ಪೂಮಲೆ ಕುಡಿಯರ ಕುರಿತು ಅಧ್ಯಯನ ನಡೆಸುತ್ತಾ ಹೋಗುತ್ತಿದ್ದಂತೆ ಅವರಲ್ಲಿರುವ ಸಾಹಿತ್ಯ, ಜಾನಪದ, ಹಾಡುಕುಣಿತಗಳಿಗೆ ಮರುಳಾಗಿದ್ದೇನೆ. ದಟ್ಟಕಾಡಿನಲ್ಲಿ ಯಾರ ಕಣ್ಣಿಗೂ ಬೀಳದೆ, ತನ್ನ ಪಾಡಿಗೆ ತಾನು ಅರಳಿ ಕಣ್ಮರೆಯಾಗುವ ಅಂದದ ಹೂವಿನಂತೆ ಅವರ ಬದುಕು. ಇತ್ತೀಚೆಗೆ ಅನಿವಾರ್ಯ ಕಾರಣಗಳಿಗೆ ಕೆಲವರು ಮಲೆ, ಬೆಟ್ಟ, ಕಾಡುಗಳನ್ನು ಇಳಿದು ಬಂದಿರಬಹುದು. ಇಂದಿಗೂ ಕೂಡ ಹಲವು ಹಿರಿಯರು ಆ ಮಲೆಯೊಳಗೆ ಅಜ್ಞಾತವಾಗಿಯೇ ಬದುಕು ಕಟ್ಟಿಕೊಂಡಿದ್ದಾರೆ. ಕುಡಿಯರ ಮೂಲ ನೆಲೆಗಳನ್ನು ಹುಡುಕುತ್ತಾ ಬೆಟ್ಟಗಳಲ್ಲಿ ಅಲೆದಾಡಿದಾಗ ಮಲೆ ಜಿಗಣೆ ಕಚ್ಚಿ ರಕ್ತ ಹರಿದು ಆದ ಗಾಯವನ್ನು ಕುಡಿಯರ ವಿಶೇಷತೆ, ಪ್ರತಿಭೆಯನ್ನು ಗುರುತಿಸಿದ ಸಂತಸದಲ್ಲಿ ಮರೆತಿದ್ದೇನೆ. ಗುಡಿಸಲಿನ `ಪಲಿಯ’ದಲ್ಲಿ ಕುಳ್ಳಿರಿಸಿ `ಬಂದಿರಾ’ ಎಂದು ಮನಪೂರ್ವಕವಾಗಿ ಸ್ವಾಗತಿಸಿದ ಅವರ ಪ್ರೀತಿಯನ್ನು ಕಂಡು ಮಲೆ ಜಿಗಣೆ, ಸೊಳ್ಳೆ, ಕೊರಂಬೆಗಳ ಕಡಿತದ ಉರಿಯನ್ನು ಮರೆತಿದ್ದೇನೆ. ಹತ್ತಿಪ್ಪತ್ತು ಕಿ.ಮೀ ದೂರ ಬೆಟ್ಟ ಹತ್ತಿ, ಇಳಿದು ಆದ ಆಯಾಸವನ್ನು ಅವರು ನೀಡಿದ ತಣ್ಣನೆಯ ಕೊಲ್ಲಿ ನೀರನ್ನು ಕುಡಿದು ಮರೆತಿದ್ದೇನೆ. ಅವರು ನೀಡಿದ ಕಪ್ಪು ಕಾಫಿ ಯಾವ ಬೂಸ್ಟ್, ಹಾರ್ಲಿಕ್ಸ್ಕೂ ಕಡಿಮೆ ಇರಲಿಲ್ಲ. ಸುಟ್ಟ ಹಲಸಿನ ಬೀಜದ ಸ್ವಾದ ಯಾವ ಸ್ಟಾರ್ ಹೊಟೇಲ್ನಲ್ಲಿನ ತಿಂಡಿಯಲ್ಲಿಯೂ ಸಿಗಲಿಲ್ಲ. ಅವರ ನೀಡಿದ `ಕರಮಂಜಿ’ ಹಣ್ಣಿನ ರಸ ಯಾವ ಕಾಶ್ಮೀರದ ಆ್ಯಪಲ್ನಲ್ಲಿಯೂ ಕಾಣಲಿಲ್ಲ. ಅದಾಗ ತಾನ ಮರದಿಂದ ಇಳಿಸಿದ ನೊರೆನೊರೆಯ ಬೊಳ್ಳೆಕಳ್ಳ್ ಅನ್ನು ಹೇಗೆಂದು ವರ್ಣಿಸಲು ಸಾಧ್ಯ ? ವಾಟೆ ಗುಡಿಸಿಲಿನ ಒಳಗೆ ಬೆತ್ತದ ಚಾಪೆಯಲ್ಲಿ ದುಡಿಕೊಟ್ಟ್ ಕೇಳಿಸಿಕೊಂಡು ಮಲಗಿದಾಗ ಬಂದ ನಿದ್ರೆ ಯಾವ ಎ.ಸಿ.ರೂಂನಲ್ಲಿಯೂ ಬಂದಿಲ್ಲ. ಮಲೆ, ಬೆಟ್ಟ, ಕಾಡಿನಲ್ಲಿ ಬೀಸಿದ ಆ ಗಾಳಿಯನ್ನು ಮತ್ತೆಂದೂ ಉಸಿರಾಡುತ್ತೇನೆ ಎನ್ನುವ ಚಡಪಡಿಕೆಯಾಗುತ್ತಿದೆ. ಬಾಯಾರಿಕೆಯಾದಾಗ ಫ್ರಿಜ್ನಂತೆ ಇರುವ ಕೊಲ್ಲಿ, ಕೂವದ ನೀರನ್ನು ಬೊಗಸೆಯಲ್ಲಿ ಕುಡಿಯಬಹುದು, ಹೊಟ್ಟೆ ಹಸಿವಾದಾಗ ಕೈ ಚಾಚಿದೆಡೆಗಳಲ್ಲಿ ಹಣ್ಣು ಹಂಪಲು, ಗೆಣಸುಗಳು. ಹಲಸು, ಮಾವು.... ದುಡಿದು ಬಂದ ನಂತರ ಕೈಗೆ ದುಡಿ ಬಂದರೆ ಇನ್ನು ಅಲ್ಲಿ ಜಾನಪದ ಹಾಡು ಕುಣಿತಗಳ ಅದ್ಭುತ ಲೋಕ ತೆರೆದುಕೊಳ್ಳುತ್ತದೆ. ಕಥೆ, ಹಾಡು, ಕುಣಿತ ಹೇಳಿಕೊಡಲು ಹಿರಿಯರಿದ್ದಾರೆ, ಶೀತ, ಜ್ವರ ಬಂದರೆ ಮನೆಯ ಹಿತ್ತಲಲ್ಲಿ ಎಲೆ, ಸೊಪ್ಪನ್ನು ಅರೆದು ಕುಡಿಸಿ ವಾಸಿ ಮಾಡುವ ಜಾನಪದ ವೈದ್ಯರಿದ್ದಾರೆ. ದಿನವಿಡೀ ಆಯಾಸವಿಲ್ಲದೆ ಹಾಡುವ ಜಾನಪದ ಸಾಧಕರಿದ್ದಾರೆ. ಯಾರು ಕೇಳಲಿ, ಯಾರು ನೋಡಲಿ, ಹಾಡುವುದು ಕುಣಿಯುವುದು ನನ್ನ ಕರ್ಮ ಎನ್ನುವಂತೆ ಈ ಸಂಸ್ಕöÈತಿಯನ್ನು ಇಂದಿಗೂ ಹಿರಿಯರು ಚಾಚು ತಪ್ಪದೆ ಮುಂದುವರಿಸಿ ಕೊಂಡು ಬಂದಿದ್ದಾರೆ. ಒಮ್ಮೆ ಈ ಮಲೆಕಾಡಿನ ಬದುಕಿಗೆ ನಾವು ಹೊಂದಿಕೊAಡರೆ ಇನ್ನು ಅಲ್ಲಿಂದ ಕೆಳಗೆ ಇಳಿದು ಬರಲು ಮನಸ್ಸಾಗುವುದಿಲ್ಲ. ನಗರದ ಜಂಜಾಟದ ಬದುಕೆಲ್ಲಿ, ಮಲೆಕಾಡಿನ ಯಾರ ಹಂಗೂ ಇಲ್ಲದ ಆ ಬದುಕು ಎಲ್ಲಿ ?
ತಡಿಯಂಡಮೋಳು ಬೆಟ್ಟ ಹತ್ತಿ ಕೇರಳ ಗಡಿಯಲ್ಲಿನ ಅವರ ಮೂಲ ನೆಲೆಗೆ, ಗಾಳಿಬೀಡು, ಬೆಟ್ಟತ್ತೂರು, ಕೆದಮುಳ್ಳೂರುಗಳಲ್ಲಿನ ಅವರ ತಾಣಗಳಿಗೆ ನಡೆದು ಆಯಾಸಗೊಂಡು ಬರುವಾಗ ಕುಡಿಯರ ಅದ್ಭುತ ಪ್ರತಿಭೆ, ಜಾನಪದದ ಸಿರಿಯನ್ನು ಬುತ್ತಿ ಕಟ್ಟಿಕೊಂಡು ಬಂದಿದ್ದೇನೆ. ಅದು ಎಲ್ಲರಿಗೂ ಇಷ್ಟವಾಗುತ್ತದೆ ಎನ್ನುವ ನಂಬಿಕೆ ನನ್ನದು. ಇಲ್ಲಿ ಅವರ ಸಂಕಷ್ಟ, ಸಮಸ್ಯೆಗಳನ್ನು ಹೇಳಲು ಹೋಗುವುದಿಲ್ಲ. ಅವರ ಹೋರಾಟ, ಹಕ್ಕುಗಳನ್ನು ಪ್ರಸ್ತಾಪ ಮಾಡುವುದಿಲ್ಲ. ಅವರಲ್ಲಿನ ಮಾದರಿಯಾದ ಸಂಸ್ಕöÈತಿ, ಜಾನಪದ, ಕೆಲ, ಹಾಡುಗಳನ್ನು ಮಾತ್ರ ಹೆಕ್ಕಿ ನೀಡುತ್ತಿದ್ದೇನೆ.
ಇಂದು ನಾವು ಅಭಿವೃದ್ಧಿಯ ನಾಗಾಲೋಟದಲ್ಲಿ ಸಾಗುತ್ತಿದ್ದೇವೆ. ಸಮುದ್ರದ ಆಳ, ಚಂದ್ರನ ಅಂಗಳವನ್ನು ಮುಟ್ಟಿ ಬಂದಿದ್ದೇವೆ. ಭೂಮಿಯಾಚೆಗಿನ ಗ್ರಹಗಳಲ್ಲಿ ಬದುಕುವ ಸಾಧ್ಯತೆಯನ್ನು ಹುಡುಕಾಡುತ್ತಿ ದ್ದೇವೆ. ನಮ್ಮನ್ನೇ ಮಣಿಸುವ ಕೃತಕ ಬುದ್ಧಿಮತ್ತೆಯನ್ನು ಕಂಡು ಹಿಡಿದು ಅದರ ಮುಂದೆ ಸೋಲುವ ಕಾಲ ಇದು. ಇಡೀ ಭೂಲೋಕವನ್ನು ಕೆಲವೇ ಕ್ಷಣದಲ್ಲಿ ನಾಶ ಮಾಡುವಂತಹ ಅಣುಬಾಂಬ್ಗಳ ರಾಶಿಯನ್ನೇ ಸೃಷ್ಟಿಸಿದ್ದೇವೆ. ಪ್ರಪಂಚದ ಯಾವುದೇ ಮೂಲೆಯಲ್ಲಿರಲಿ, ಚಿಟಕಿ ಹೊಡೆಯುವುದರಲ್ಲಿ ಅವರ ಮುಖವನ್ನು ನೋಡಿಕೊಂಡು ಮಾತನಾಡುವಷ್ಟು ಸಂಪರ್ಕ ವೃದ್ಧಿಯಾಗಿದೆ. ಆದರೆ, ನಮ್ಮ ಸುತ್ತಮುತ್ತ ಇರುವ ಪೂಮಲೆ ಕುಡಿಯರಂತಹ ಬುಡುಕಟ್ಟು ನಿವಾಸಿಗಳ ಅದ್ಭುತ ಜಾನಪದದ ಸಂಗ್ರಹ ಕೆಲಸ ಇನ್ನೂ ಆಗದಿರುವುದು ವಿಷಾದನಿಯ. ಪೂಮಲೆ ಕುಡಿಯರ ಹಿರಿಯರ ಬದುಕು ತುಂಬು ಜಾನಪದದ ಕಣಜದಂತೆ. ಕಾಡಿನಲ್ಲಿ ಬೆಳೆದು, ಕಾಡಿನ ರಕ್ಷಕರಾಗಿ ಜೀವಿಸುತ್ತಿದ್ದಾರೆ. ಅವರ ಬದುಕಿನ ವಿಶೇಷತೆಯನ್ನು ತಿಳಿಯಬೇಕಾದುದು, ಅವರ ಪ್ರತಿಭೆಯನ್ನು ಗೌರವಿಸಬೇಕಾದುದು ನಮ್ಮ ಕರ್ತವ್ಯ.
ಇಂದು ಆಧುನಿಕತೆ, ಆವಿಷ್ಕಾರ ಎನ್ನುವುದು ಹುಚ್ಚು ಕುದುರೆಯಂತೆ ದಿಕ್ಕು ತಪ್ಪಿ ಓಡುತ್ತಿದೆ. ಇದರ ಮಧ್ಯದಲ್ಲಿ ಆಧುನಿಕತೆಯ ಸೋಂಕಿಲ್ಲದೆ, ಮಲೆಕಾಡಿನಲ್ಲಿ ಅಣಬೆ, ಗೆಣಸು, ಹಣ್ಣು, ಹಂಪಲುಗಳ ಸ್ವಾದದಲ್ಲಿ ಸಾಗುತ್ತಿರುವ ಪೂಮಲೆ ಕುಡಿಯರಂತಹ ಬದುಕನ್ನು ತಿಳಿಯುವುದೇ ಒಂದು ಅದ್ಭುತ ಅನುಭವ. ಯಾವ ಕವಿಗಳಿಗೂ ಕಡಿಮೆ ಇಲ್ಲದ ಜಾನಪದ ಸಾಹಿತ್ಯ ಅವರ ಹಿರಿಯರಿಂದ ರಚನೆಯಾಗಿದೆ. ಇಂದು ಪ್ರಪಂಚದ ಬೇರೆ ಬೇರೆ ದೇಶಗಳಿಂದ ಪ್ರದರ್ಶನಕ್ಕೆ ಆಹ್ವಾನ ಬರುವ `ಉರ್ಟಿಕೊಟ್ಟ್’ ಆಟ್ ಅವರ ಪ್ರತಿಭೆಗೆ ಸಾಕ್ಷಿ. ಅವೆಲ್ಲವನ್ನೂ ಕುಡಿಯರ ಕುರಿತ ಅಧ್ಯಯನ ದಲ್ಲಿ ಗಮನಿಸಬಹುದು. ಕುಡಿಯರು ಎಲ್ಲರಿಗೂ ಗೊತ್ತು. ಆದರೆ, ಅವರ ಮೂಲ ನೆಲೆಯಲ್ಲಿನ ಸಾಂಸ್ಕöÈತಿಕ ಬದುಕು, ಅವರಲ್ಲಿರುವ ಅದ್ಭುತ ಸಾಹಿತ್ಯ, ಕಲೆಯ ಝಲಕ್ ಹಲವರಿಗೆ ಇನ್ನೂ ತಿಳಿದಿಲ್ಲ. ಅದರತ್ತ ಮುಂದಿನ ವಾರದಿಂದ ಗಮನ ಹರಿಸೋಣ.
(ಮುಂದುವರಿಯುವುದು)
- ಐತಿಚಂಡ ರಮೇಶ್ ಉತ್ತಪ್ಪ, ಮೈಸೂರು
iu.ಡಿಚಿmesh@gmಚಿiಟ.ಛಿom