ವೀರಾಜಪೇಟೆ, ನ. ೧೩: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಬಾಳುಗೋಡು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕೊಡವ ಸಾಂಸ್ಕೃತಿಕ ಕೇಂದ್ರ ಹಾಗೂ ಜನರಲ್ ತಿಮ್ಮಯ್ಯ ಕ್ರೀಡಾ ಕೇಂದ್ರದಲ್ಲಿ ತಾ.೧೬ರಿಂದ ೧೯ ರವರೆಗೆ ಕೊಡವ ನಮ್ಮೆಯನ್ನು ಆಚರಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹೇಳಿದರು.
ಬಾಳುಗೋಡು ಕೊಡವ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ೩೩ ಕೊಡವ ಸಮಾಜಗಳು ಒಕ್ಕೂಟದಲ್ಲಿ ಸದಸ್ಯತ್ವ ಪಡೆದುಕೊಂಡಿವೆ. ಅದರಲ್ಲಿ ೨೪ ಕೊಡವ ಸಮಾಜಗಳು ಜಿಲ್ಲೆಯದ್ದಾಗಿದೆ. ಉಳಿದ ೯ ಕೊಡವ ಸಮಾಜಗಳು ಹೊರ ಜಿಲ್ಲೆಯದಾಗಿದೆ. ಯಾವುದೇ ಕೊಡವ ಸಮಾಜದಲ್ಲಿ ಸದಸ್ಯತ್ವ ಪಡೆದುಕೊಂಡವರು ಒಕ್ಕೂಟದ ಸದಸ್ಯರಾಗಿರುತ್ತಾರೆ. ಅವರ ಸದಸ್ಯತ್ವವನ್ನು ಸಮಾಜಮುಖಿ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದು ಕಲ್ಯಾಣಮಂಟಪ ಅಲ್ಲ. ಇದೊಂದು ಸಾಂಸ್ಕೃತಿಕ ಕೇಂದ್ರ. ಕೊಡವರಲ್ಲಿ ಮದುವೆಯು ಕೂಡ ಸಾಂಸ್ಕೃತಿಕವಾಗಿ ಒಂದು ಭಾಗವಾದ ಕಾರಣ ಮದುವೆಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದರು.
ತಾ.೧೬ ರಂದು ಹಾಕಿ ಪಂದ್ಯಾಟಕ್ಕೆ ಚಾಲನೆ ನೀಡುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಹಾಕಿ ಪಂದ್ಯಾಟದಲ್ಲಿ ಮೈಸೂರು, ಪೊನ್ನಂಪೇಟೆ, ಆರಾಯಿರನಾಡು, ಮೂರ್ನಾಡು, ಕುಶಾಲನಗರ, ವೀರಾಜಪೇಟೆ, ನಾಪೋಕ್ಲು, ಟಿ. ಶೆಟ್ಟಿಗೇರಿ, ಹುದಿಕೇರಿ, ಅಮ್ಮತ್ತಿ, ಶ್ರೀಮಂಗಲ, ಮಡಿಕೇರಿ ಕೊಡವ ಸಮಾಜಗಳ ತಂಡಗಳಿವೆ. ಕೇವಲ ಕೊಡವರಿಗೆ ಮಾತ್ರ ಸೀಮಿತವಾಗಿರುವ ಪಂದ್ಯಾಟದಲ್ಲಿ ಕೊಡವ ತೀರ್ಪುಗಾರರು ಯಾವುದೇ ಸಂಭಾವನೆ ಪಡೆಯದೆ ಉಚಿತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಮಾತನಾಡಿ ತಾ.೧೮ ರಂದು ಪೂರ್ವಾಹ್ನ ೯.೩೦ ಗಂಟೆಗೆ ಯುದ್ದ ಸ್ಮಾರಕಕ್ಕೆ ಮೇ.ಜನರಲ್ ಬಾಚಮಂಡ ಕಾರ್ಯಪ್ಪ ಗೌರವ ಸಮರ್ಪಣೆ ಮಾಡಲಿದ್ದಾರೆ. ನಂತರ ಸಭಾ ಕಾರ್ಯಕ್ರಮ ಇದ್ದು ಅಪರಾಹ್ನ ೨ ಗಂಟೆಗೆ ಹಾಕಿ ಸೆಮಿಫೈನಲ್ಸ್ ನಡೆಯಲಿದೆ. ಅದೇ ದಿನ ಅಪರಾಹ್ನ ೧ ಗಂಟೆಯಿAದ ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ, ಭಾರದ ಕಲ್ಲು ಎಸೆತ, ತೆಂಗಿನಕಾಯಿಗೆ ಗುಂಡು ಹೊಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲಾಗುವುದು. ತಾ. ೧೯ ರಂದು ಪೂರ್ವಾಹ್ನ ೯ ಗಂಟೆಗೆ ಮಂದ್ಮರಿಯೋದು. ೯.೩೦ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪೈಪೋಟಿ ನಡೆಯಲಿದೆ. ಅಪರಾಹ್ನ ೨ ಗಂಟೆಗೆ ಹಾಕಿ ಫೈನಲ್ಸ್, ಮಧ್ಯಂತರ ವೇಳೆಯಲ್ಲಿ ಹಗ್ಗಜಗ್ಗಾಟದ ಫೈನಲ್ಸ್ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪ್ಸಿಂಹ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಮಂಥರ್ಗೌಡ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಉಪಸ್ಥಿತರಿರುವರು ಎಂದು ಹೇಳಿದರು.
ಗೋಷ್ಠಿಯಲ್ಲಿ ಊಟೋಪಚಾರ ಸಮಿತಿ ಅಧ್ಯಕ್ಷ ಕುಂಬೇರ ಮನುಕುಮಾರ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಬೊಳಿಯಂಗಡ ದಾದು ಪೂವಯ್ಯ, ಆಟೋಟ ಸಮಿತಿ ಸಂಚಾಲಕ ತಂಬುಕುತ್ತಿರ ಮಧು ಮಂದಣ್ಣ, ಕ್ರೀಡಾ ಸಮಿತಿ ಸಂಚಾಲಕ ಕಂಬೀರAಡ ಕಿಟ್ಟು ಕಾಳಪ್ಪ, ತಾಂತ್ರಿಕ ಸಮಿತಿ ನಿರ್ದೇಶಕ ಅಚ್ಚಕಾಳೆರ ಪಳಂಗಪ್ಪ, ಸದಸ್ಯ ಪಟ್ಟಡ ಮನು ರಾಮಚಂದ್ರ ಉಪಸ್ಥಿತರಿದ್ದರು.