ಕೂಡಿಗೆ, ಕುಶಾಲನಗರ, ನ. ೧೫: ಕುಶಾಲನಗರದ ಬಳಿ ಭಾನುವಾರ ರಾತ್ರಿ ವೇಳೆ ವಾಹನ ತಡೆದು ೬ ಮಂದಿ ದುಷ್ಕರ್ಮಿಗಳು ಪ್ರವಾಸಿಗರ ಮೊಬೈಲ್ ದೋಚಿದ್ದಾರೆ. ಲೋಹಿತ್ ದಾಸ್, ಜೈಸಿತ್ ಮತ್ತು ಕಾಸರಗೋಡಿನ ಮತ್ತೊಬ್ಬ ವ್ಯಕ್ತಿ ತಮ್ಮ ವ್ಯಾಗನರ್ ಕಾರಿನಲ್ಲಿ ಬೆಂಗಳೂರಿನಿAದ ಕಾಸರಗೋಡಿಗೆ ತೆರಳುತ್ತಿದ್ದರು. ಕುಶಾಲನಗರ ಬಳಿಯ ಗುಡ್ಡೆಹೊಸೂರು ಬಳಿ ಬಂದಾಗ ಅಂದು ರಾತ್ರಿ ಸುಮಾರು ೧೧.೩೦ ರ ವೇಳೆ ಆರು ಮಂದಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ, ಮೂವರು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ಮೊಬೈಲ್‌ಗಳನ್ನು ದೋಚಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಎಚ್ಚೆತ್ತ ಪೊಲೀಸರು ಸ್ಥಳೀಯ ಇಬ್ಬರನ್ನು ಬಂಧಿಸಿದ್ದಾರೆ. ಎಸ್ಪಿ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಇತರ ಸ್ಥಳೀಯ ಆರೋಪಿಗಳು ಅಪರಾಧದಲ್ಲಿ ಭಾಗಿಯಾಗಿರುವ ಬಗ್ಗೆ ವಿವರವಾಗಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ಪೊಲೀಸರ ಪ್ರಕಾರ, ಅಪರಾಧದ ನಂತರ ಎಲ್ಲಾ ಆರು ಆರೋಪಿಗಳು ಪ್ರವಾಸಿಗರಿಗೆ ಸೇರಿದ ವ್ಯಾಗನರ್ ಕಾರನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದರು, ಅವರಿಂದ ಮತ್ತೆ ನಗದು ದೋಚುವ ಉದ್ದೇಶದಿಂದ ಅವರನ್ನೂ ಕಾರಿನಲ್ಲಿ ಕರೆದೊಯ್ದರು. ಮೂವರು ಆರೋಪಿಗಳು ವ್ಯಾಗನಾರ್‌ನಲ್ಲಿ ಪ್ರವಾಸಿಗರನ್ನು ಒಯ್ದರೆ, ಇನ್ನಿತರ ಮೂವರು ಆರೋಪಿಗಳು ಅವರ ಕೊರೊಲ್ಲಾ ಕಾರಿನಲ್ಲಿ ತೆರಳಿದರು. ಈ ಎರಡು ಕಾರುಗಳೂ ದುಬಾರೆ ರಸ್ತೆಯಲ್ಲಿ ಸಾಗಿದವು. ವೇಗವಾಗಿ ತೆರಳುತ್ತಿದ್ದ ವ್ಯಾಗನರ್ ಕಾರು ತೆಪ್ಪದಕಂಡಿ ಬಳಿ ಅಪಘಾತಕ್ಕೀಡಾಯಿತು. ಪ್ರವಾಸಿಗರು ತಕ್ಷಣವೇ ೧೧೨ ಕ್ಕೆೆ ಕರೆ ಮಾಡಿದರು. ೧೧೨ ತಂಡವು ತುರ್ತಾಗಿ ಸ್ಥಳಕ್ಕೆ ತಲುಪಿತು. ಆ ಸಮಯದಲ್ಲಿ ೪ ಆರೋಪಿಗಳು ತಮ್ಮ ಕೊರೊಲ್ಲ ಕಾರಿನಲ್ಲಿ ಪರಾರಿಯಾಗಿದ್ದು, ಇಬ್ಬರು ಆರೋಪಿಗಳನ್ನು ೧೧೨ ತಂಡವು ಬಂಧಿಸಿದೆ. ಅಪಘಾತದಲ್ಲಿ ಕಾಸರಗೋಡಿನ ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಬಳಿಕ ದರೋಡೆ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರ ಕುಶಾಲನಗರ ಪೊಲೀಸರಿಗೆ ಇವರುಗಳು ಲಿಖಿತ ದೂರು ನೀಡಿದ್ದಾರೆ. ಬಂಧಿತ ಆರೋಪಿಗಳ ಪೈಕಿ ವಿನಯ್ (೩೦) ಕುಶಾಲನಗರ ಸಮೀಪದ ಬೊಳ್ಳೂರು ನಿವಾಸಿಯಾಗಿದ್ದು, ದಿನು (೩೩) ಕುಶಾಲನಗರ ಸಮೀಪದ ಮಾದಾಪಟ್ಟಣ ನಿವಾಸಿಯಾಗಿದ್ದಾನೆ. ಪೊಲೀಸರ ಪ್ರಕಾರ, ಸ್ಥಳೀಯ ದುಷ್ಕರ್ಮಿಗಳು ಮಧ್ಯರಾತ್ರಿಯ ಸಮಯದಲ್ಲಿ ಪ್ರವಾಸಿಗರನ್ನು ದರೋಡೆ ಮಾಡುವ ಉದ್ದೇಶವನ್ನು ಹೊಂದಿದ್ದರು ಎನ್ನಲಾಗಿದೆ. ಡಿವೈಎಸ್ಪಿ ಗಂಗಾಧರ್ ಮತ್ತು ತಂಡದವರು ಇತರ ೪ ಆರೋಪಿಗಳನ್ನು ಸೆರೆ ಹಿಡಿಯಲು ತೀವ್ರ ತನಿಖೆ ನಡೆಸುತ್ತಿದ್ದಾರೆ ಎಂದು “ಶಕ್ತಿ” ಗೆ ತಿಳಿದುಬಂದಿದೆ.