ಕಣಿವೆ, ನ. ೧೬ : ಕುಶಾಲನಗರ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯ ಉತ್ತರ ಭಾಗದ ಪ್ರವೇಶ ದ್ವಾರದ ಬಳಿ ಕಟ್ಟಡದ ಮೇಲ್ಛಾವಣಿಗೆ ಅಳವಡಿಸಿದ್ದ ಕಾಂಕ್ರೀಟ್ ಕುಸಿದು ಬಿದ್ದಿದ್ದು ಅದೃಷ್ಟವಶಾತ್ ರೋಗಿಗಳು, ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುಮಾರು ೩೦ ವರ್ಷಗಳ ಹಿಂದೆ ನಿರ್ಮಿಸಿದ್ದ ಈ ಆಸ್ಪತ್ರೆ ಶಿಥಿಲಾವಸ್ಥೆಯಲ್ಲಿದ್ದು, ಮತ್ತೆ ಯಾವಾಗ ಯಾವ ಜಾಗದಲ್ಲಿ ಕುಸಿತವಾಗುತ್ತದೆಯೋ? ಎಂಬ ಆತಂಕದಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಆಸ್ಪತ್ರೆಯ ಕಟ್ಟಡವನ್ನು ನಿರ್ಮಿಸುವಾಗ ಹೋಬಳಿ ಕೇಂದ್ರದ ಜನಸಂಖ್ಯೆಗೆ ಅನುಗುಣವಾಗಿ ೧೯೯೦ರ ದಶಕದಲ್ಲಿ ಮುಂದಿನ ಕನಿಷ್ಟ ೨೦ ರಿಂದ ೨೫ ವರ್ಷಗಳ ಅವಧಿಯವರೆಗೂ ನಿಸ್ಸಂದೇಹವಾಗಿ ಆರೋಗ್ಯ ಸೇವೆಗೆ ಅನುವಾಗುವ ಉದ್ದೇಶದೊಂದಿಗೆ ನಿರ್ಮಿಸಿರುವ ಈ ಆಸ್ಪತ್ರೆ ಶಿಥಿಲಾವಸ್ಥೆ ತಲುಪಿದೆ.
ಈ ಆಸ್ಪತ್ರೆಗೆ ದಿನನಿತ್ಯವೂ ೪೫೦ ರಿಂದ ೫೦೦ ರಷ್ಟು ಮಂದಿ ಹೊರರೋಗಿಗಳಾಗಿ ಆಗಮಿಸಿ ಚಿಕಿತ್ಸೆ ಪಡೆದು ಮರಳುತ್ತಿದ್ದಾರೆ. ಇನ್ನು ೫೦ ಹಾಸಿಗೆಯ ಸಾಮರ್ಥ್ಯವುಳ್ಳ ಈ ಆಸ್ಪತ್ರೆಯಲ್ಲಿ ಇದೀಗ ನಿತ್ಯವೂ ೬೫ ರಿಂದ ೭೦ ಮಂದಿ ಕೆಲವೊಮ್ಮೆ ೧೦೦ ಮಂದಿ ಒಳರೋಗಿಗಳಾಗಿ ನೋಂದಣಿಯಾಗುತ್ತಿದ್ದಾರೆ.
ಕೂಡಲೇ ಜಿಲ್ಲಾಡಳಿತ ನುರಿತ ಕಟ್ಟಡ ನಿರ್ಮಾಣಗಳ ತಜ್ಞರಿಂದ ಈ ಆಸ್ಪತ್ರೆಯ ಶಿಥಿಲಾವಸ್ಥೆಯ ಕಟ್ಟಡವನ್ನು ಪರಿಶೀಲಿಸಿ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.