ಕೂಡಿಗೆ, ನ. ೨೦: ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹಾಸನದ ಅಮ್ಮ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಕೂಡುಮಂಗಳೂರು ಗ್ರಾ. ಪಂ. ಅಧ್ಯಕ್ಷ ಭಾಸ್ಕರ್ ನಾಯಕ್ ಉದ್ಘಾಟಿಸಿದರು. ನಂತರ ಮಾತನಾಡುತ್ತಾ ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ ಅವರಲ್ಲಿ ಅಪೌಷ್ಟಿಕತೆ ಕಾಡದಂತೆ ಎಚ್ಚರ ವಹಿಸಿದರೆ ಮಾತ್ರ ಮಕ್ಕಳಲ್ಲಿ ಕಣ್ಣಿನ ಆರೋಗ್ಯ ಉತ್ತಮವಾಗಿರು ತ್ತದೆ ಎಂದು ತಿಳಿಸಿದರು. ನಂತರ ಮಕ್ಕಳು ಅತೀ ಹೆಚ್ಚು ಸಮಯ ಮೊಬೈಲ್ ವೀಕ್ಷಿಸುವುದರಿಂದ ತಮ್ಮ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಪೋಷಕರು ಈ ಬಗ್ಗೆ ಗಮನಹರಿಸಬೇಕು. ಕಣ್ಣು ಮನುಷ್ಯನ ಬಹಳ ಮುಖ್ಯವಾದ ಅಂಗವಾಗಿದ್ದು ಅದನ್ನು ಜೋಪಾನ ಮಾಡಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಆ ನಿಟ್ಟಿನಲ್ಲಿ ಇಂದು ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭ ತಾಲೂಕು ವೈದ್ಯಾಧಿಕಾರಿ ಇಂದೂಧರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ. ಶಾಂತಿ, ಗ್ರಾಮ ಪಂಚಾಯಿತಿ ಸದಸ್ಯೆ ಫಿಲೋಮಿನಾ, ವೈದ್ಯರಾದ ಡಾ. ತೇಜಸ್ವಿನಿ, ನೇತ್ರಾಧಿಕಾರಿ ಆದರ್ಶ್ ಸೇರಿದಂತೆ ಉಮೇಶ್, ಪುಟ್ಟರಾಜ, ಚಂದ್ರೇಶ್, ಸಕೀನಾ, ಮಮತಾ, ಸೌಮ್ಯ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಸಿಬ್ಬಂದಿ ವರ್ಗದವರು ಹಾಜರಿದ್ದರು. ಶಿಬಿರದಲ್ಲಿ ೧೫೦ ಕ್ಕೂ ಹೆಚ್ಚು ಕಣ್ಣಿನ ರೋಗಿಗಳು ತಪಾಸಣೆ ಮಾಡಿಸಿಕೊಂಡರು.