ಪೊನ್ನAಪೇಟೆ, ನ. ೨೫: ಇತಿಹಾಸ ಪ್ರಸಿದ್ಧ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಡಿಸೆಂಬರ್. ೩ ರಂದು ಭಾನುವಾರ ಬೆಳಿಗ್ಗೆ ೧೦ ಗಂಟೆಯಿAದ ಪೊನ್ನಂಪೇಟೆ ತಾಲೂಕಿನ ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್'ನಲ್ಲಿ ನಡೆಯಲಿದ್ದು, ಜಿಲ್ಲೆಯ ಮೂಲ ನಿವಾಸಿಗಳು ಮುಕ್ತವಾಗಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಮೂರು ನಾಡಿನ ತಕ್ಕ ಮುಖ್ಯಸ್ಥರು ಹಾಗೂ ಬೊಟ್ಟಿಯತ್ ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ.

ಕೈಮುಡಿಕೆ ಪುತ್ತರಿ ಕೋಲ್‌ಮಂದ್ ವಿಷಯವಾಗಿ ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡಿಗೆ ಸೇರಿದ ವಿವಿಧ ಗ್ರಾಮಗಳ ಹಾಗೂ ಮೂರು ನಾಡಿನ ತಕ್ಕಮುಖ್ಯಸ್ಥರು ಸೇರಿದಂತೆ ಮೂರು ನಾಡಿನವರು ಸೇರಿ ಕುಂದಾ ಸಮೀಪದ ಕೈಮುಡಿಕೆ ಕೋಲ್‌ಮಂದ್'ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿ, ಹಬ್ಬವನ್ನು ಅದ್ದೂರಿಯಿಂದ ಆಚರಿಸಲು ತೀರ್ಮಾನಿಸಲಾಯಿತು. ಮೂರು ನಾಡಿನವರು ಮಾತ್ರವಲ್ಲದೆ ಜಿಲ್ಲೆ ಹಾಗೂ ಹೊರಜಿಲ್ಲೆಯಲ್ಲಿ ನೆಲೆಸಿ ಕೊಡವ ಸಂಪ್ರದಾಯವನ್ನು ಪಾಲಿಸುವ ಮಂದಿಗೆ ಮುಕ್ತವಾಗಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲು ತೀರ್ಮಾನಿಸಲಾಯಿತು. ಇದರೊಂದಿಗೆ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ತಂಡಕ್ಕೆ ಮತ್ತು ಸಾರ್ವಜನಿಕರಿಗೂ ಮುಕ್ತ ಅವಕಾಶವನ್ನು ನೀಡಲು ತೀರ್ಮಾನ ಕೈಗೊಳ್ಳಲಾಯಿತು.

ಹಿಂದಿನ ಕಾಲಘಟ್ಟದಲ್ಲಿ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಬಹಳ ವಿಜೃಂಭಣೆಯಿAದ ಪುತ್ತರಿ ಕಳೆದು ಸುಮಾರು ಒಂದು ವಾರದಲ್ಲಿ ನಡೆಯುತ್ತಿತ್ತು. ಮೂರು ನಾಡಿನಲ್ಲಿ ವಿವಿಧ ಊರುಮಂದ್ ನಾಡ್‌ಮಂದ್ ಆಚರಿಸಿ ನಂತರ ಮೂರು ನಾಡಿನವರು ಒಂದೆಡೆ ಸೇರಿ ಹಬ್ಬವನ್ನು ಅದ್ದೂರಿಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸುತ್ತಿದ್ದರು. ಈ ನಿಟ್ಟಿನಲ್ಲಿ ಪ್ರಸ್ತುತ ವರ್ಷದಿಂದ ಶಾಲಾ ಕಾಲೇಜು ಮಕ್ಕಳಿಗೆ ಹಾಗೂ ಉದ್ಯೋಗ ನಿಮಿತ್ತ ಇರುವವರಿಗೆ ಅನುಕೂಲವಾಗುವಂತೆ ಪುತ್ತರಿ ಕಳೆದು ಮೊದಲ ಭಾನುವಾರ ಮೂರು ನಾಡಿಗೆ ಸೇರಿದ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಆಚರಿಸಲು ತೀರ್ಮಾನಿಸಲಾಯಿತು.

ವಿವಿಧ ಪೈಪೋಟಿಗಳು: ಪುತ್ತರಿ ಕೋಲಾಟ್, ಉಮ್ಮತಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ, ಬಾಳೋಪಾಟ್, ಕೊಡವ ಪಾಟ್ ಹಾಗೂ ವಾಲಗತಾಟ್ ಪೈಪೋಟಿ ಸೇರಿದಂತೆ ಇಲ್ಲಿನ ಬುಡಕಟ್ಟು ಆದಿವಾಸಿ ಜನಾಂಗಕ್ಕಾಗಿ ಯರವ ಆಟ್ ಹಾಗೂ ಚೀನಿದುಡಿಯನ್ನು ನುಡಿಸುವ ಪೈಪೋಟಿಯನ್ನು ಏರ್ಪಡಿಸಲಾಗಿದೆ. ಯರವ ಆಟ್ ಹಾಗೂ ಚೀನಿದುಡಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಪೈಪೋಟಿಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು. ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿ ಒಂದು ವಿಭಾಗ, ಕಾಲೇಜು ಮತ್ತು ಸಾರ್ವಜನಿಕರು ಸೇರಿ ಮತ್ತೊಂದು ವಿಭಾಗದಲ್ಲಿ ಪೈಪೋಟಿ ನಡೆಯಲಿದೆ. ಇದರ ಹೊರತಾಗಿ ಮೂರು ನಾಡಿನವರಿಗೆ ಮಾತ್ರ ಸೀಮಿತವಾಗಿ ಪುರುಷ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಒಂದು ನಾಡಿನಿಂದ ಎರಡು ವಿಭಾಗದಲ್ಲೂ ತಲಾ ಎರಡೆರಡು ತಂಡಗಳು ಭಾಗವಹಿಸ ಬಹುದಾಗಿದೆ. ಮೇಲಿನ ಎಲ್ಲಾ ಪೈಪೋಟಿಗಳಿಗೆ ಹೆಸರನ್ನು ನೋಂದಾಯಿಸಿ ಕೊಳ್ಳಲು ಅಪ್ಪಂಡೇರAಡ ಮನು ಮೋಹನ್- ೯೭೩೧೨ ೮೯೪೨೩ ಹಾಗೂ ಚಮ್ಮಟೀರ ಪ್ರವೀಣ್ ಉತ್ತಪ್ಪ-೯೮೮೦೯೬೭೫೭೩ ಅವರನ್ನು ಸಂಪರ್ಕಿಸಲು ಕೋರಿದ್ದಾರೆ.

ಸಂಜೆ ಮೂರು ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆಗಿರುವ ಅಜ್ಜಿಕುಟ್ಟೀರ ಎಸ್ ಪೊನ್ನಣ್ಣ ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಡೇಪAಡ ಸುಜಾ ಕುಶಾಲಪ್ಪ ಸೇರಿದಂತೆ ದೇಶ ತಕ್ಕ ಹಾಗೂ ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಕಾವೇರಪ್ಪ ಭಾಗವಹಿಸಲಿದ್ದಾರೆ. ಇವರೊಂದಿಗೆ ಪ್ರತಿವರ್ಷ ಮೂರು ನಾಡಿನ ಪರವಾಗಿ ಸಾಧಕರೊಬ್ಬರನ್ನು ಗೌರವಿಸುತ್ತಾ ಬರುತ್ತಿದ್ದು ಈ ಬಾರಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯನವರನ್ನು ಸನ್ಮಾನಿಸುವಂತೆ ಸಭೆ ತಿರ್ಮಾನಿಸಿತು. ಹಾಗೂ ಸೇರಿದವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಏರ್ಪಡಿಸಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬೊಟ್ಟಿಯತ್ ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ, ಕುತ್ತ್ ನಾಡ್ ತಕ್ಕ ಪಂದಿಮಾಡ ರಮೇಶ್ ಅಚ್ಚಪ್ಪ, ಬೇರಳಿನಾಡ್ ತಕ್ಕ ಮಳವಂಡ ಭುವೇಶ್ ದೇವಯ್ಯ, ಗೌರವ ಕಾರ್ಯದರ್ಶಿ ಉಮೇಶ್ ಕೇಚಮಯ್ಯ ಸೇರಿದಂತೆ ಮೂರು ನಾಡಿನ ಊರು ತಕ್ಕರು, ದೇವ ತಕ್ಕರು, ಭಂಡಾರ ತಕ್ಕರು ಸೇರಿದಂತೆ ಮೂರು ನಾಡಿನವರು ಉಪಸ್ಥಿತರಿದ್ದರು.