ಮಡಿಕೇರಿ, ನ. ೧೭: ಕನ್ನಡ ನಾಡಿನಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಮಾತನಾಡಬೇಕು ಎಂಬುದೇ ಕರ್ನಾಟಕ ರಾಜ್ಯದ ಕನ್ನಡಿಗರ ಒತ್ತಾಯವಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.
ಸೋಮವಾರಪೇಟೆ ಸಂತ ಜೋಸೆಫರ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಜರುಗಿದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಶ್ರೀ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಶಿಕ್ಷಣದ ವ್ಯವಸ್ಥೆಯನ್ನು ಪ್ರಾಥಮಿಕ ಹಂತದಿAದ ಮಾತ್ರ ಆಯಾ ಭಾಷೆಯಲ್ಲಿ ನಡೆಸಬೇಕೆಂದು ಆದೇಶಿಸಿದೆ ಎಂದು ಸ್ಮರಿಸಿದರು.
ಗಡಿಭಾಗದಲ್ಲಿ ಅನ್ಯ ಭಾಷಿಕರ ವಲಸೆ ಹೆಚ್ಚಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಮಲೆಯಾಳಂ, ತಮಿಳು ಮಾತ್ರವಲ್ಲ, ಅಸಾಂ, ಬಿಹಾರ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ನೇಪಾಳ ಮತ್ತಿತರ ರಾಜ್ಯಗಳ ಜನತೆ ತುಂಬಿದ್ದಾರೆ. ಅವರುಗಳ ಭಾಷೆಯನ್ನು ನಮ್ಮ ಮೇಲೆ ಹೇರಲಾಗುತ್ತಿದೆ. ಅವರುಗಳು ಕನ್ನಡ ಭಾಷೆಯನ್ನು ಕಲಿಯದೆ ಇಲ್ಲಿ ನೆಲೆಯೂರಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಹೆಸರೇ ಒಂದು ಚೈತನ್ಯದ ಚಿಲುಮೆಯಾಗಿದೆ. ಕರ್ನಾಟಕಕ್ಕೆ ತನ್ನದೇ ಆದ ಹಿರಿಮೆ, ಸಮನ್ವಯ, ಸಹಿಷ್ಣುತೆ, ಸಾಮರಸ್ಯ ಇದೆ.
ಏಕಿಕೃತ ಕರ್ನಾಟಕವು ಸ್ವತಂತ್ರ ಭಾರತದ ನಿಧಿಯಿದ್ದಂತೆ, ಕರ್ನಾಟಕ ಎಂದಿಗೂ ಸಂಸ್ಕೃತಿಯ ತೊಟ್ಟಿಲು ಆಗಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿ’ ಸೋಜಾ ಅವರು ಮಾತನಾಡಿ, ಕನ್ನಡ ಭಾಷೆಯ ಬೆಳವಣಿಗೆ ಕುರಿತು ಮಾತನಾಡಿ, ಕನ್ನಡ ಭಾಷೆ- ಸಾಹಿತ್ಯವನ್ನು ಪ್ರತಿಯೊಬ್ಬರು ಬೆಳೆಸಿ ಉಳಿಸುವಂತಾಗಬೇಕು ಎಂದು ಹೇಳಿದರು.
ಮೈಸೂರಿನ ಟಿ. ನರಸಿಪುರದ ಬಾಲ ಏಸು ದೇವಾಲಯದ ಧರ್ಮಗುರು ರೆ.ಫಾ. ಅಂತೋಣಿ ರಾಜ್ ಅವರು ಮಾತನಾಡಿ, ಸಂತ ಜೋಸೆಫರ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ರೆ.ಫಾ. ರಾಯಪ್ಪ ಅವರು ಕಳೆದ ಏಳು ವರ್ಷಗಳಿಂದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿAದ ಆಚರಿಸುತ್ತ ಬರುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.
ಕನ್ನಡ ಭಾಷೆ ಮತ್ತು ಸಾಹಿತ್ಯದೊಂದಿಗೆ ನಾಡು-ನುಡಿಗೆ ಮೊದಲ ಪ್ರಾಧಾನ್ಯತೆ ನೀಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕಾಗಿದೆ ಎಂದರು.
ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಡಿ. ವಿಜೇತ ಅವರು ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಸರಿ ಉತ್ತರ ಹೇಳಿದ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳು ಕನ್ನಡದ ಬಗ್ಗೆ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಎಂ. ರಾಯಪ್ಪ ಅವರು ಮಾತನಾಡಿ, ಕನ್ನಡ ಭಾಷೆ ಮತ್ತು ನಾಡು-ನುಡಿಯನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಕಳೆದ ಏಳು ವರ್ಷಗಳಿಂದ ನಮ್ಮ ವಿದ್ಯಾಸಂಸ್ಥೆಯಲ್ಲಿ ಪ್ರತಿ ನವೆಂಬರ್ ಮಾಸದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ರೂಪಿಸಿ ಆಚರಿಸುತ್ತಿದ್ದೇವೆ ಎಂದರು.
ವೇದಿಕೆಯಲ್ಲಿ ಸೋಮವಾರಪೇಟೆ ಜೆಸಿಐ ಅಧ್ಯಕ್ಷೆ ರುಬೀನ, ಸೋಮವಾರಪೇಟೆ ಒಎಲ್ವಿ ಕಾನ್ವೆಂಟಿನ ಸಿಸ್ಟರ್ಗಳಾದ ಸಿಂಥಿಯ ಮತ್ತು ವಿನಿತ ಮತ್ತು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ ಎಂ. ಶ್ರೀಧರ್ ಹೂವಲ್ಲಿ ಉಪಸ್ಥಿತರಿದ್ದರು.
ಸಂತ ಜೋಸೆಫರ ಶಾಲೆಯ ಪ್ರಾಥಮಿಕ, ಪ್ರೌಢ ಶಾಲಾ, ಪಿಯುಸಿ ವಿಭಾಗದ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಕಾರ್ಯಕ್ರಮಗಳು ಸಮಾರಂಭದಲ್ಲಿ ನೆರೆದ ವೀಕ್ಷಕರನ್ನು ಆಕರ್ಷಿಸಿದವು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಶ್ರೀನಿಧಿ ಮತು ತನ್ಮಯಿ ನಿರೂಪಿಸಿ, ವಿದ್ಯಾರ್ಥಿನಿ ನಿರ್ಮಿತ ಸ್ವಾಗತಿಸಿ, ವಿದ್ಯಾರ್ಥಿನಿ ಶ್ರೇಯಸ್ವಿತ ವಂದಿಸಿದರು.