ವೀರಾಜಪೇಟೆ, ನ. ೧೩ : ಕೊಡವ ಕ್ರಿಕೆಟ್ ಆಕಾಡೆಮಿ ವತಿಯಿಂದ ನಡೆಯುತ್ತಿರುವ ಅಂತರ ಕೊಡವ ಸಮಾಜಗಳ ನಡುವಿನ ಕ್ರಿಕೆಟ್ ಪಂದ್ಯಾಟದಲ್ಲಿ ಪೊನ್ನಂಪೇಟೆ ಕೊಡವ ಸಮಾಜ ಫೈನಲ್ ಪ್ರವೇಶಿಸಿದೆ.

ನಗರದ ಚಿಕ್ಕಪೇಟೆ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಪ್ರಥಮ ಅಂತರ ಕೊಡವ ಸಮಾಜಗಳ ನಡುವಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಇಂದು ವೀರಾಜಪೇಟೆ ಬಿ ತಂಡ ಮತ್ತು ನಾಪೋಕ್ಲು ಕೊಡವ ಸಮಾಜಗಳ ನಡುವೆ ಪಂದ್ಯಾಟದಲ್ಲಿ ಟಾಸ್ ಗೆದ್ದ ನಾಪೋಕ್ಲು ತಂಡ ಬೌಲಿಂಗ್ ಅಯ್ಕೆ ಮಾಡಿಕೊಂಡು ವೀರಾಜಪೇಟೆ ತಂಡಕ್ಕೆ ಬ್ಯಾಟಿಂಗ್‌ಗೆ ಅವಕಾಶ ಮಾಡಿಕೊಟ್ಟಿತ್ತು. ನಿಗದಿತ ೧೨ ಓವರ್‌ಗಳಲ್ಲಿ ವೀರಾಜಪೇಟೆ ಬಿ ತಂಡ ೪ ವಿಕೆಟ್ ನಷ್ಟಕ್ಕೆ ೧೨೧ ರನ್ ಗಳಿಸಿತ್ತು. ಅಯ್ಯಣ್ಣ ೪೩ ರನ್ ಗಳಿಸಿದರು. ಬಳಿಕ ಬ್ಯಾಟಿಂಗ್ ಮಾಡಿದ ನಾಪೋಕ್ಲು ತಂಡ ೧೨ ಓವರ್‌ಗಳಲ್ಲಿ ತನ್ನ ೪ ವಿಕೆಟ್ ಕಳೆದುಕೊಂಡು ೧೦೦ ರನ್ ಬಾರಿಸಿ ಸೋಲನುಭವಿಸಿತು. ಅಪ್ಪ್ಪಾರಂಡ ನೆಲ್ ದೇವಯ್ಯ ಅವರು ೫೩ ರನ್ ಗಳಿಸಿ, ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.

ದ್ವೀತಿಯ ಪಂದ್ಯಾಟ ವೀರಾಜಪೇಟೆ ಎ ಮತ್ತು ಮೂರ್ನಾಡು ಕೊಡವ ಸಮಾಜಗಳ ನಡುವೆ ನಡೆಯಿತು. ಟಾಸ್ ಗೆದ್ದ ಮೂರ್ನಾಡು ತಂಡವು ಬೌಲಿಂಗ್ ಅಯ್ಕೆ ಮಾಡಿಕೊಂಡಿತು. ವೀರಾಜಪೇಟೆ ತಂಡವು ೧೨ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೧೧೦ ರನ್ ಗಳಿಸಿತು. ತಂಡದ ಪರ ತಿಮ್ಮಯ್ಯ ೩೪ ರನ್ ಗಳಿಸಿದರು. ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮೂರ್ನಾಡು ತಂಡದ ಅನಿಲ್ ೧೮ ರನ್ ನೀಡಿ ೪ ವಿಕೆಟ್ ಕಬಳಿಸಿದರು. ೧೧೧ ರನ್ ಬೆನ್ನು ಹತ್ತಿದ ಮೂರ್ನಾಡು ತಂಡವು ೧೨ ಓವರ್‌ಗಳಲ್ಲಿ ತನ್ನ ೫ ವಿಕೆಟ್ ಕಳೆದುಕೊಂಡು ೯೧ ರನ್ ಮಾಡಲು ಶಕ್ತವಾಯಿತು. ೨೦ ರನ್‌ಗಳಿಂದ ಸೋಲು ಅನುಭವಿಸಿತು. ವೀರಾಜಪೇಟೆ ಕೊಡವ ಸಮಾಜ ಎ ತಂಡ ಸೆಮಿ ಫೈನಲ್‌ಗೆ ಆರ್ಹತೆ ಪಡೆಯಿತು. ಮೂರ್ನಾಡು ಕೊಡವ ಸಮಾಜದ ಕೊಕ್ಕಲೆರ ಅನಿಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.

ಪ್ರಥಮ ಸೆಮಿಫೈನಲ್ ಪಂದ್ಯಾಟವು ವೀರಾಜಪೇಟೆ ಬಿ ತಂಡ ಮತ್ತು ಪೊನ್ನಂಪೇಟೆ ಕೊಡವ ಸಮಾಜಗಳ ನಡುವೆ ನಡೆಯಿತು. ಟಾಸ್ ಗೆದ್ದ ವೀರಾಜಪೇಟೆ ಕೊಡವ ಸಮಾಜವು ಬ್ಯಾಟಿಂಗ್ ಅಯ್ಕೆ ಮಾಡಿಕೊಂಡು ಬಾಲ ಆಟಗಾರರೊಂದಿಗೆ ಕಣಕ್ಕಿಳಿಯಿತು. ನಿಗದಿತ ೧೨ ಓವರ್‌ಗಳಲ್ಲಿ ತನ್ನ ೪ ವಿಕೆಟ್ ಕಳೆದುಕೊಂಡು ೮೦ ರನ್‌ಗಳ ಗುರಿ ನೀಡಿತು. ತಂಡದ ಪರ ಗೌರವ್ ೨೪ ರನ್ ಗಳಿಸಿದರು. ನಂತರದಲ್ಲಿ ಬ್ಯಾಟಿಂಗ್ ಮಾಡಿದ ಪೊನ್ನಂಪೇಟೆ ತಂಡ ೩ ವಿಕೆಟ್ ಕಳೆದುಕೊಂಡು ೮೧ ರನ್ ಗುರಿ ಮುಟ್ಟುವಲ್ಲಿ ಯಶಸ್ವಿಯಾಯಿತು. ೭ ವಿಕೆಟ್‌ಗಳಿಂದ ಜಯಗಳಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು. ವೀರಾಜಪೇಟೆ ಕೊಡವ ಸಮಾಜದ ಚೇಂದAಡ ಗೌರವ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.

ತಾ. ೧೪ರಂದು (ಇಂದು) ವೀರಾಜಪೇಟೆ ಕೊಡವ ಸಮಾಜ ಎ ಮತ್ತು ಟಿ. ಶೆಟ್ಟಿಗೇರಿ ಕೊಡವ ಸಮಾಜಗಳ ನಡುವೆ ದ್ವಿತೀಯ ಸೆಮಿಫೈನಲ್ ಪಂದ್ಯಾಟ ನಡೆಯಲಿದೆ. ನಂತರ ಮಧ್ಯಾಹ್ನ ಫೈನಲ್ ಪಂದ್ಯಾಟ, ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ. ಕೊಡವ ಕ್ರಿಕೆಟ್ ಆಕಾಡೆಮಿಯ ಅಧ್ಯಕ್ಷ ಕಾರ್ಸನ್ ಕಾರ್ಯಪ್ಪ, ಪದಾಧಿಕಾರಿಗಳು ತಾಂತ್ರಿಕ ಸದಸ್ಯರು, ತೀರ್ಪುಗಾರರು ಹಾಗೂ ವಿವಿಧ ತಂಡಗಳ ಆಟಗಾರರು ಹಾಜರಿದ್ದರು.

ವೀರಾಜಪೇಟೆ ಕೊಡವ ಸಮಾಜ ಬಿ ತಂಡದ ಪರವಾಗಿ ಬಾಲ ಕ್ರೀಡಾಪ್ರತಿಭೆಗಳಾದ ಕೇವಿನ್ ಸೋಮಣ್ಣ ಎ.ಎಂ. ಕೃತಿಕಾ ಅಕ್ಕಮ್ಮ ಮತ್ತು ಬಿಷನ್ ಬಿದ್ದಪ್ಪ ಅನ್‌ಮೊಲ್ ಪೊನ್ನಣ್ಣ, ಸನತ್ ಮುತ್ತಣ್ಣ, ಕ್ರೀಡಾಪಟುಗಳು ಭಾಗವಹಿಸಿದ್ದು ಪ್ರಮುಖ ಆಕರ್ಷಣೆಯಾಗಿತ್ತು.

ಕ್ರಿಕೆಟ್ ಪಂದ್ಯಾಟದ ವೀಕ್ಷಣೆಗೆ ಶಾಸಕ ಎ.ಎಸ್. ಪೊನ್ನಣ್ಣ ಮೈದಾನಕ್ಕೆ ಆಗಮಿಸಿದ್ದರು. ಕೊಡವ ಸಮಾಜಗಳ ನಡುವೆ ಏರ್ಪಡಿಸಿರುವ ಕ್ರಿಕೆಟ್ ಪಂದ್ಯಾಟದಿAದ ಅಂತರ ಕೊಡವ ಸಮಾಜದ ಭಾಂದವ್ಯ ಗಟ್ಟಿಗೊಳ್ಳುತ್ತದೆ ಎಂದರು.

- ಕಿಶೋರ್ ಕುಮಾರ್ ಶೆಟ್ಟಿ