ಮಡಿಕೇರಿ, ನ. ೧೮: ವಿದ್ಯಾರ್ಥಿಗಳೇ ಕನ್ನಡ ಭಾಷೆ-ಸಾಹಿತ್ಯವನ್ನು ಕಟ್ಟುವ ರೂವಾರಿಗಳಾಗಿದ್ದು, ಮಕ್ಕಳ ಕೈಗೆ ಕನ್ನಡದ ದೀವಟಿಗೆಯನ್ನು ಕೊಡಬೇಕೆಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಾಹಿತಿ ಶ್ರೀಮತಿ ವಿಜಯ ವಿಷ್ಣುಭಟ್ ಮತ್ತು ದಿ.ಡಿ.ಜೆ.ಪದ್ಮನಾಭ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ನಾಡಿನ ಕವಿ, ಸಾಹಿತಿಗಳ ಬರಹಗಳ ಬಗ್ಗೆ ಗಮನ ಹರಿಸಬೇಕು, ಶಿಕ್ಷಕರೇ ಸಾಹಿತ್ಯದ ಆಸ್ತಿಗಳಾಗಿದ್ದು, ಮಕ್ಕಳು ಅವರುಗಳನ್ನು ಬಳಸಿಕೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಪ್ರಾಥಮಿಕ ಹಂತದಿAದ ಕಾಲೇಜುವರೆಗಿನ ವಿದ್ಯಾರ್ಥಿಗಳ ಕೈಗೆ ಕನ್ನಡ ಧ್ವಜವನ್ನು ಕೊಟ್ಟರೆ ಪರಿಣಾಮಕಾರಿಯಾಗಲಿದೆ. ಈ ದಿಸೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮಾಚರಣೆಯ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುವ ಚಿಂತನೆಯನ್ನು ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಅವರು ಹೊಂದಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಪಠ್ಯದೊಂದಿಗೆ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಪ್ರೌಢಿಮೆ ಬರುತ್ತದೆ. ಕೇವಲ ಕನ್ನಡ ಮಾತ್ರವಲ್ಲ ಇಂಗ್ಲಿಷ್ ಕೂಡ ಬದುಕಿಗೆ ಅನಿವಾರ್ಯ, ಆದರೂ ಮಾತೃಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರೆ ನೀಡಿದರು.
ಮಹಿಳೆಯರು ತೊಡಗಿಸಿಕೊಳ್ಳಿ
ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಬರಹಗಾರರು ಮತ್ತಷ್ಟು ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಹೇಳಿದರು. ಸಾಹಿತಿ ವಿಜಯ ವಿಷ್ಣುಭಟ್ ಮತ್ತು ದಿ.ಡಿ.ಜೆ.ಪದ್ಮನಾಭ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕೊಡಗಿನ ಮಹಿಳಾ ಸಾಹಿತಿಗಳು’ ವಿಷಯ ಕುರಿತು ಮಾತನಾಡಿದ ಅವರು ; ಕೊಡಗಿನ ಗೌರಮ್ಮ ಹೆಸರಿನಲ್ಲಿ ಪ್ರಶಸ್ತಿ ಪ್ರಾರಂಭವಾದ ನಂತರ ಕೊಡಗು ಜಿಲ್ಲೆಯಲ್ಲಿ ಮಹಿಳಾ ಬರಹಗಾರರ ಸಂಖ್ಯೆ ಹೆಚ್ಚಾಗಿದೆ. ಆ ನಿಟ್ಟಿನಲ್ಲಿ ಇನ್ನಷ್ಟು ಮಹಿಳಾ ಬರಹಗಾರರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕನ್ನಡ, ಕೊಡವ, ಅರೆಭಾಷೆ ಸೇರಿದಂತೆ ಹಲವು ಭಾಷೆಗಳ ಅಭಿವೃದ್ಧಿಗೆ ಶ್ರಮಿಸಬೇಕು. ಜೊತೆಗೆ ಸಾಹಿತ್ಯದ ಮೂಲಕ ಸಮಾಜದ ಆಗುಹೋಗುಗಳನ್ನು ಅಭಿವ್ಯಕ್ತಪಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯವು ಓದುಗರ ಮನಸ್ಸನ್ನು ತಲುಪಬೇಕು. ಆ ನಿಟ್ಟಿನಲ್ಲಿ ಮಹಿಳಾ ಬರಹಗಾರರನ್ನು ಪ್ರೋತ್ಸಾಹಿಸಬೇಕು. ಆಧುನಿಕ ಸಮಾಜದಲ್ಲಿಯೂ ಸಹ ಆತ್ಮಚರಿತ್ರೆಯಲ್ಲಿ ಪುರುಷರಿಗೆ ಸಿಕ್ಕ ಪ್ರಾಮುಖ್ಯ, ಮಹಿಳಾ ಬರಹಗಾರರಿಗೆ ದೊರೆತಿಲ್ಲ. ಪುರುಷ ಮತ್ತು ಮಹಿಳೆಯರು ಸಮಾನರಾಗಿದ್ದು, ಪ್ರತಿಯೊಬ್ಬರನ್ನು ಗೌರವಿಸಬೇಕು ಎಂದರು.
ನಾಡಿನ ಭಾಷೆ ಉಳಿಸಬೇಕು
ಸಂತ ಜೋಸೆಫರ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ ಕೆ.ಜಯಲಕ್ಷಿö್ಮ ಅವರು ಕೊಡಗಿನ ಜನಪದ ಹಿನ್ನೆಲೆ ಕುರಿತು ಮಾತನಾಡಿ ; ಕೊಡಗು ಶ್ರೀಮಂತ ಜಾನಪದ ಸಂಸ್ಕೃತಿಯನ್ನು ಹೊಂದಿದೆ.
ಕೊಡಗು ಜಿಲ್ಲೆಯಲ್ಲಿ ಹಿರಿಯರನ್ನು ಗೌರವಿಸುವುದು, ಐನ್ಮನೆ ಸಂಸ್ಕೃತಿ, ಮದುವೆ ಪದ್ಧತಿ, ಕೈಲ್ಮುಹೂರ್ತ, ಹುತ್ತರಿ, ಹೀಗೆ ಸಂಸ್ಕೃತಿ, ಸಂಪ್ರದಾಯ, ಜಾನಪದ ವಿಶೇಷತೆಯನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ದಾಕ್ಷಾಯಣಿ ವಾಸುದೇವ ಮಾತನಾಡಿ ; ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಸಾಹಿತ್ಯ, ಭಾಷೆ ಅಭಿವೃದ್ಧಿ ಸಾಧ್ಯ. ನಾಡಿನ ಭಾಷೆ ಉಳಿಸಿ ಬೆಳೆಸುವುದರೊಂದಿಗೆ ಭವಿಷ್ಯ ರೂಪಿಸಿಕೊಳ್ಳುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಸಲಹೆ ಮಾಡಿದರು.
ರಾಜೇಶ್ವರಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಕೆ.ಪಿ.ಮಂದಣ್ಣ ಮಾತನಾಡಿ ; ಇಂತಹ ಅವಕಾಶಗಳು ಸಿಗುವದು ಎಲ್ಲರ ಸೌಭಾಗ್ಯವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಲೇಖಕರು, ಬರಹಗಾರರ ಪರಿಚಯ ಮಾಡಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಕೆ.ಟಿ.ಬೇಬಿ ಮ್ಯಾಥ್ಯೂ, ಅಂಬೆಕಲ್ ನವೀನ್, ಕುಡೆಕಲ್ ಸಂತೋಷ್, ರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ದಿವ್ಯಾ ಅರೂರು, ಕಸಾಪ ಸಂಘಟನಾ ಕಾರ್ಯದರ್ಶಿ ಪ್ರೇಮ ರಾಘವಯ್ಯ, ಸದಸ್ಯರುಗಳಾದ ಚುಮ್ಮಿ ದೇವಯ್ಯ, ಚಂದ್ರಶೇಖರ್, ವಾಸು ರೈ, ರೇಣುಕಾ ಕಿರಣ್, ಇತರರು ಇದ್ದರು. ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ವಿದ್ಯಾರ್ಥಿಗಳು ನಾಡ ಗೀತೆ ಹಾಗೂ ಕನ್ನಡ ಗೀತೆಗಳನ್ನು ಹಾಡಿದರು. ವಿದ್ಯಾಸಂಸ್ಥೆಯ ಉಪನ್ಯಾಸಕಿ ಪೂರ್ಣಿಮಾ ಸ್ವಾಗತಿಸಿದರೆ, ಶಿಕ್ಷಕಿ ಪಾರ್ವತಿ ಕಾರ್ಯಕ್ರಮ ನಿರೂಪಿಸಿ, ಸೌಮ್ಯ ವಂದಿಸಿದರು.