ಕಣಿವೆ, ನ. ೨೪: ಸರ್ಕಾರದಿಂದ ನಿರ್ಲಕ್ಷö್ಯಕ್ಕೆ ಒಳಗಾದ ಚಿಕ್ಲಿಹೊಳೆ ಜಲಾಶಯ ಇದೀಗ ಬಹುತೇಕ ಖಾಲಿಯಾಗಿದ್ದು ನೀರಿಲ್ಲದೇ ಬಿಕೋ ಎನ್ನುತ್ತಿದೆ.
೦.೧೮ ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಇದೀಗ ೦.೦೩೨ ರಷ್ಟು ಮಾತ್ರ ನೀರಿದೆ. ಜಲಾಶಯದ ಇತಿಹಾಸದಲ್ಲಿ ಇಷ್ಟೊಂದು ಕನಿಷ್ಟ ಪ್ರಮಾಣದಲ್ಲಿ ನೀರು ಸಂಗ್ರಹ ಇದೇ ಮೊದಲು ಎಂದು ಸ್ಥಳೀಯರು ಹೇಳುತ್ತಾರೆ.
ಜಲಾಶಯದ ಸುತ್ತಲಿನ ಅರಣ್ಯ ಪ್ರದೇಶದಲ್ಲಿರುವ ವನ್ಯ ಪ್ರಾಣಿಗಳಿಗೆ ಹಾಗೂ ಪಕ್ಷಿಗಳಿಗೆ ಕುಡಿಯಲು ಸಾಕಾಗುವಷ್ಟು ಮಾತ್ರ ನೀರು ಇದೆ. ಹಾಗಾಗಿ ಜಲಾಶಯದ ಕ್ರೆಸ್ಟ್ ಗೇಟ್ ಒಳಗಿನ ನೀರಿನ ಸುರುಳಿ ಒಣಗಿ ಖಾಲಿ ಎನಿಸುತ್ತಿದೆ. ೨೧೩೭ ಎಕರೆ ರೈತರ ಅಚ್ಚುಕಟ್ಟು ಭೂಮಿಗೆ ನೀರೊದಗಿಸಬೇಕಿದ್ದ ಜಲಾಶಯದಲ್ಲಿ ಈ ಬಾರಿ ಮಳೆ ಕೈಕೊಟ್ಟ ಪರಿಣಾಮ ಸಂಪೂರ್ಣ ಬರಿದಾಗಿದೆ.
ಕಳೆದ ಹತ್ತು ವರ್ಷಗಳ ಹಿಂದೆ ಬೇಸಿಗೆಯ ದಿನಗಳಾದ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಕುಶಾಲ ನಗರದ ನಿವಾಸಿಗಳಿಗೆ ಕುಡಿಯುವ ನೀರು ಹರಿಸುತ್ತಿದ್ದ ಕಾವೇರಿ ನದಿಯಲ್ಲಿ ನೀರು ಸಂಪೂರ್ಣ ಸ್ಥಗಿತಗೊಂಡು ನೀರಿಗೆ ಹಾಹಾಕಾರ ಏರ್ಪಟ್ಟ ಸಂದರ್ಭ ಕುಶಾಲನಗರದ ಜಲಮಂಡಳಿ ಅಧಿಕಾರಿ ಆನಂದ್ ವಿಶೇಷ ಶ್ರಮವಹಿಸಿ ಇದೇ ಚಿಕ್ಲಿಹೊಳೆ ಜಲಾಶಯದಲ್ಲಿ ಸಂಗ್ರಹಗೊAಡಿದ್ದ ನೀರನ್ನು ಕಾವೇರಿ ನದಿಗೆ ಹರಿಸಿ ಆ ನೀರನ್ನು ಒಂದಷ್ಟು ದಿನಗಳ ಕಾಲ ಕುಶಾಲನಗರದ ನಿವಾಸಿಗಳಿಗೆ ನೀರು ಪೂರೈಸಿದ್ದರು.
ಇದೀಗ ನವೆಂಬರ್ ತಿಂಗಳಿ ನಲ್ಲಿಯೇ ಜಲಾಶಯದಲ್ಲಿ ನೀರಿಲ್ಲ ದಿರುವುದು ಮುಂದಿನ ಬೇಸಿಗೆಯ ದಿನಗಳ ಭಯಾನಕತೆಯನ್ನು ಸೂಚಿಸುತ್ತಿದೆ. ಜಲಾಶಯದಲ್ಲಿ ನೀರಿಲ್ಲದ ಕಾರಣ ಆ ಭಾಗದ ತೋಟ ಮಾಲೀಕರ ಕೊಳವೆ ಬಾವಿಗಳಲ್ಲಿ ಬರುವ ಬೇಸಿಗೆಯ ದಿನಗಳಲ್ಲಿ ಅಂತರ್ಜಲ ಕುಸಿತವಾಗುವ ಸಂಭವವನ್ನು ಈ ಬಾರಿ ಅಲ್ಲಗಳೆ ಯುವಂತಿಲ್ಲ.
- ಕೆ.ಎಸ್. ಮೂರ್ತಿ