ಐಗೂರು, ನ. ೨೫: ಐಗೂರು ಮತ್ತು ಕಿರಗಂದೂರು ಭಾಗದ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಹೆಮ್ಮರವಾಗಿ ಬೆಳೆಸಬಹುದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂಥರ್‌ಗೌಡ ಕಾರ್ಯಕರ್ತರಿಗೆ ಕರೆ ನೀಡಿದರು.

ಅವರು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಐಗೂರಿನ ಕೃಷಿ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಭಾಗದ ಕಬ್ಬಿಣ ಸೇತುವೆಯ ನಿರ್ಮಾಣದ ಸಮಸ್ಯೆಯನ್ನು ಶಕ್ತಿ ಪತ್ರಿಕೆಯ ವರದಿಯಲ್ಲಿ ಮತ್ತು ಕಾಂಗ್ರೆಸ್ ಮುಖಂಡರಾದ ಎಸ್.ಎಂ. ಚಂಗಪ್ಪನವರ ಮುಖಾಂತರ ತಿಳಿದಿದ್ದು, ಕಬ್ಬಿಣ ಸೇತುವೆಯ ಕಾಯಕಲ್ಪಕ್ಕೆ ಸರಕಾರದ ಜೊತೆ ವ್ಯವಹರಿಸುವುದಾಗಿ ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ ಮಾತನಾಡಿ, ಗ್ಯಾರಂಟಿ ಹಣವು ಬರದೇ ಇರುವವರು ಅದರ ದಾಖಲೆಗಳನ್ನು ಸರಿಪಡಿಸಿದ ನಂತರ ಬರದೇ ಇದ್ದಲ್ಲಿ ತಿಳಿಸಿದರೆ ಸರಿಪಡಿಸುವುದಾಗಿ ತಿಳಿಸಿದರು. ವಲಯ ಅಧ್ಯಕ್ಷ ಕೆ.ಪಿ. ಮುತ್ತಪ್ಪ ಮಾತನಾಡಿ ತಾಲೂಕು ಕಚೇರಿಗಳಲ್ಲಿ ಈಗಿನ ಶಾಸಕರು ಬಂದ ನಂತರ ಬದಲಾವಣೆಗಳಾಗಿವೆ ಎಂದು ತಿಳಿಸಿದರು.

ಮಾಜಿ ಪಂಚಾಯಿತಿ ಸದಸ್ಯ ಕೆ.ಪಿ. ದಿನೇಶ್ ಮಾತನಾಡಿ, ಈ ಭಾಗದಲ್ಲಿ ಸ್ಮಶಾನಕ್ಕೆ ಜಾಗ ಇಲ್ಲದಿರುವುದನ್ನು ಶಾಸಕರ ಗಮನಕ್ಕೆ ತಂದರು. ಹಾರಂಗಿ ಹಿನ್ನೀರಿನ ಮುಟ್ಲು ಭಾಗವನ್ನು ಪ್ರವಾಸಿ ತಾಣವನ್ನಾಗಿ ಮಾಡಿದರೆ ಐಗೂರು ಭಾಗವು ಅಭಿವೃದ್ಧಿ ಹೊಂದುತ್ತದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಮಾತನಾಡಿದರು.

ಈ ಸಂದರ್ಭ ಜೆ.ಡಿ.ಎಸ್ ಪಕ್ಷದಿಂದ ಹೊನ್ನಪ್ಪ, ಗಣೇಶ, ಪಾಪಣ್ಣ, ಶೋಭ ಹೊನ್ನಪ್ಪ, ಮೇಘನ್, ಬಲ್ಲಡ್ಕ ಬಾಲಕೃಷ್ಣ, ಐಗೂರು ಸುಬ್ಬಯ್ಯ, ಮತ್ತು ಬಿ.ಜೆ.ಪಿ. ಪಕ್ಷದಿಂದ ವಿಶ್ವನಾಥ ಅರಸ್, ಸುಬ್ರಮಣಿ, ರವಿ, ರೋಶನ್, ದಿನೇಶ್ ಶೆಟ್ಟಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ನಂತರ ಶಾಸಕರು ಸಮೀಪದ ದುರ್ಗಾ ನಗರಕ್ಕೆ ಭೇಟಿಕೊಟ್ಟು ಅಲ್ಲಿಯ ಜನರ ಅಹವಾಲುಗಳನ್ನು ಸ್ವೀಕರಿಸಿದರು. ಅಲ್ಲಿಯ ಕಿರು ಸೇತುವೆಯನ್ನು ಸರಿಪಡಿಸಲು ಆದೇಶಿಸಿರುವುದಾಗಿ ತಿಳಿಸಿದರು. ಸಭೆಯಲ್ಲಿ ಡಿಸಿಸಿ ಉಪಾಧ್ಯಕ್ಷ ಲೋಕೇಶ್, ಜಿಲ್ಲಾ ಕೆಇಬಿ ಸಲಹಾ ಸಮಿತಿ ಮಾಜಿ ಸದಸ್ಯ ಧರ್ಮಪ್ಪ, ಬೂತ್ ಅಧ್ಯಕ್ಷ ಭಾರನ ಭರತ್‌ಕುಮಾರ್, ಆರ್‌ಎಂಸಿ ಮಾಜಿ ಸದಸ್ಯ ಮಚ್ಚಂಡ ಅಶೋಕ್, ಯೋಗೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ನಂದಿನಿ ಅರಸ್, ಸಬಿತಾ ಚೆನ್ನಕೇಶವ, ಮತ್ತು ಡಿ.ಪಿ. ಕೃಷ್ಣಪ್ಪ ಭಾಗವಹಿಸಿದ್ದರು.