ಸುರಂಗದೊಳಗೆ ಸಿಕ್ಕಿಬಿದ್ದ ಕಾರ್ಮಿಕರ ಸ್ಥಿತಿ ಬಗ್ಗೆ ವಿಚಾರಣೆ
ಉತ್ತರಕಾಶಿ, ನ. ೨೪: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ನವೆಂಬರ್ ೧೨ ರಿಂದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ೪೧ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದರು. ಉತ್ತರಾಖಂಡ ಸರ್ಕಾರದ ಪ್ರಕಾರ, ಪ್ರಧಾನಿ ಮೋದಿ ಕಾರ್ಮಿಕರ ಸ್ಥಿತಿ ಬಗ್ಗೆ ವಿಚಾರಿಸಿದರು ಮತ್ತು ಸಿಎಂ ಧಾಮಿಗೆ ಕೆಲವು ಪ್ರಮುಖ ಸೂಚನೆಗಳನ್ನು ನೀಡಿದರು ಎಂದಿದೆ. ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆಯಲಾಗಿದೆ. ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ಸ್ಥಿತಿ ಮತ್ತು ಅವರಿಗೆ ಒದಗಿಸಲಾದ ಆಹಾರ ಮತ್ತು ದಿನನಿತ್ಯದ ವಸ್ತುಗಳ ಬಗ್ಗೆಯೂ ಪ್ರಧಾನಿ ವಿಚಾರಿಸಿದರು. ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾದ ಸಿಬ್ಬಂದಿಯ ಸ್ಥಿತಿ ಮತ್ತು ಸುರಕ್ಷತೆಯ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ ಎಂದು ಉತ್ತರಾಖಂಡದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ. ಸಿಲ್ಕ್ಯಾರಾದಿಂದ ಬಾರ್ಕೋಟ್ಗೆ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಭಾಗವು ನವೆಂಬರ್ ೧೨ ರಂದು ಕುಸಿದಿದೆ ಮತ್ತು ಸುರಂಗದ ಸಿಲ್ಕ್ಯಾರಾ ಭಾಗದಲ್ಲಿ ೬೦ ಮೀಟರ್ ವಿಸ್ತಾರದಲ್ಲಿ ೪೧ ಕಾರ್ಮಿಕರು ಸಿಲುಕಿದ್ದಾರೆ.
ಮಾಜಿ ನೌಕಾಪಡೆ ಅಧಿಕಾರಿಗಳಿಗೆ ಗಲ್ಲು: ಭಾರತದ ಮೇಲ್ಮನವಿ ವಿಚಾರಣೆಗೆ ಅನುಮತಿ
ನವದೆಹಲಿ, ನ. ೨೪: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳಿಗೆ ಮರಣ ದಂಡನೆ ವಿಧಿಸಿರುವುದರ ವಿರುದ್ಧ ಭಾರತ ಸಲ್ಲಿಸಿರುವ ಮೇಲ್ಮನವಿಯನ್ನು ಕತಾರ್ ಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದ್ದು, ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ಕತಾರ್ ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ೮ ಮಂದಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಮರಣ ದಂಡನೆ ವಿಧಿಸಿರುವುದರ ವಿರುದ್ಧ ಭಾರತ ಸಲ್ಲಿಸಿರುವ ಮೇಲ್ಮನವಿಯನ್ನು ಕತಾರ್ ಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ. ಭಾರತ ಸರ್ಕಾರ ಅರ್ಜಿ ಸಲ್ಲಿಸಿದ್ದು, ಕತಾರ್ ನ್ಯಾಯಾಲಯವು ಶೀಘ್ರವೇ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ವರದಿಗಳು ಹೇಳಿವೆ. ಆದರೆ, ಈ ವಿಚಾರವಾಗಿ ವಿದೇಶಾಂಗ ಸಚಿವಾಲಯದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಚೀನಾದಲ್ಲಿನ ಹೆಚ್೯ಎನ್೨ ಪರಿಸ್ಥಿತಿ ಬಗ್ಗೆ ಗಮಮ: ಕೇಂದ್ರ ಸರ್ಕಾರ
ನವದೆಹಲಿ, ನ. ೨೪: ಚೀನಾದಲ್ಲಿ ಹೆಚ್೯ಎನ್೨ ಪ್ರಕರಣಗಳು ಹೆಚ್ಚುತ್ತಿರುವ ಪರಿಸ್ಥಿತಿಯನ್ನು ನಾವು ಸೂಕ್ಷö್ಮವಾಗಿ ಗಮನಿಸುತ್ತಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಹೆಚ್೯ ಎನ್೨ ಪ್ರಕರಣಗಳು ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಉಸಿರಾಟದ ಸಮಸ್ಯೆ ಉಲ್ಬಣಗೊಂಡಿದೆ. ಚೀನಾದಲ್ಲಿ ವರದಿಯಾಗಿರುವ ಏವಿಯನ್ ಇನ್ಫ್ಲುಯೆಂಜಾ ಪ್ರಕರಣ ಹಾಗೂ ಉಸಿರಾಟದ ಕಾಯಿಲೆಯ ಸಮೂಹಗಳಿಂದ ಭಾರತಕ್ಕೆ ಕಡಿಮೆ ಅಪಾಯವಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಆ ದೇಶದಲ್ಲಿ ಪ್ರಸ್ತುತ ಇನ್ಫ್ಲುಯೆಂಜಾ ಪರಿಸ್ಥಿತಿಯಿಂದ ಹೊರಹೊಮ್ಮಬಹುದಾದ ಯಾವುದೇ ರೀತಿಯ ತುರ್ತುಸ್ಥಿತಿಯನ್ನು ಎದುರಿಸುವುದಕ್ಕೆ ಭಾರತ ಸಿದ್ಧವಾಗಿದೆ ಎಂದು ಸಚಿವಾಲಯ ಹೇಳಿದೆ. ಕೆಲವು ಮಾಧ್ಯಮ ವರದಿಗಳು ಉತ್ತರ ಚೀನಾದಲ್ಲಿ ಮಕ್ಕಳಲ್ಲಿ ಉಸಿರಾಟದ ಕಾಯಿಲೆಯ ಪ್ರಕರಣಗಳ ಕ್ಲಸ್ಟರಿಂಗ್ನ್ನು ವರದಿ ಮಾಡಿದ್ದು, ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸಹ ಹೇಳಿಕೆಯನ್ನು ನೀಡಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಕಳೆದ ಕೆಲವು ವಾರಗಳಲ್ಲಿ ಚೀನಾದಲ್ಲಿ ಉಸಿರಾಟದ ಕಾಯಿಲೆಗಳ ಹೆಚ್ಚಳವು ವರದಿಯಾಗಿದೆ. ಮಕ್ಕಳಲ್ಲಿ ಉಸಿರಾಟದ ಕಾಯಿಲೆಯ ಸಾಮಾನ್ಯ ಕಾರಣಗಳನ್ನು ಸೂಚಿಸಲಾಗಿದೆ ಮತ್ತು ಅಸಾಮಾನ್ಯ ರೋಗಕಾರಕ ಅಥವಾ ಯಾವುದೇ ಅನಿರೀಕ್ಷಿತ ಕ್ಲಿನಿಕಲ್ ಸಮಸ್ಯೆಗಳನ್ನು ಗುರುತಿಸಲಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಮಹಿಳೆಯರಿಗೆ ರಕ್ಷಣೆ ನೀಡಲು ಕರೆ
ಬೆಂಗಳೂರು, ನ. ೨೪: ಪೊಲೀಸರು ವಿಶೇಷವಾಗಿ ಮಹಿಳೆಯರಿಗೆ ರಕ್ಷಣೆ ನೀಡಬೇಕು, ತಮ್ಮ ಕಾರ್ಯವ್ಯಾಪ್ತಿಯಲ್ಲಿ ನಿಗಾ ಇಡಬೇಕು ಮತ್ತು ಅಪರಾಧ ತಡೆಗೆ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸ್ಥಾಪಿಸಲಾದ ‘ಸೇಫ್ ಸಿಟಿ ಕಮಾಂಡ್ ಸೆಂಟರ್'ನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಇಂತಹ ಸೌಲಭ್ಯಗಳ ಪ್ರಯೋಜನಗಳು ಜನರಿಗೆ ತಲುಪಬೇಕು ಎಂದರು. ಬೆಂಗಳೂರಿನಲ್ಲಿ ಸರಗಳ್ಳತನ, ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅಪರಾಧಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ನಿಗ್ರಹಿಸಲು ‘ನಿರ್ಭಯಾ ನಿಧಿ’ ಬಳಸಿ ೬೬೮ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಈ ಕೇಂದ್ರವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. ನಗರವು ಎಲ್ಲರಿಗೂ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಒಂಟಿ ಮನೆಗಳ ಮೇಲೆ ಮತ್ತು ಒಂಟಿ ಮಹಿಳೆಯರು ವಾಸಿಸುವ ನಿವಾಸಗಳ ಮೇಲೆ ಪೊಲೀಸರು ನಿಗಾ ಇಡಬೇಕು ಎಂದರು. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಆಯಾ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸಿದ್ದರಾಮಯ್ಯ ಸೂಚಿಸಿದರು. ಅಪರಾಧಗಳು ನಡೆಯದಂತೆ ನೋಡಿಕೊಳ್ಳಿ ಎಂದು ಪೊಲೀಸರಿಗೆ ಸೂಚಿಸಿದ ಅವರು, ಅಪರಾಧ ನಡೆದ ನಂತರ ಅಪರಾಧಿಯನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಇದರಿಂದ ಸಮಾಜದಲ್ಲಿ ತಪ್ಪು ಕೆಲಸ ಮಾಡುವವರಿಗೆ ಬಿಸಿ ಮುಟ್ಟಿಸಿದಂತಾಗುತ್ತದೆ ಎಂದು ಹೇಳಿದರು.