ಮಡಿಕೇರಿ, ನ. ೧೭: ಕರ್ನಾಟಕ ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕರಾಗಿ ಮಾಜಿ ಸಚಿವ, ಪದ್ಮನಾಭನಗರ ಕ್ಷೇತ್ರದ ಹಾಲಿ ಶಾಸಕ ಆರ್. ಅಶೋಕ್ ಅವರನ್ನು ಆಯ್ಕೆ ಮಾಡಲಾಯಿತು.

ಬೆಂಗಳೂರಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಅಶೋಕ್ ಹೆಸರು ಅಂತಿಮಗೊಳಿಸಿ ಬರೋಬ್ಬರಿ ೬ ತಿಂಗಳ ಬಳಿಕ ವೀಕ್ಷಕರು ಅಧಿಕೃತ ಘೋಷಣೆ ಮಾಡಿದರು.

ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್, ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಇನ್ನಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಆರ್.ಅಶೋಕ್ ಹೆಸರನ್ನು ಬಸವರಾಜ ಬೊಮ್ಮಾಯಿ ಸೂಚಿಸಿದರೆ, ಉಳಿದ ಶಾಸಕರು ಅನುಮೋದನೆ ನೀಡಿದರು. ಕೆಲ ನಾಯಕರ ಅಸಮಾಧಾನದ ನಡುವೆಯೂ ವರಿಷ್ಠರು ಅಂತಿಮವಾಗಿ ಆರ್. ಅಶೋಕ್ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ.

ಆಯ್ಕೆ ಬಳಿಕ ಮಾತನಾಡಿದ ಆರ್. ಅಶೋಕ್, ತಳಮಟ್ಟದಿಂದ ಬಂದು ಪಕ್ಷ ಇಂದು ಉನ್ನತ ಸ್ಥಾನ ನೀಡಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರದ ದುರಾಡಳಿತವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ. ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ೨೮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ಮತ್ತು ಜನತೆಯ ನಡುವೆ ಬೆರೆತು ರಾಜ್ಯದ ಭ್ರಷ್ಟ ಕಾಂಗ್ರೆಸ್ ಆಡಳಿತದ ವಿರುದ್ಧ ತಾನು ಮತ್ತು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಜೋಡೆತ್ತಿನಂತೆ ಪಕ್ಷದ ಶಾಸಕರ ಬೆಂಬಲದೊAದಿಗೆ ಹೋರಾಟ ನಡೆಸುವುದಾಗಿ ಘೋಷಿಸಿದರು.

ಬಾಲ್ಯದಿಂದಲೇ ರಾಜಕಾರಣದ ಬಗ್ಗೆ ಆಕರ್ಷಣೆ ಹೊಂದಿದ್ದ ಆರ್. ಅಶೋಕ್, ೧೦ನೇ ವಯಸ್ಸಿನಿಂದ ಆರ್.ಎಸ್.ಎಸ್.ನಲ್ಲಿ ತೊಡಗಿಸಿಕೊಂಡಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭ ಪ್ರತಿಭಟನೆ ನಡೆಸಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ೧೯೯೫ರಲ್ಲಿ ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದ ಇವರು ೧೯೯೭ರಲ್ಲಿ ಉತ್ತರಹಳ್ಳಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ೧೯೯೪-೨೦೦೪ರಲ್ಲಿಯೂ ಸತತವಾಗಿ ಉತ್ತರಹಳ್ಳಿಯಿಂದ ಶಾಸಕರಾಗಿ ಆಯ್ಕೆಯಾಗಿ, ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಪದ್ಮನಾಭನಗರದಿಂದ ಸತತ ೪ ಬಾರಿ ಶಾಸಕರಾಗಿ ಆಯ್ಕೆಯಾಗಿ ರಾಜ್ಯ ರಾಜಕಾರಣದ ಮುಂಚೂಣಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ೨೦೦೬-೦೭ರಲ್ಲಿ ಮೊದಲ ಬಾರಿಗೆ ಸಚಿವರಾಗಿ ಆಯ್ಕೆಯಾದ ಅಶೋಕ್, ಉಪಮುಖ್ಯಮಂತ್ರಿಯಾಗಿ ಆರೋಗ್ಯ, ಗೃಹ, ಸಾರಿಗೆ ಹಾಗೂ ಕಂದಾಯ ಸಚಿವ ಸ್ಥಾನಗಳನ್ನು ಅಲಂಕರಿಸಿದ ಅನುಭವ ಹೊಂದಿದ್ದಾರೆ.