ಹೆಚ್.ಜೆ. ರಾಕೇಶ್
ಮಡಿಕೇರಿ, ನ. ೧೭: ಬೈಗುಳಗಳೆಂದರೆ ಜನರು ಕಿವಿಮುಚ್ಚಿಕೊಳ್ಳುತ್ತಾರೆ. ಅದರಿಂದ ದೂರವಿರಲೇ ಪ್ರಯತ್ನಿಸುತ್ತಾರೆ. ಸಿಟ್ಟು ಬಂದಾಗ, ಕಿರಿಕಿರಿ ಉಂಟಾದಾಗ ಬೈಗುಳದ ಮೂಲಕ ಅಸಹನೆ ಹೊರ ಹಾಕುವುದು ಸಹಜ. ಅದೇ ರೀತಿ ಗ್ರಾಮೀಣ ಭಾಗಗಳಲ್ಲಿ ಆಡುಭಾಷೆಯಲ್ಲಿಯೇ ಅನೇಕ ಬೈಗುಳಗಳು ಜನರ ಜೀವನ ಹಾಗೂ ಭಾವನೆಯೊಂದಿಗೆ ಬೆರೆತು ಹೋಗಿವೆ. ಆದರೆ, ಬೈಗುಳದಲ್ಲಿಯೂ ಒಂದು ಸಾಹಿತ್ಯವಿದೆ, ಸಾಹಿತ್ಯವಾಗಿಯೂ ಬೈಗುಳವನ್ನು ಬಳಸಿಕೊಳ್ಳಬಹುದೆಂಬದು ಬಹುತೇಕ ಯಾರಿಗೂ ತಿಳಿದಿಲ್ಲ. ಇಂತಹ ಬೈಗುಳಗಳಿಗೆ ಸಾಹಿತ್ಯ ಲೇಪನ ನೀಡಲು ಸಿರಿಗನ್ನಡ ವೇದಿಕೆ, ಅಲ್ಲಾರಂಡ ರಂಗ ಚಾವಡಿ ಮುಂದಾಗಿದೆ.
ಹೌದು.. ಸಾಹಿತ್ಯ ಎಂದರೆ ಗಂಭೀರತೆ ಇರಬೇಕು, ತಿಳಿಹಾಸ್ಯ ವಿದ್ದರೂ ಅದರಲ್ಲೊಂದು ಉದ್ದೇಶ, ಸಂದೇಶ ಇರಬೇಕು ಎಂಬ ಮಾನದಂಡಗಳಿವೆ. ಸಾಹಿತ್ಯ ಹಲವು ಆಯಾಮಗಳನ್ನು ಹೊಂದಿದೆ. ಕಥೆ, ಕಾದಂಬರಿ, ನಾಟಕ, ಕಾವ್ಯ, ಹಾಸ್ಯ, ಪ್ರಬಂಧ, ವೈಜ್ಞಾನಿಕ ಪ್ರಬಂಧ ಹೀಗೆ ಅನೇಕ ಪ್ರ್ರಾಕಾರದ ಸಾಹಿತ್ಯಗಳು ಜನಜನಿತವಾಗಿವೆ. ಈ ನಡುವೆ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ‘ಬೈಗುಳ ಸಾಹಿತ್ಯೋತ್ಸವ’ಕ್ಕೆ ಸಿರಿಗನ್ನಡ ವೇದಿಕೆ ಹಾಗೂ ಅಲ್ಲಾರಂಡ ರಂಗ ಚಾವಡಿ ಮುನ್ನುಡಿ ಇಟ್ಟು ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಬರಹಗಳನ್ನು ಆಹ್ವಾನಿಸಿದ್ದು, ಹಲವಾರು ಬೈಗುಳಗಳಿಗೆ ಸಾಹಿತ್ಯದ ಸ್ಪರ್ಶ ನೀಡಿ ಕಳುಹಿಸಿಕೊಡುತ್ತಿದ್ದಾರೆ.
ಬೈಗುಳ ಸಾಹಿತ್ಯವೇ?
ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಹಲವು ಬೈಗುಳ ಪದಗಳು ಜನರ ಬಳಕೆಯಲ್ಲಿವೆ. ತೀರ ಅಸಹ್ಯ ಹುಟ್ಟಿಸುವ, ಮುಜುಗುರ ಉಂಟು ಮಾಡುವ ಪದಗಳನ್ನು ಮಲೆನಾಡು, ಕರಾವಳಿ ಭಾಗದಲ್ಲಿ ಬಳಸುವುದು ಕಡಿಮೆ. ಆದರೆ, ಉತ್ತರ ಕರ್ನಾಟಕ, ಬಯಲು ಸೀಮೆ ಪ್ರದೇಶಗಳಲ್ಲಿ ನಿಂದನೆ ಎನಿಸುವ ಅಸಂವಿಧಾನಿಕ ಪದಗಳ ಬಳಕೆ ಹೆಚ್ಚಿದೆ. ಉತ್ತರ ಕರ್ನಾಟಕದಲ್ಲಂತೂ ಮಾತನಾಡಿಸುವ ಪರಿಯೇ ಬೈಗುಳದ ಪದಗಳಿಂದ ಕೂಡಿರುತ್ತವೆ. ಅವರು ಮಾತನಾಡುತ್ತಿ ದ್ದಾರೋ ಅಥವಾ ಬೈಯ್ಯುತ್ತಿದ್ದಾರೋ ಒಂದೂ ಅರ್ಥವಾಗದು..!
ತಲಾತಲಾಂತರಗಳಿದೆ ಈ ರೀತಿಯ ಬೈಗುಳಗಳು ಆ ಪ್ರದೇಶ ಗಳಲ್ಲಿ ಮಾಮೂಲಿಯಾಗಿರುವ ಹಿನ್ನೆಲೆ ಅಲ್ಲಿನ ಜನರಿಗೆ ಆ ರೀತಿಯ ಪದಗಳು ನಿಂದನೆ ಎನಿಸುವುದಿಲ್ಲ. ಅದೇ ರೀತಿ ಕರಾವಳಿ, ಮಲೆನಾಡು, ಅರೆಮಲೆ ನಾಡು ಪ್ರದೇಶಗಳಲ್ಲಿಯೂ ಭಿನ್ನ ಬೈಗುಳಗಳು ಪ್ರಚಲಿತದಲ್ಲಿವೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ, ಟಿವಿ ರಿಯಾಲಿಟಿ ಶೋಗಳಲ್ಲಿಯೂ ನಾನಾ ಭಾಗದ ಬೈಗುಳಗಳ ಪದಗಳನ್ನು ಪ್ರಯೋಗಿಸಲಾಗಿದೆ. ಇದು ಯಾರಿಗೂ ಅನ್ವಯಿಸದಿದ್ದರು ಈ ರೀತಿ ಬೈಗುಳವಿದೆ ಎಂಬ ಪರಿಚಯ ಜನರಿಗಾಗುತ್ತಿದೆ. ಜೊತೆಗೆ ಮನರಂಜನೆಯನ್ನು ಉಣಬಡಿಸಿರುವುದು ಬೈಗುಳದ ಲ್ಲೊಂದು ಹಾಸ್ಯವಿದೆ ಎಂಬುದು ನಿದರ್ಶಿಸಿದೆ.
ಉತ್ತರ ಕರ್ನಾಟಕದಲ್ಲಿ ಬಳಸುವ ಕೆಲವೊಂದು ಪದ ಇತ್ತೀಚಿನ ಸಿನಿಮಾಗಳಲ್ಲಿ ಉಪಯೋಗವಾಗುತ್ತಿದೆ. ಅದೇ ರೀತಿ ಕರಾವಳಿ ಭಾಗದಲ್ಲಿ ಬಳಸುವ ಜಾನಪದೀಯ ಬೈಗುಳ ‘ಬ್ಯಾವರ್ಸಿ’, ‘ಹಡಬೆ-ನಾಯಿ’ ಪದಗಳು ಕಾಂತರ ಸಿನಿಮಾದ ಮೂಲಕ ಕರ್ನಾಟಕದಾದ್ಯಂತ ‘ಟ್ರೇಂಡಿAಗ್’ನಲ್ಲಿತ್ತು. ಈ ಹಿಂದೆ ಡೈಲಾಗ್ ಕಿಂಗ್
(ಮೊದಲ ಪುಟದಿಂದ) ಸಾಯಿಕುಮಾರ್ ನಟಿಸಿರುವ ಪೊಲೀಸ್ ಸ್ಟೋರಿ ಸಿನಿಮಾದಲ್ಲಂತೂ ಕೆಟ್ಟ ಪದಗಳೇ ಡೈಲಾಗ್ಗಳಾಗಿದ್ದವು. ರಿಯಲ್ ಸ್ಟಾರ್ ಉಪೇಂದ್ರ, ದಿ.ಕಾಶಿನಾಥ್ ಅವರುಗಳ ಸಿನಿಮಾಗಳಲ್ಲಿಯೂ ಕೆಲವೊಂದು ಬೈಗುಳದ ಪದಗಳು ನುಸುಳಿಕೊಂಡಿದ್ದವು. ಜಗ್ಗೇಶ್ ಅಭಿನಯಿಸಿರುವ ಒಂದು ಚಿತ್ರದಲ್ಲಿ ಅವರೇ ಹಾಡಿದ್ದ ‘ಹಾವದ್ರು ಕಚ್ಚಬಾರದ, ಚೇಳಾದ್ರು ಕುಕ್ಕಬಾರದ, ಹೊಟ್ಟೆಯೇ ನೋವು ಬಂದು ಸಾಯಬಾರದ’, ಉಪೇಂದ್ರ ನಿರ್ದೇಶನ ಜಗ್ಗೇಶ್ ನಟನೆಯಲ್ಲಿ ಚಿತ್ರವೊಂದರಲ್ಲಿ ‘ನಿನ್ನ ನಿನ್ನ ಜಡಿಸಿ ಒದಿತಿನಿ’, ಎಂಬ ಹಾಡು ನಿಂದಿಸುವ ಶೈಲಿಯಲ್ಲಿದ್ದರೂ ಆ ಪದಗಳಿಗೆ ಸಾಹಿತ್ಯದ ರೂಪ ನೀಡಿ ಸಾಂಸ್ಕೃತಿಕವಾಗಿ ಬಳಸಿಕೊಳ್ಳಲಾಗಿತ್ತು. ಇಂದಿನ ಕಾಲಘಟ್ಟದಲ್ಲಿ ‘ಅಪ್ಪ ಲೂಸ, ಅಮ್ಮ ಲೂಸ’, ‘ಲೋಫರ್ ಅಂದ್ರುನು, ಚಪ್ಪರ್ ಅಂದ್ರುನು, ನಿನ್ ಬಿಟ್ಟು ಹೋಗೋದಿಲ್ವೆ’, ಇದೇ ರೀತಿ ಅನೇಕ ಹಾಡು ಬೈಗುಳ ಎನಿಸಿದರೂ ಆ ಹಾಡು ಜನಪ್ರಿಯತೆ ಗಳಿಸಿಕೊಂಡಿತ್ತು. ಅದೇ ರೀತಿ ಕಾದಂಬರಿಗಳಲ್ಲಿಯೂ ಅವಶ್ಯಕತೆ ಬಂದ ಜಾಗದಲ್ಲಿ ಬೈಗುಳಗಳನ್ನು ಸೇರಿಸಿಕೊಳ್ಳಲಾಗುತ್ತದೆ. ಅನೇಕ ದಿಗ್ಗಜ ಕವಿಗಳು ಈ ಪ್ರಯತ್ನ ಮಾಡಿ ಯಶಸ್ವಿ ಕೂಡ ಆಗಿದ್ದಾರೆ.
ಕೊಡಗಿನಲ್ಲಿ ಬೈಗುಳ ವಿಶೇಷ
ಕೊಡಗು ಜಿಲ್ಲೆಯಲ್ಲಿಯೂ ಬೈಗುಳಕ್ಕೆ ವಿಶೇಷ ಸ್ಥಾನಮಾನ ಇದೆ. ಇಲ್ಲಿನ ಬುಡಕಟ್ಟು ಜನಾಂಗ ಆಚರಿಸುವ ಬೇಡು ಹಬ್ಬದಲ್ಲಿ ದೇವರನ್ನು ಬೈಯುತ್ತ ಕೋಪ ತೀರಿಸಿಕೊಂಡು ಕಾಣಿಕೆ ಸಂಗ್ರಹಿಸಿ ಆನಂತರ ಅದನ್ನು ದೇವರಿಗೆ ಒಪ್ಪಿಸುವ ವಿಶೇಷ ಆಚರಣೆ ಇರುವುದು ಇಡೀ ದೇಶದ ಗಮನ ಸೆಳೆದಿದೆ. ಆಚರಣೆ ಒಂದು ಭಾಗವಾದರೆ ಇಲ್ಲಿನ ಬೈಗುಳಕ್ಕೆ ಜಾನಪದೀಯ ಹಿನ್ನೆಲೆ ಇರುವುದು ಹಬ್ಬದಿಂದ ಸಾಬೀತಾಗುತ್ತಿದೆ.
ಅದೇ ರೀತಿ ಇಲ್ಲಿನ ಕೊಡವರು, ಕೊಡವ ಉಪಪಂಗಡಗಳು, ಬುಡಕಟ್ಟು ಜನಾಂಗ, ಅರೆಭಾಷಿಕರು, ತುಳುವರು ಸೇರಿದಂತೆ ಅನೇಕ ಜನಾಂಗದಲ್ಲಿ ವಿಭಿನ್ನ ಬೈಗುಳಗಳು ಚಾಲ್ತಿಯಲ್ಲಿವೆ. ಹಾಗಾಗಿ ಈ ಬೈಗುಳ ಸಾಹಿತ್ಯೋತ್ಸವಕ್ಕೆ ಕನ್ನಡ, ಕೊಡವ,ಅರೆಭಾಷೆ, ತುಳು, ಕೊಂಕಣಿ ಮುಂತಾದ ವಿವಿಧ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿ ಸಾಹಿತಿಗಳು ಭಾಗಿಯಾಗುತ್ತಿದ್ದಾರೆ. ಜಿಲ್ಲೆ ಕೇರಳ ಗಡಿಯನ್ನು ಹಂಚಿಕೊAಡ ಕಾರಣ ಮಲಯಾಳಂ ಭಾಷೆಯಲ್ಲಿನ ಬೈಗುಳಗಳು ಹಾಸುಹೊಕ್ಕಾಗಿರುವುದು ಗಮನಾರ್ಹ.