ಮಡಿಕೇರಿ, ನ. ೨೦: ಮುಖ್ಯಮಂತ್ರಿಗಳ ಪರಿಹಾರ ನಿಧಿ, ಪ್ರಕೃತಿ ವಿಕೋಪ ನಿಧಿಯಡಿ ಈ ಹಿಂದೆ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ನಿಗದಿಮಾಡಲಾದ ಕಾಮಗಾರಿಗಳನ್ನು ಬದಲಾವಣೆ ಮಾಡುವುದರೊಂದಿಗೆ ಹಲವು ಕಾಮಗಾರಿಗಳನ್ನು ತಡೆಹಿಡಿಯುವ ಕೆಲಸವನ್ನು ಜಿಲ್ಲೆಯ ಹಾಲಿ ಶಾಸಕರುಗಳು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಹಾಗೂ ಕೆ.ಜಿ. ಬೋಪಯ್ಯ ಅವರುಗಳು ಆರೋಪಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಪ್ಪಚ್ಚು ರಂಜನ್ ಅವರು ಪ್ರಕೃತಿ ವಿಕೋಪ ನಿಧಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ ಟೆಂಡರ್ ಪ್ರಕ್ರಿಯೆ ನಡೆಸಿ ಸಂಬAಧಿಸಿದ ಇಲಾಖೆಗೆ ವಹಿಸಲಾಗಿರುವ ಕಾಮಗಾರಿಗಳನ್ನು ಯಾವುದೇ ಬದಲಾವಣೆ ಮಾಡುವಂತಿಲ್ಲ. ಹೀಗಿದ್ದರೂ ಮಡಿಕೇರಿ ಶಾಸಕರಾದ ಡಾ. ಮಂಥರ್‌ಗೌಡ ಅವರು ಅಂತಹ ಕಾಮಗಾರಿಗಳನ್ನು ಬದಲಾವಣೆ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ಮೂಲಕ ಕ್ರಮಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು. ೨೦೧೮ರಲ್ಲಿ ಪ್ರವಾಹ ಉಂಟಾದ ಸಂದರ್ಭ ಹಾರಂಗಿ ಜಲಾಶಯದ ಹೂಳೆತ್ತುವ ಕಾಮಗಾರಿಗೆ ರೂ. ೧೩೮ ಕೋಟಿ ಹಣ ಬಿಡುಗಡೆಯಾಗಿ ೧೩೧ ಕೋಟಿಗೆ ಟೆಂಡರ್ ಆಗಿದ್ದರೂ ಆ ಕೆಲಸವನ್ನು

(ಮೊದಲ ಪುಟದಿಂದ) ಇನ್ನೂ ಪ್ರಾರಂಭ ಮಾಡಿಲ್ಲ. ಸೇತುವೆ ಕಾಮಗಾರಿಗಳು ನಡೆದಿಲ್ಲ. ನಾಲೆಗಳ ಅಭಿವೃದ್ಧಿಗಾಗಿ ೪೯ ಕೋಟಿ ರೂ. ಮಂಜೂರು ಮಾಡಿಸಿ ಟೆಂಡರ್ ಆಗಿದ್ದರೂ ಕೂಡ ಆ ಕೆಲಸವನ್ನು ತಡೆಹಿಡಿಯಲಾಗಿದೆ ಎಂದು ರಂಜನ್ ಆಪಾದಿಸಿದರು. ೨೩೦ ಕೋಟಿಗೂ ಅಧಿಕ ಕೆಲಸಗಳನ್ನು ಮಡಿಕೇರಿ ಕ್ಷೇತ್ರದಲ್ಲಿ ಕೈಗೊಳ್ಳಲು ಬಾಕಿಯಿದೆ. ಈಗಿನ ಸರ್ಕಾರಕಾಗಲಿ, ಶಾಸಕರುಗಳಿಗಾಗಲಿ ಅಭಿವೃದ್ಧಿ ಪರ ಚಿಂತನೆ ಇಲ್ಲ. ಶಾಸಕರಾಗಿ ಗೆದ್ದ ನಂತರ ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಕೆಲಸ ಮಾಡಬೇಕು. ಮಡಿಕೇರಿ ಶಾಸಕರಿಗೆ ಕರೆ ಮಾಡಿದರೂ ಕೂಡ ಅವರು ಕರೆ ಸ್ವೀಕರಿಸುವುದಿಲ್ಲ. ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಮಾಡಿದರೆ ತೀವ್ರ ವಿರೋಧ ಎದುರಿಸಬೇಕಾಗುತ್ತದೆ ಎಂದು ರಂಜನ್ ಎಚ್ಚರಿಕೆಯಿತ್ತರು. ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಕಾಡುತ್ತಿದೆ. ವೈದ್ಯ ವೃತ್ತಿ ಹಿನ್ನೆಲೆಯುಳ್ಳ ಮಂಥರ್‌ಗೌಡ ಅವರು, ಶಾಸಕರಾದ ಬಳಿಕ ಇಲ್ಲಿನ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರುಗಳು ಆಸ್ಪತ್ರೆ ಬಿಟ್ಟು ಬೇರೆಡೆಗೆ ತೆರಳುತ್ತಿದ್ದಾರೆ ಎಂದು ರಂಜನ್ ಕುಟುಕಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಯಾರೇ ಅಭ್ಯರ್ಥಿಗಳಾದರೂ ನಾವು ಕೆಲಸ ಮಾಡಿ ಅವರನ್ನು ಗೆಲ್ಲಿಸುತ್ತೇವೆ ಎಂದು ಅವರು ಹೇಳಿದರು.

ಶ್ವೇತಪತ್ರ ಹೊರಡಿಸಲಿ: ಬೋಪಯ್ಯ

ವೀರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಎರಡೂ ಕ್ಷೇತ್ರಗಳಲ್ಲೂ ಕೂಡ ಪ್ರಕೃತಿ ವಿಕೋಪ ನಿಧಿಯ ಕಾಮಗಾರಿಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಅನೇಕ ಕೆಲಸಗಳು ಆರಂಭಗೊAಡಿದ್ದರೂ ಕೂಡ ಅವುಗಳನ್ನು ತಡೆ ಹಿಡಿಯಲಾಗಿದೆ. ಭಾಗಮಂಡಲದಲ್ಲೂ ಕೆಲಸಗಳಿಗೆ ತಡೆಯೊಡ್ಡಲಾಗಿದೆ. ಬಿಬಿಎಂಪಿ ಈ ಹಿಂದೆ ತಲಕಾವೇರಿಗೆ ೧ ಕೋಟಿ ನೀಡಿತ್ತು. ಇದರಲ್ಲಿ ಕಾವೇರಿ ಜಾತ್ರೆ ಸಂದರ್ಭ ಅರ್ಚಕರಿಗೆ, ತಕ್ಕ ಮುಖ್ಯಸ್ಥರಿಗೆ, ಪೊಲೀಸರಿಗೆ ಅನುಕೂಲವಾಗುವಂತೆ ವಸತಿ ಗೃಹ ನಿರ್ಮಿಸಲು ಯೋಜನೆ ಹಮ್ಮಿಕೊಳ್ಳಲಾಗಿತ್ತಾದರೂ ಇದುವರೆಗೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಬರ ಪರಿಹಾರ ಹಣ ಬಂದಿಲ್ಲ. ಬಜೆಟ್‌ನಲ್ಲೂ ಕೊಡಗಿಗೆ ಸೂಕ್ತ ಕೊಡುಗೆ ನೀಡಿಲ್ಲ, ಕೊಡಗಿನ ಅಭಿವೃದ್ಧಿಗೆ ಸಂಬAಧಿಸಿದAತೆ ಹಾಲಿ ಶಾಸಕರುಗಳು ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಡಗಿಗೆ ಏನನ್ನು ಕೊಡಲಾಗಿದೆ ಎಂಬ ಬಗ್ಗೆ ಶ್ವೇತ ಪತ್ರ ಹೊರಡಿಸುವಂತೆ ಬೋಪಯ್ಯ ಒತ್ತಾಯಿಸಿದರು.

ನಗರೋತ್ಥಾನ ಅನುದಾನ ಸರ್ಕಾರಕ್ಕೆ ವಾಪಸ್ಸಾಗಿದೆ ಎಂಬ ಕೆಲವರ ಆರೋಪಕ್ಕೆ ಪ್ರತಿಕ್ರಿಯಿಸಿದ ಕೆ.ಜಿ. ಬೋಪಯ್ಯ ಅವರು ನಗರೋತ್ಥಾನ ಅನುದಾನಕ್ಕೆ ಈಗಾಗಲೇ ಕಾಮಗಾರಿಗಳು ನಿಗದಿಯಾಗಿರುವುದರಿಂದ ಆ ಹಣ ವಾಪಸ್ಸಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ನಗರೋತ್ಥಾನ ಕಾಮಗಾರಿಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಶಾಸಕರು ಗಮನಹರಿಸಬೇಕು. ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದು, ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಜಿಲ್ಲಾ ವಕ್ತಾರ ಮಹೇಶ್ ಜೈನಿ ಉಪಸ್ಥಿತರಿದ್ದರು.