ವೀರಾಜಪೇಟೆ, ನ. ೧೬: ಹಲ್ಲುಗಳನ್ನು ದಿನವೂ ಎರಡು ಬಾರಿ ಉಜ್ಜಿ ಸ್ವಚ್ಛವಾಗಿರಿಸಿಕೊಳ್ಳುವುದರಿಂದ ಹಲ್ಲಿನ ಬಾಧೆಗಳನ್ನು ತಡೆಗಟ್ಟಬಹುದು, ಹಲ್ಲುಗಳ ಅಶುಚಿತ್ವವೇ ಹುಳುಕು ಹಲ್ಲಿಗೆ ಕಾರಣವೆಂದು ವೀರಾಜಪೇಟೆಯ ದಂತ ವೈದ್ಯರಾದ ಡಾ. ಎಂ.ಯು. ಲವೀನ್ ಚಂಗಪ್ಪ ತಿಳಿಸಿದರು. ಅವರು ಅರಮೇರಿ ಕಳಂಚೇರಿ ಮಠದಲ್ಲಿ ಜರುಗಿದ ೨೧೪ನೇ ಹೊಂಬೆಳಕು ಮಾಸಿಕ ತತ್ವಚಿಂತನಾಗೋಷ್ಠಿಯಲ್ಲಿ ಉಪನ್ಯಾಸಕರಾಗಿ ಮಾತನಾಡುತ್ತ ಹಲ್ಲಿನ ಶುಚಿತ್ವ ಮತ್ತು ಬಾಧೆಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ವೀರಾಜಪೇಟೆಯ ದಂತ ವೈದ್ಯಕೀಯ ಕಾಲೇಜಿನ ಸಂಶೋಧನಾ ವಿಭಾಗದ ಉಪಮುಖ್ಯಸ್ಥ ಡಾ. ಆರ್. ಶಶಿಧರ್ ಹಲ್ಲುಗಳ ಆರೋಗ್ಯದ ಬಗ್ಗೆ ವಿವರಿಸಿದರು. ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಯವರು ಮಾತನಾಡಿ, ಹುಳುಕು ಹಲ್ಲುಗಳು ಮುಖದ ಸೌಂದರ್ಯವನ್ನು ಕೆಡಿಸುತ್ತವೆ. ಅದಕ್ಕೆ ಅವಕಾಶ ನೀಡದೆ ಸ್ವಚ್ಛವಾಗಿ ಇರಿಸಿಕೊಳ್ಳಬೇಕೆಂದು ಉಪದೇಶಿಸಿದರು. ಮಠದ ವಿದ್ಯಾರ್ಥಿಗಳು ಸ್ವಾಗತಿಸಿ, ಕಾರ್ಯಕ್ರವನ್ನು ನಿರೂಪಿಸಿ, ವಂದಿಸಿದರು.