ಮುಳ್ಳೂರು, ನ. ೧೬: ಇಂಟರ್ ನ್ಯಾಷನಲ್ ಆಫ್ ರ್ಲಿ ಚೈಲ್ಡ್ ಕೇರ್ ಎಜುಕೇಶನ್ ಮತ್ತು ಆಲೂರು-ಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಹಾಗೂ ರಾಜ್ಯ ಮತ್ತು ಕೊಡಗು ಕೆಯುಎಸ್ಎಂಎ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಪಾಲನೆ, ಶೈಕ್ಷಣಿಕ ಕಲಿಕಾ ಬೆಳವಣಿಗೆ, ಪುಟ್ಟ ಮಕ್ಕಳ ಮನಸ್ಥಿತಿಯನ್ನು ಅರಿತುಕೊಳ್ಳುವುದು, ಮಕ್ಕಳ ವಿಕಾಸನ ಸೇರಿದಂತೆ ಮಕ್ಕಳ ಸರ್ವಾಂಗೀಣ ಪಾತ್ರದ ಕುರಿತು ಶಾಲಾ ಶಿಕ್ಷಕರಿಗೆ, ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ವ್ಯಕ್ತಿತ್ವ ವಿಕಾಸನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ತಾ. ೨೫ ರಂದು ಕುಶಾಲನಗರದ ಕೊಡವ ಸಮಾಜದಲ್ಲಿ ಒಂದು ದಿನದ ಉಚಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ಮತ್ತು ಆಲೂರು-ಸಿದ್ದಾಪುರ ಜಾನಕಿ ಕಾಳಪ್ಪ ವಿದ್ಯಾಸಂಸ್ಥೆಯ ಮೆನೆಜಿಂಗ್ ಟ್ರಸ್ಟಿ ಹೆಚ್.ಕೆ. ಶಿವಪ್ರಕಾಶ್ ತಿಳಿಸಿದ್ದಾರೆ.
ಕಾರ್ಯಾಗಾರ ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರಿಗೆ ನಡೆಯಲಿದ್ದು, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಉದ್ಘಾಟಿಸಲಿದ್ದಾರೆ. ಬೆಂಗಳೂರು ಕೆಯುಎಸ್ಎಂಎ ಸಂಘದ ಹಿರಿಯ ಕಾನೂನು ಸಲಹೆಗಾರ ಕೆ.ವಿ. ಧನಂಜಯ್, ಬೆಂಗಳೂರು ಕೆಯುಎಸ್ಎಂಎ ಸಂಘದ ಅಧ್ಯಕ್ಷ ಸತ್ಯಮೂರ್ತಿ, ಕಾರ್ಯದರ್ಶಿ ಆದಿಲ್ ಪಾಷ ನಿರ್ದೇಶಕ ಮರಿಯಪ್ಪ, ಕೊಡಗು ಕೆಯುಎಂಎಸ್ಎ ಸಂಘದ ಅಧ್ಯಕ್ಷ ಝರು ಗಣಪತಿ, ಕಾರ್ಯದರ್ಶಿ ತಿಮ್ಮಯ್ಯ ಕೊಟ್ರಂಗಡ, ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷ ಸಚಿನ್, ಸೋಮವಾರಪೇಟೆ ಸಾಂದೀಪನಿ ವಿದ್ಯಾಸಂಸ್ಥೆಯ ಎಂ.ಡಿ. ಲಿಖಿತ್ ಪಾಲ್ಗೊಳ್ಳುತ್ತಾರೆ.
ಕಾರ್ಯಾಗಾರದಲ್ಲಿ ವ್ಯಕ್ತಿತ್ವ ವಿಕಸನದ ನುರಿತ ಸಂಪನ್ಮೂಲ ವ್ಯಕ್ತಿಗಳಾದ ಮಕ್ಕಳ ತಜ್ಞ ಡಾ. ಕುಶ್ವಂತ್ ಕೋಳಿಬೈಲು, ಕಿರಣ್ ಶಂಕರ್, ಹೊಸೂರು ಶಿವಪ್ರಕಾಶ್ ಮತ್ತು ಸಹನ ಪ್ರಸಾದ್ ಇವರುಗಳು ತರಬೇತಿ ನೀಡಲಿದ್ದು, ಶಾಲಾ ಶಿಕ್ಷಕ, ಶಿಕ್ಷಕಿಯರು, ಮಕ್ಕಳ ಪೋಷಕರು ಮತ್ತು ಆಸಕ್ತರು ಸದುಪಯೋಗಿಸಿಕೊಳ್ಳುವಂತೆ ಶಿವಪ್ರಕಾಶ್ ತಿಳಿಸಿದ್ದಾರೆ.