ಕುಶಾಲನಗರ, ನ. ೧೭: ರಸ್ತೆ ದಾಟುತ್ತಿದ್ದ ವೇಳೆ ಕಾರೊಂದು ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಕುಶಾಲನಗರ ದಲ್ಲಿ ನಡೆದಿದೆ.
ಕುಶಾಲನಗರ ಬಾಲಕಿಯರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಗಳಾದ ರೋಹಿಣಿ ಮತ್ತು ನಂದಿತಾ ಎಂಬವರುಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸಮೀಪದ ದೊಡ್ಡಹರವೆ ಗ್ರಾಮದಿಂದ ಬಸ್ ಮೂಲಕ ಬಂದು ಸ್ಥಳೀಯ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಶಾಲೆಗೆ ತೆರಳಲು ರಸ್ತೆ ದಾಟುತ್ತಿದ್ದ ಸಂದರ್ಭ ಬಿಳಿ ಮಾರುತಿ ವ್ಯಾನ್ ಮಕ್ಕಳಿಗೆ ಡಿಕ್ಕಿಯಾಗಿದೆ. ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಸೇರಿಸುವುದು ಬಿಟ್ಟು ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಓರ್ವ ವಿದ್ಯಾರ್ಥಿನಿಯ ಬಲಕಾಲಿಗೆ ಏಟಾಗಿದ್ದು, ಇನ್ನೊಬ್ಬಳ ಕಿವಿಗೆ ಗಾಯವಾಗಿದೆ. ತಕ್ಷಣ ಮಾಹಿತಿ ದೊರೆತ ಶಾಲೆಯ ತರಗತಿ ಶಿಕ್ಷಕರು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ.
ಆಸ್ಪತ್ರೆಯಲ್ಲಿ ಎಕ್ಸರೇ ತೆಗೆಸಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಹೆದ್ದಾರಿ ರಸ್ತೆ ಬದಿಯಲ್ಲಿರುವ ಶಾಲೆಗಳಿಗೆ ಕುಶಾಲನಗರದ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ತೆರಳುತ್ತಿದ್ದು, ಬೆಳಗ್ಗಿನ ವೇಳೆ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ವೇಗವಾಗಿ ಸಂಚರಿಸುವ ವಾಹನಗಳ ವೇಗಕ್ಕೆ ಕಡಿವಾಣ ಹಾಕುವ ಮೂಲಕ ಸಂಭವನೀಯ ಅಪಘಾತಗಳನ್ನು ತಪ್ಪಿಸುವಂತೆ ಕ್ರಮ ಕೈಗೊಳ್ಳಲು ವಿದ್ಯಾರ್ಥಿಗಳ ಪೋಷಕರು ಪೊಲೀಸ್ ಇಲಾಖೆಗೆ ಪತ್ರಿಕೆ ಮೂಲಕ ಕೋರಿದ್ದಾರೆ.