ಕಣಿವೆ, ನ. ೧೮: ಕಳೆದ ಮೂರು ದಿನಗಳ ಹಿಂದಷ್ಟೆ ಶಿಥಿಲಗೊಂಡು ಕುಸಿದಿದ್ದ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಶಕ್ತಿ’ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ವರದಿಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳು ಕುಸಿದಿದ್ದ ಕಟ್ಟಡದ ಮೇಲ್ಛಾವಣಿಗೆ ಮತ್ತೆ ಕಾಂಕ್ರೀಟ್ ಹಾಕುವ ಮೂಲಕ ಸರಿಪಡಿಸಲು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಧುಸೂದನ್ ಅವರಿಗೆ ಸೂಚಿಸಿದರು.
ಆಸ್ಪತ್ರೆಯ ಕಟ್ಟಡ ಹಳೆಯದಾಗಿದ್ದು ಮಳೆಯ ನೀರು ನಿಲುಗಡೆ ಕಡೆಗಳಲ್ಲಿ ಮೇಲ್ಛಾವಣಿ ಶಿಥಿಲಗೊಂಡು ಈ ರೀತಿ ಅವಘಡವಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ ಎಂದು ಡಿಹೆಚ್ಓ ಸತೀಶ್ ಹೇಳಿದರು. ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಶಾಸಕರೊಂದಿಗೆ ಚರ್ಚಿಸಿ ಸದ್ಯದಲ್ಲೇ ಕ್ರಮ ವಹಿಸಲಾಗುವುದು ಎಂದು ಡಾ.ಸತೀಶ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.