ಶನಿವಾರಸಂತೆ, ನ. ೨೪: ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಘಟಕವನ್ನು ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಘಾಟಿಸಲಾಗಿದ್ದು ತಡೆಗೋಡೆ ನಿರ್ಮಾಣವಾಗುವವರೆಗೆ ಸಾರ್ವಜನಿಕರಲ್ಲಿ ತಾಳ್ಮೆ ಅಗತ್ಯವಾಗಿದೆ. ಸಿಬ್ಬಂದಿ ಕೊರತೆ ನೀಗಿ, ಸಂಬಳ ನೀಡಿದರೆ ಕೆಲಸಗಾರರು ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ. ಶೀಘ್ರ ತಡೆಗೋಡೆ ಕಾಮಗಾರಿ ನಿರ್ಮಾಣವಾದರೆ ತ್ಯಾಜ್ಯ ವಿಲೇವಾರಿ ಸುಗಮ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಹೇಳಿದರು.

ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ ಮೊದಲ ಅಂತಸ್ತಿನ ವಾಣಿಜ್ಯ ಮಳಿಗೆಗಳು, ಬಿ.ಎಸ್.ಎನ್.ಎಲ್. ಕಚೇರಿ ಪಕ್ಕದಲ್ಲಿ ನಿರ್ಮಿಸಿರುವ ಪಂಚಾಯಿತಿ ಮಳಿಗೆ ಹಾಗೂ ಗ್ರಾಮ ಪಂಚಾಯಿತಿಯ ವೈಜ್ಞಾನಿಕ ಕಸ ವಿಲೇವಾರಿ ಘಟಕವನ್ನು ಉದ್ಘಾಟಿಸಿ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು

ಪಟ್ಟಣದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ನಿರ್ಮಾಣ ತಡವಾಗಲು ಕಾರಣ ತಿಳಿದಿಲ್ಲ. ಗ್ರಾಮ ಪಂಚಾಯಿತಿ ಜಾಗ ಗುರುತಿಸಿ, ಅನುಮೋದನ ಪತ್ರವನ್ನು ಕೆ.ಎಸ್.ಆರ್.ಟಿ.ಸಿ.ಗೆ ನೀಡಿದಲ್ಲಿ ರೂ.೩೦ ಲಕ್ಷ ವೆಚ್ಚದಲ್ಲಿ ಶೀಘ್ರ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗುತ್ತದೆ. ಹಿಂದಿನ ಆಡಳಿತ ಮಂಡಳಿಗಳ ಪ್ರಯತ್ನದೊಂದಿಗೆ ಪ್ರಸ್ತುತ ಗ್ರಾಮ ಪಂಚಾಯಿತಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಪಂಚಾಯಿತಿಗೆ ಉಪಯೋಗವಾಗುವಂತೆ ಉಪಯೋಗಿಸಬೇಕು. ಉತ್ತಮರಿಗೆ ಮಳಿಗೆಗಳ ಅವಕಾಶ ಕಲ್ಪಿಸಬೇಕು. ಟೆಂಡರ್ ಕರೆಯುವಾಗ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡುವ ಸೂಚನೆ ನೀಡಬೇಕು ಜತೆಗೆ ಬಾಡಿಗೆ ಸದುಪಯೋಗವಾಗಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಶ್ವಾಸದಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಸದಸ್ಯ ಎಸ್.ಎನ್. ರಘು ಮಾತನಾಡಿ, ಸ್ವಾವಲಂಭನೆ ಪ್ರತಿ ಮನುಷ್ಯನ ಆಶಯವಾಗಬೇಕು. ಪಂಚಾಯಿತಿ ಹಣ ಕ್ರೋಢೀಕರಿಸಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗಿದೆ. ಬರುವ ಆದಾಯದಿಂದ ಪಂಚಾಯಿತಿಯ ಸರ್ವಾಂಗೀಣ ಪ್ರಗತಿ ಸಾಧಿಸಬಹುದು. ಯೋಜನೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದರು.

ಸದಸ್ಯ ಎಸ್.ಸಿ. ಶರತ್ ಶೇಖರ್ ಮಾತನಾಡಿ, ವಾಣಿಜ್ಯ ಮಳಿಗೆಗಳ ಉದ್ಘಾಟನೆಯಿಂದ ಜನತೆಗೆ ಸಂತಸವಾಗಿದೆ. ರೂ. ೩೦ ಲಕ್ಷದ ಕಾಮಗಾರಿ ನಡೆದಿದ್ದು ರೂ.೩೦ ಲಕ್ಷದ ಕೆಲಸ ಬಾಕಿ ಉಳಿದಿದೆ. ಕಳೆದ ೨೦ ವರ್ಷಗಳ ಅವಧಿಯಲ್ಲಿ ಇಚ್ಛಾಶಕ್ತಿಯ ಕೊರತೆಯಿಂದ ಅಭಿವೃದ್ಧಿ ಕೆಲಸಗಳಾಗಲಿಲ್ಲ. ಸಂತೆಮಾರುಕಟ್ಟೆ ದುರಸ್ತಿಯೊಂದಿಗೆ ರಸ್ತೆ ನಿರ್ಮಾಣವಾಗಬೇಕು. ಗ್ರಾಮಾಭಿವೃದ್ಧಿಗೆ ಗ್ರಾಮಸ್ಥರ ಸಹಕಾರವೂ ಬೇಕು ಎಂದರು.

ಸದಸ್ಯರಾದ ಸರೋಜಾಶೇಖರ್, ಆದಿತ್ಯ ಗೌಡ ಹಾಗೂ ಮಾಜಿ ಅಧ್ಯಕ್ಷ ಮಹಮ್ಮದ್ ಗೌಸ್ ಮಾತನಾಡಿ, ವಾಣಿಜ್ಯ ಮಳಿಗೆಗಳ ನಿರ್ಮಾಣದಿಂದ ಸಮಸ್ಯೆಗಳು ಬಗೆ ಹರಿದಿವೆ. ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ ಗ್ರಾಮ ಸಭೆ ಕರೆದು ನಿರ್ಣಯಿಸಬೇಕು. ಕೆ.ಎಸ್.ಆರ್.ಟಿ.ಸಿ. ಆದರೇ ಅನುದಾನ ದೊರೆಯುತ್ತದೆ ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಮಾತನಾಡಿ, ಸರ್ವ ಸದಸ್ಯರ ಸಹಕಾರದಿಂದ ಗ್ರಾಮಾಭಿವೃದ್ಧಿ ಸಾಧ್ಯ. ಸಾರ್ವಜನಿಕ ಆಸ್ತಿಗೆ ಯಾರೂ ಧಕ್ಕೆ ತರಬಾರದು. ಜನಸಾಮಾನ್ಯರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ತ್ಯಾಜ್ಯ ವಿಲೇವಾರಿ ಘಟಕದ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶೀಘ್ರ ಅನುದಾನ ಬಿಡುಗಡೆ ಮಾಡಬೇಕು ಎಂದು ಹೇಳಿ ಶಾಸಕರನ್ನು ಆಗ್ರಹಿಸಿದರು.

ಪಂಚಾಯಿತಿ ಉಪಾಧ್ಯಕ್ಷ ಸರ್ದಾರ್ ಅಹಮ್ಮದ್, ಸದಸ್ಯರಾದ ಶರತ್ ಶೇಖರ್, ಎಸ್.ಎನ್. ರಘು, ಸರೋಜಾ ಶೇಖರ್, ಫರ್ಜಾನಾ ಶಾಹಿದ್, ಎಸ್.ಆರ್. ಮಧು, ಎಸ್.ಎ. ಆದಿತ್ಯ, ಸರಸ್ವತಿ, ಕಾವೇರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸತ್ಯವತಿ, ಸದಸ್ಯರಾದ ಡಿ.ಪಿ. ಭೋಜಪ್ಪ, ಸಿ.ಜೆ. ಗಿರೀಶ್, ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಇತರರು ಉಪಸ್ಥಿತರಿದ್ದರು. ಶಿಕ್ಷಕಿ ಧನಲಕ್ಷಿö್ಮÃ ಪ್ರಾರ್ಥಿಸಿ, ಉಪಾಧ್ಯಕ್ಷ ಸರ್ದಾರ್ ಸ್ವಾಗತಿಸಿದರು. ಶಿಕ್ಷಕಿಯರಾದ ಜಸಿಂತಾ ಸಿಕ್ವೇರಾ, ಮಮತಾ ಕಾರ್ಯಕ್ರಮ ನಿರೂಪಿಸಿ, ಪಿಡಿಓ ಹರೀಶ್ ವಂದಿಸಿದರು.