕಾತಿ ಹಾಗೂ ಬೆಳೆಯುತ್ತಿರುವ ನಗರಕ್ಕೆ ಹೆಚ್ಚಿನ ಅನುದಾನವನ್ನು ತರಲು ಪ್ರಯತ್ನಿಸಬೇಕಾಗಿದೆ.

ಕಾಮಗಾರಿಗಳ ನಿರ್ವಹಣೆಯಲ್ಲಿ ನಗರಸಭೆಯ ಎಲ್ಲಾ ಸದಸ್ಯರುಗಳು ಕೈಜೋಡಿಸಿ ತಮ್ಮನ್ನು ಆಯ್ಕೆ ಮಾಡಿದ ನಾಗರಿಕರಿಗೆ ಉತ್ತಮ ಕಾರ್ಯಗಳ ಮೂಲಕ ಕೃತಜ್ಞತೆ ಸಲ್ಲಿಸುವ ಅಗತ್ಯತೆ ಇದೆ ಎಂದು ಈ ಮೂಲಕ ಜ್ಞಾಪಿಸಲಾಗುತ್ತಿದೆ.