ಐಗೂರು, ನ. ೧೭ : ಪ. ಜಾತಿ ಮತ್ತು ಪ. ಪಂಗಡದವರು ಸಮಾಜದಲ್ಲಿ ಮುಂದೆ ಬರಬೇಕಾದರೆ ತಮಗೆ ಆಗುವ ತೊಂದರೆಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಕರೆ ನೀಡಿದರು. ಹೊಸತೋಟ ಸಮುದಾಯ ಭವನದಲ್ಲಿ ಸಾರ್ವಜನಿಕರ ಕುಂದುಕೊರತೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ ಗ್ರಾಮದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಯಾವುದೇ ಅಕ್ರಮಗಳ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕುಶಾಲನಗರದ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯನ್ ಅವರು ತಿಳಿಸಿದರು. ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್ ಸ್ವಾಗತಿಸಿದರು. ಹರದೂರು ಪಂಚಾಯಿತಿ ಉಪಾಧ್ಯಕ್ಷ ಸಲೀಂ ಹೊಸಕೋಟ, ಸದಸ್ಯ ರಮೇಶ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.