ತಮಿಳುನಾಡಿಗೆ ಒಂದು ತಿಂಗಳು ನೀರು ಹರಿಸುವಂತೆ ನಿರ್ದೇಶನ
ನವದೆಹಲಿ, ನ. ೨೩: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲೇ ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದ್ದು, ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಇಂದು ಸಭೆ ನಡೆಸಿದ ಅWಖಅ, ನ್ಯಾಯಾಧಿಕರಣ ಹಾಗೂ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪಾಲಿಸುವಂತೆ ಹೇಳಿ ತಾ. ೨೩ ರಿಂದ ಡಿಸೆಂಬರ್ ೨೩ ರವರಗೆ ಪ್ರತಿನಿತ್ಯ ೨೭೦೦ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದೆ. ಡಿಸೆಂಬರ್ ಅವಧಿಯಲ್ಲಿ ಹರಿಸಬೇಕಿರುವ ೬ ಟಿಎಂಸಿ ನೀರು ಹಾಗೂ ಬಾಕಿ ಉಳಿಸಿಕೊಂಡಿರುವ ೧೧ ಟಿಎಂಸಿ ನೀರು ಸೇರಿದಂತೆ ಒಟ್ಟು ೧೭ ಟಿಎಂಸಿ ನೀರು ಹರಿಸುವಂತೆ ಸಭೆಯಲ್ಲಿ ತಮಿಳುನಾಡು ಬೇಡಿಕೆ ಇಟ್ಟಿದೆ. ತಮಿಳುನಾಡು ಬೇಡಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕರ್ನಾಟಕದ ಅಧಿಕಾರಿಗಳು, ರಾಜ್ಯದಲ್ಲಿ ಈಗ ಬರ ಪರಿಸ್ಥಿತಿ ಇದೆ. ತಮಿಳುನಾಡು ೧೭ಟಿಎಂಸಿ ನೀರು ಕೇಳುತ್ತಿರುವುದಕ್ಕೆ ಅರ್ಥವೇ ಇಲ್ಲ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲ. ಕುಡಿಯುವುದಕ್ಕೂ ನೀರು ಸಂಗ್ರಹ ಇಲ್ಲ. ಕರ್ನಾಟಕದಲ್ಲಿ ಮುಂದೆ ಮಳೆಯಾಗುವ ಸಾಧ್ಯತೆ ಸಹ ಕಡಿಮೆ. ತಮಿಳುನಾಡು ರಾಜ್ಯದಲ್ಲಿ ಈಗ ಹೆಚ್ಚು ಮಳೆಯಾಗುತ್ತಿದೆ. ಹಿಂಗಾರು ಮಾರುತಗಳು ಪ್ರಬಲವಾಗಿವೆ, ಮಳೆ ಹೆಚ್ಚು ಸುರಿಯುತ್ತಿದೆ. ತಮಿಳುನಾಡಿಗೆ ನೀರು ಬಿಟ್ಟರೆ ವಾಪಸ್ ತೆಗೆದುಕೊಳ್ಳಲು ಸಾಧ್ಯವೆ? ಹೀಗಾಗಿ ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ವಾದಿಸಿದ್ದಾರೆ. ಅಂತಿಮವಾಗಿ ತಮಿಳುನಾಡು ಬೇಡಿಕೆ ತಿರಸ್ಕರಿಸಿದ ಅWಖಅ, ಕರ್ನಾಟಕಕ್ಕೆ ಒಂದು ತಿಂಗಳು ಅಂದರೆ ತಾ. ೨೩ ರಿಂದ ಡಿಸೆಂಬರ್ ೨೩ ರವರೆಗೆ ಪ್ರತಿನಿತ್ಯ ೨೭೦೦ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿದೆ.
ರೂ. ೧೦೦ ಕೋಟಿ ವಂಚನೆ : ನಟ ಪ್ರಕಾಶ್ ರಾಜ್ಗೆ ಇಡಿ ಸಮನ್ಸ್
ಚೆನ್ನೆöÊ, ನ. ೨೩: ತಿರುಚಿರಾಪಳ್ಳಿ ಮೂಲದ ಜ್ಯುವೆಲ್ಲರಿ ಗ್ರೂಪ್ನ ವಿರುದ್ಧ ರೂ. ೧೦೦ ಕೋಟಿ ವಂಚನೆಗೆ ಸಂಬAಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಅವರ ವಿಚಾರಣೆಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ. ತನಿಖೆಯು ತಿರುಚಿರಾಪಳ್ಳಿ ಮೂಲದ ಪಾಲುದಾರಿಕೆ ಸಂಸ್ಥೆಯಾದ ಪ್ರಣವ್ ಜ್ಯುವೆಲರ್ಸ್ ವಿರುದ್ಧದ ಪ್ರಕರಣಕ್ಕೆ ಸಂಬAಧಿಸಿದೆ. ತಾ. ೨೦ ರಂದು ಆ ಸಂಸ್ಥೆಯ ಮೇಲೆ ದಾಳಿ ನಡೆಸಿ, ರೂ. ೨೩.೭೦ ಲಕ್ಷ ಹಾಗೂ ಚಿನ್ನಾಭರಣವನ್ನು ಇಡಿ ವಶ ಪಡಿಸಿಕೊಂಡಿತ್ತು ಪ್ರಕಾಶ್ ರಾಜ್ ಈ ಕಂಪೆನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಮುಂದಿನ ವಾರ ಚೆನ್ನೈನಲ್ಲಿರುವ ಇಡಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಹಿಂದಿ ಮತ್ತು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ವಿವಿಧ ಪಾತ್ರಗಳ ಮೂಲಕ ಹೆಸರಾಗಿರುವ ಪ್ರಕಾಶ್ ರಾಜ್, ಬಿಜೆಪಿಯ ತೀವ್ರ ಟೀಕಾಕಾರರಾಗಿದ್ದಾರೆ. ತಮಿಳುನಾಡು ಪೊಲೀಸ್ ಆರ್ಥಿಕ ಅಪರಾಧ ವಿಭಾಗದ ಎಫ್ಐಆರ್ನಿಂದ ಇಡಿ ಪ್ರಕರಣ ದಾಖಲಿಸಿದೆ. ಪೊಲೀಸ್ ದೂರಿನ ಪ್ರಕಾರ, ಪ್ರಣವ್ ಜ್ಯುವೆಲರ್ಸ್ ಮತ್ತು ಇತರರು ಚಿನ್ನದ ಹೂಡಿಕೆ ಯೋಜನೆಯ ನೆಪದಲ್ಲಿ ಸಾರ್ವಜನಿಕರಿಂದ ರೂ. ೧೦೦ ಕೋಟಿಗಳನ್ನು ಹೆಚ್ಚಿನ ಆದಾಯದ ಭರವಸೆಯೊಂದಿಗೆ ಸಂಗ್ರಹಿಸಿದ್ದಾರೆ ಎಂದು ಫೆಡರಲ್ ಏಜೆನ್ಸಿ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಧಾನಿ ಮೋದಿ ಗುರಿಯಾಗಿಸಿ ಹೇಳಿಕೆ: ರಾಹುಲ್ ಗಾಂಧಿಗೆ ನೋಟೀಸ್
ನವದೆಹಲಿ, ನ. ೨೩: ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ‘ಪನೌತಿ', ‘ಪಿಕ್ಪಾಕೆಟ್' ಮತ್ತು ಉದ್ಯಮಿಗಳ ಸಾಲ ಮನ್ನಾಗಾರ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ (ಇಸಿ) ಗುರುವಾರ ಶೋಕಾಸ್ ನೋಟೀಸ್ ಜಾರಿ ಮಾಡಿದ್ದು, ಶನಿವಾರ ಸಂಜೆಯೊಳಗೆ ಉತ್ತರಿಸುವಂತೆ ಸೂಚಿಸಿದೆ. ಈ ಸಂಬAಧ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್ ಮಾಜಿ ಅಧ್ಯಕ್ಷರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಹಿರಿಯ ನಾಯಕರೊಬ್ಬರು ಇಂತಹ ಭಾಷೆಯನ್ನು ಬಳಸುವುದು "ಅಯೋಗ್ಯ" ಎಂದು ಕಿಡಿ ಕಾರಿತ್ತು. ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುವುದು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದಿರುವ ಬಿಜೆಪಿ ನಾಯಕರು, ರಾಹುಲ್ ಗಾಂಧಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಇಸಿಗೆ ಒತ್ತಾಯಿಸಿದ್ದರು. ಪಿಎಂ ಎಂದರೆ ‘ಪನೌತಿ’ ಎಂದು ರಾಹುಲ್ ಗಾಂಧಿ ಹೇಳಿದ್ದರು. ಉದ್ಯಮಿ ಗೌತಮ್ ಅದಾನಿ ಅವರು ಜನರ ಜೇಬಿಗೆ ಕನ್ನಾ ಹಾಕುವಾಗ ಮೋದಿ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದರು. ಭಾರತ ಕ್ರಿಕೆಟ್ ತಂಡಕ್ಕೆ ಪ್ರಧಾನಿ ಮೋದಿ ದುರಾದೃಷ್ಟ ತಂದರು ಎಂದು ಹೀಗಳೆದಿದ್ದರು. ಹಿಂದಿಯ ಪನೌತಿ ಎಂಬ ಪದಕ್ಕೆ ಕನ್ನಡದಲ್ಲಿ ಅಪಶಕುನ ಎನ್ನಲಾಗುತ್ತದೆ.
ರಜೌರಿ ಎನ್ಕೌಂಟರ್: ಇಬ್ಬರು ಉಗ್ರರು ಹತ
ರಜೌರಿ (ಜಮ್ಮು ಮತ್ತು ಕಾಶ್ಮೀರ), ನ. ೨೩: ಜಮ್ಮು ಮತ್ತು ಕಾಶ್ಮೀರ ರಜೌರಿ ಜಿಲ್ಲೆಯ ಧರ್ಮಸಾಲ್ನ ಬಾಜಿಮಾಲ್ ಪ್ರದೇಶದಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಎನ್ಕೌಂಟರ್ನಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಪ್ರಮುಖ ಭಯೋತ್ಪಾದಕ ಖಾರಿ ಸೇರಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ. ಎನ್ಕೌಂಟರ್ನಲ್ಲಿ ಹತ್ಯೆಯಾಗಿರುವ ಖಾರಿ ಪಾಕಿಸ್ತಾನಿ ಪ್ರಜೆಯಾಗಿದ್ದು, ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಉನ್ನತ ಶ್ರೇಣಿಯ ಭಯೋತ್ಪಾದಕ ಎಂದು ತಿಳಿದುಬಂದಿದೆ. ಈತ ಕಾಲಾಕೋಟ್ ಅರಣ್ಯದ ಗುಹೆ ಒಂದರಲ್ಲಿ ಅಡಗಿ ಕುಳಿತಿದ್ದ. ಅತ್ಯಂತ ಚತುರ ಸ್ನೈಪರ್ ಆಗಿದ್ದ ಈತನಿಗೆ ಸಾಕಷ್ಟು ತರಬೇತಿಯೂ ಸಿಕ್ಕಿತ್ತು. ಈತನನ್ನು ರಜೌರಿ ಹಾಗೂ ಪೂಂಚ್ನಲ್ಲಿ ಉಗ್ರ ಚಟುವಟಿಕೆಗಳ ಪುನರಾರಂಭಿಸಲುವ ಸಲುವಾಗಿಯೇ ಉಗ್ರ ಸಂಘಟನೆಗಳು ರವಾನಿಸಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಗ್ರ ಖಾರಿ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ದೇಶಗಳಲ್ಲಿ ತರಬೇತಿ ಪಡೆದಿದ್ದ. ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಅನುಭವ ಈತನಿಗೆ ಇತ್ತು. ಕಳೆದ ಒಂದು ವರ್ಷಗಳ ಹಿಂದೆ ಈತ ಭಾರತದ ಒಳಗೆ ನುಸುಳಿದ್ದ. ಜಮ್ಮು ಮತ್ತು ಕಾಶ್ಮೀರದ ರಜೌರಿ - ಪುಂಚ್ ಭಾಗಗಳಲ್ಲಿ ಈತ ಸಕ್ರಿಯನಾಗಿದ್ದ. ಕಣಿವೆ ರಾಜ್ಯದ ದಂಗ್ರಿ ಹಾಗೂ ಕಂದ್ರಿಯಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ಈತನೇ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿದೆ.