ಸಿದ್ದಾಪುರ, ನ. ೨೪: ಗ್ರಾ.ಪಂ. ನಿರ್ಲಕ್ಷö್ಯಕ್ಕೆ ಮಾವುತರು ಹಾಗೂ ಕಾವಾಡಿಗರನ್ನೊಳಗೊಂಡ ಸುಮಾರು ೫೨ ಕುಟುಂಬಗಳನ್ನು ಹೊಂದಿರುವ ಹಾಡಿಯ ನಿವಾಸಿಗಳು ಇಂದಿಗೂ ಮುರುಕಲು ಮನೆ, ಚರಂಡಿ ನೀರು, ಬಯಲು ಶೌಚಾಲಯಗಳೊಂದಿಗೆ ಸಂಕಷ್ಟದ ಬದುಕನ್ನು ಅನುಭವಿಸುತ್ತಿರುವ ದೃಶ್ಯ ವೀರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ದುಬಾರೆ ಹಾಡಿಯಲ್ಲಿ ಕಂಡುಬAದಿದೆ.
ದುಬಾರೆ ಹಾಡಿಯಲ್ಲಿ ಸುಮಾರು ೫೨ ಕುಟುಂಬಗಳಲ್ಲಿ, ಸುಮಾರು ೧೫೦ ಕ್ಕೂ ಹೆಚ್ಚು ಮಂದಿ ವಾಸ ಮಾಡುತ್ತಿದ್ದಾರೆ. ಇಲ್ಲಿನ ಎಲ್ಲಾ ಮನೆಗಳು ಕೂಡ ಕುಸಿಯುವ ಹಂತಕ್ಕೆ ತಲುಪಿರುವುದು ಕಂಡುಬAದಿದೆ. ಇಲಾಖೆಯಿಂದ ಮನೆ ನಿರ್ಮಿಸಿದ್ದರೂ ಕೂಡ ಮನೆಯಲ್ಲಿರುವುದು ಒಂದೇ ಕೋಣೆ. ಹೆಸರಿಗೆ ಮನೆಗೆ ಮೇಲ್ಛಾವಣಿ. ಆದರೆ ಮಳೆ ಬಂದರೆ ನೀರು ಮನೆಯೊಳಗೆ ಸೇರುವುದು ನಿಶ್ಚಿತ.
ಬಯಲು ಶೌಚಾಲಯದ ಮೊರೆ ಹೋದ ಹಾಡಿ ನಿವಾಸಿಗಳು: ದುಬಾರೆ ಹಾಡಿಯ ಬಹುತೇಕ ಮನೆಗಳಲ್ಲಿ ಇಲಾಖೆ ವತಿಯಿಂದ ನಿರ್ಮಾಣ ಮಾಡಲಾದ ಶೌಚಾಲಯಗಳು ಬಾಗಿಲು, ಮೇಲ್ಛಾವಣಿ ಕಾಣದೆ ವರ್ಷಗಳು ಕಳೆದಿವೆ. ಇನ್ನೂ ಶೇ ೯೦ ರಷ್ಟು ಶೌಚಾಲಯ ಕುಸಿದಿದೆ. ಈ ಹಿನ್ನೆಲೆಯಲ್ಲಿ ಹಾಡಿ ನಿವಾಸಿಗಳು ಕಾಡನ್ನೇ ತಮ್ಮ ಶೌಚಾಲಯವನ್ನಾಗಿ ಬಳಸುತ್ತಿದ್ದಾರೆ. ಹಾಡಿಯ ಮಹಿಳೆಯರ ಪಾಡು ಹೇಳತೀರದಂತಾಗಿದೆ. ಅವಸರಕ್ಕೆ ಕಾಡು ಪ್ರಾಣಿಗಳ ದಾಳಿಯನ್ನೂ ಲೆಕ್ಕಿಸದೇ ಮಲವಿಸರ್ಜನೆಗೆ ಕಾಡನ್ನು ಬಳಸುವ ದುಸ್ಥಿತಿ ಇವರದ್ದಾಗಿದೆ. ದುಬಾರೆ ಹಾಡಿಯ ನಿವಾಸಿಗಳ ಉಪಯೋಗಕ್ಕಾಗಿ ಮೂರು ನೀರಿನ ಟ್ಯಾಂಕ್‌ಗಳ ನಿರ್ಮಾಣ ಮಾಡಿ ವರ್ಷಗಳು ಕಳೆದಿದ್ದರೂ ಕೂಡ ಇಂದಿಗೂ ನೀರಿಲ್ಲ. ಅದರಲ್ಲಿ ಒಂದು ಟ್ಯಾಂಕ್ ಕಳಪೆಯಾಗಿ ನಿರ್ಮಾಣವಾಗಿದ್ದು ಮುರಿದು ಬೀಳುವ ಹಂತಕ್ಕೆ ತಲುಪಿದೆ. ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನಕ್ಕಾಗಿ ಹಾಡಿಯ ಮನೆಗಳ ಎದುರು ಪೈಪ್‌ಗಳನ್ನು ಅಳವಡಿಸಿ ತಿಂಗಳು ಕಳೆದರೂ ಹನಿ ನೀರು ಕೂಡ ಪೈಪಿನಿಂದ ಬಂದಿಲ್ಲ ಎಂಬುದು ಹಾಡಿ ನಿವಾಸಿಗಳ ಅಳಲು. ಕುಡಿಯಲು ಅರಣ್ಯ ಇಲಾಖೆಯ ಕೃಪೆಯಿಂದ ನೀರನ್ನು ಪಡೆಯುತ್ತಿದ್ದಾರೆ. ಉಳಿದಂತೆ ಶೌಚಾಲಯ ಬಳಕೆಗೆ ಸಮೀಪದ ನೀರು ಸಂಗ್ರಹವಾಗುವ ಗುಂಡಿಗಳನ್ನು ಬಳಸುತ್ತಿದ್ದಾರೆ.
ಸಂಪೂರ್ಣ ಹಾಡಿಯನ್ನು ಕತ್ತಲೆಗೆ ದೂಡಿದ ಗ್ರಾ.ಪಂ: ದೀನ್ ದಯಾಳ್ ಉಪಾಧ್ಯಾಯ ಬೆಳಕು ಯೋಜನೆಯು ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ದುಬಾರೆ ಹಾಡಿಗೆ ಅನ್ವಯವಾಗಲಿಲ್ಲ. ಸೌರ ವಿದ್ಯುತ್ ಪೂರೈಕೆ ನೆಪದಲ್ಲಿ ಕಂಬಗಳನ್ನು ಇಟ್ಟಿದ್ದರೂ ಕೂಡ ಕಂಬ ತುಕ್ಕು ಹಿಡಿದಿದೆಯೇ ಹೊರತು ಬೆಳಕು ಬಂದಿಲ್ಲ ಎಂಬುದು ಇಲ್ಲಿನವರ ಅಭಿಪ್ರಾಯ. ಕಾಡಂಚಿನಲ್ಲಿರುವ ಹಾಡಿಯಲ್ಲಿ ರಾತ್ರಿ ಬೆಳಕಿಲ್ಲದಿದ್ದರೆ ಹೇಗಿರಬಹುದೆಂಬ ದೃಶ್ಯ ಊಹಿಸಲೂ ಸಾಧ್ಯವಿಲ್ಲದಂತಾಗಿದೆ.
ಹಾಡಿಗೆ ಆಸರೆಯಾದ ಅರಣ್ಯ ಇಲಾಖೆ: ಸಿದ್ದಾಪುರ ಗ್ರಾಮ ಪಂಚಾಯಿತಿಯ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾದ ದುಬಾರೆ ಹಾಡಿಯು, ಕುಶಾಲನಗರ ವಲಯ ಅರಣ್ಯ ಇಲಾಖೆಯ ಸಾಕಾನೆ ಶಿಬಿರಕ್ಕೆ ಹೊಂದಿಕೊAಡಿದೆ. ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ದುಬಾರೆ ಹಾಡಿಗೆ ಅರಣ್ಯ ಇಲಾಖೆಯು ಮಾನವೀಯತೆಯ ದೃಷ್ಟಿಯಿಂದ ಕುಡಿಯುವ ನೀರನ್ನು ಒದಗಿಸುತ್ತಿದೆ. ಹಾಡಿಗೆ ನೀರನ್ನು ಒದಗಿಸುವಂತೆ ಸ್ಥಳೀಯ ಗ್ರಾ.ಪಂ.ಗೆ ಅರಣ್ಯ ಇಲಾಖೆ ಮನವಿ ಮಾಡಿದ್ದರೂ ಕೂಡ ನಿರ್ಲಕ್ಷö್ಯ ತೋರಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ನೀರನ್ನು ಒದಗಿಸುತ್ತಿದೆ. ಅಲ್ಲದೆ ಹಾಡಿಯಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೂ ನೀರು, ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಾನವೀಯತೆ ಮೆರೆದಿದೆ.
ಸಿದ್ದಾಪುರ ಗ್ರಾಮ ಪಂಚಾಯಿತಿಗೆ ದುಬಾರೆ ಹಾಡಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಿದ್ದರೂ ನಿರ್ಲಕ್ಷö್ಯ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳಿಗೆ ಅರಣ್ಯ ಇಲಾಖೆಯ ವತಿಯಿಂದ ಕುಡಿಯುವ ನೀರನ್ನು ಒದಗಿಸಲಾಗುತ್ತದೆ. ಪ್ರತೀ ತಿಂಗಳು ಹಾಡಿಗೆ ನೀರನ್ನು ಒದಗಿಸುವ ಹಿನ್ನೆಲೆಯಲ್ಲಿ ಇಲಾಖೆಗೆ ಸುಮಾರು ೭೦೦೦ ರೂ ಖರ್ಚಾಗುತ್ತಿದೆ. ನೀರಿನ ಟ್ಯಾಂಕ್ ನಿರ್ಮಾಣ ಮಾಡಿ ಹತ್ತು ವರ್ಷ ಕಳೆದಿದ್ದರೂ ಕೂಡ ನೀರಿಲ್ಲ. ಒಟ್ಟಿನಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ದುಬಾರೆ ಹಾಡಿ ಒಳಗಾಗಿಲ್ಲವೇ ಎಂಬ ಸಂಶಯ ಮೂಡಿದೆ ಎಂದು ಹೆಸರು ಹೇಳಲು ಇಚ್ಚಿಸದ ಅರಣ್ಯ ಇಲಾಖಾ ಸಿಬ್ಬಂದಿಯೋರ್ವರ ಅಭಿಪ್ರಾಯವಾಗಿದೆ.
- ಎ.ಎನ್. ವಾಸು, ಸಿದ್ದಾಪುರ