ಮಡಿಕೇರಿ, ನ. ೧೨: ಈ ವರ್ಷ ಕೊಡಗಿನ ಜನರು ಅದರಲ್ಲೂ ಮಕ್ಕಳು ಪಟಾಕಿ ಸಿಡಿಸುವ ಆಸಕ್ತಿ ತೋರುತ್ತಿರುವುದು ಕಂಡುಬರುತ್ತಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ, ಹಸಿರು ಪಟಾಕಿಗಳನ್ನು ಮಾತ್ರ ಬಳಸಲಾಗುತ್ತಿದೆ. ಸಾಮಾನ್ಯ ಪಟಾಕಿಗಳಂತೆ ಹಸಿರು ಪಟಾಕಿಗಳಿಗೆ ಬೇಡಿಕೆಯಿಲ್ಲ. ಸೀಮಿತ ಅಂಗಡಿಗಳಲ್ಲಿ ಮಕ್ಕಳು ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿರುವುದು ಗೋಚರ ವಾಗಿದೆ. ದೀಪಾವಳಿ ಹಬ್ಬದ ಸಂದರ್ಭ ಶಬ್ದಮಾಲಿನ್ಯ ಹಾಗೂ ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಬಳಕೆ ಹಾಗೂ ಮಾರಾಟ ಮಾಡಬೇಕೆಂದು ಪರಿಸರ ಮಂಡಳಿ ಸುತ್ತೋಲೆ ಹೊರಡಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪಟಾಕಿ ವ್ಯಾಪಾರ ಕಳೆಗುಂದಿದೆ. ಜನತೆಯೂ ಹೊಸ ನಿಯಮಕ್ಕೆ ಕೈ ಜೊಡಿಸಿದಂತೆ ಕಂಡುಬAದಿದ್ದು ಈ ವರ್ಷ ಪಟಾಕಿ ಹೆಚ್ಚು ಸದ್ದು ಮಾಡದಿರುವುದು ಗೋಚರವಾಗಿದೆ. ಮಕ್ಕಳೂ ಕೂಡ ಈ ಬಗ್ಗೆ ನಿರಾಸಕ್ತರಾಗಿರುವಂತೆ ತೋರುತ್ತಿದೆ. ಮಕ್ಕಳು ಒಂದು ದಿನದ ಹಿಂದೆಯೇ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಹಣತೆ ಬೆಳಗಿ ದೀಪಾವಳಿ ಆಚರಿಸಿರುವದು ಮತ್ತೊಂದು ಹೊಸ ಬೆಳವಣಿಗೆ ಯಾಗಿದೆ.
ಮಡಿಕೇರಿಯ ಗಾಂಧಿ ಮೈದಾನದಲ್ಲಿ ದೀಪಾವಳಿ ಸಂದರ್ಭ ಪ್ರತಿ ಬಾರಿ ೧೦ ರಿಂದ ೧೨ ಅಂಗಡಿಗಳಲ್ಲಿ ಪಟಾಕಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ, ಈ ಬಾರಿ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಉಳಿದ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಇದರಿಂದಾಗಿ ಗಾಂಧಿ ಮೈದಾನದಲ್ಲಿ ಈ ಬಾರಿ ಕೇವಲ ಎರಡು ಅಂಗಡಿಗಳಲ್ಲಿ ಮಾತ್ರ ಪಟಾಕಿ ವ್ಯಾಪಾರ ನಡೆಯುತ್ತಿದೆ.
ಒಬ್ಬ ವ್ಯಕ್ತಿಗೆ ಸೇರಿದ ಎರಡು ಅಂಗಡಿಗಳು ಮಾತ್ರ ತೆರೆಯಲ್ಪಟ್ಟಿವೆ.