ಸಿದ್ದಾಪುರ, ನ. ೧೨: ದೇವಾಲಯದ ಬಳಿ ಮಣ್ಣು ಅಗೆಯುವ ಸಂದರ್ಭ ಕಾರ್ಮಿಕರಿಗೆ ತಲತಲಾಂತರಗಳ ಹಿಂದಿನ ಚಿನ್ನ, ಬೆಳ್ಳಿ ಸೇರಿದಂತೆ ಲೋಹದ ಆಭರಣಗಳು ಕಂಡುಬAದಿದ್ದು, ಭೂಮಿಯೊಳಗೆ ಹುದುಗಿದ್ದ ಅಪರೂಪದ ನಿಧಿ ಜನರ ಆಶ್ಚರ್ಯಕ್ಕೆ ಕಾರಣವಾಗಿದೆ.

ಸಿದ್ದಾಪುರ ಸಮೀಪದ ಆನಂದಪುರ ಗ್ರಾಮದ ಟಾಟಾ ಸಂಸ್ಥೆಗೆ ಸೇರಿದ ಕಾಫಿ ತೋಟವೊಂದರ ಒಳಗಿರುವ ಪುರಾತನ ಕಾಲದ ಈಶ್ವರ ದೇವಾಲಯದ ಬಳಿ ಕಾಲಗರ್ಭದಲ್ಲಿ ಅಡಗಿದ್ದ ನಿಧಿ ಪತ್ತೆಯಾಗಿದ್ದು, ಇವುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ಪರಿಶೀಲನೆಗೆ ಮುಂದಾಗಿದ್ದಾರೆ.

ಇದೊಂದು ಅಪರೂಪದ ಪ್ರಕರಣವಾಗಿದ್ದು, ಆಭರಣಗಳ ಹಿಂದಿನ ನೈಜಾಂಶ ಅಧ್ಯಯನ ಬಳಿಕ ಹೊರಬೀಳಲಿದೆ.

ದೇವಾಲಯ ಬಳಿ ಕಾರ್ಮಿಕರು ಗಳಾದ ಸುಬ್ರಮಣಿ ಹಾಗೂ ಅಂತರರಾಜ್ಯದ ನಾಲ್ವರು ತಡೆಗೋಡೆ ನಿರ್ಮಾಣದ ಉದ್ದೇಶದಿಂದ ಮಣ್ಣು ಅಗೆಯುತ್ತಿದ್ದ ಸಂದರ್ಭ ಮಣ್ಣಿನ ಅಡಿಯಲ್ಲಿ ಡಬ್ಬಗಳು ಕಂಡು ಬಂದಿವೆ. ಇದನ್ನು ಪರಿಶೀಲಿಸಿದ ಸಂದರ್ಭ ಪುರಾತನ ಆಭರಣಗಳು ಗೋಚರವಾಗಿವೆ.

ಕೂಡಲೇ ಕಾರ್ಮಿಕ ಸುಬ್ರಮಣಿ ತೋಟದ ವ್ಯವಸ್ಥಾಪಕರಿಗೆ ವಿಷಯದ ಕುರಿತು ಮಾಹಿತಿ ನೀಡಿದ್ದಾರೆ. ವ್ಯವಸ್ಥಾಪಕರು ಸಿದ್ದಾಪುರ ಪೊಲೀಸರಿಗೆ ವಿಚಾರವನ್ನು ತಿಳಿಸಿದ್ದಾರೆ. ಪೊಲೀಸರು ಕಂದಾಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ವೀರಾಜಪೇಟೆಯ ಉಪತಹಶೀಲ್ದಾರ್ ಪ್ರದೀಪ್ ಹಾಗೂ ಅಮ್ಮತ್ತಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರ ಸಮ್ಮುಖದಲ್ಲಿ ಮಣ್ಣಿನ ಅಡಿಯಿಂದ ಲಭಿಸಿದ ಡಬ್ಬಗಳನ್ನು ಪರಿಶೀಲನೆ ಮಾಡಿದರು.

ಈ ಸಂದರ್ಭ ಡಬ್ಬಗಳಲ್ಲಿ ಚಿನ್ನ, ಬೆಳ್ಳಿ ಸೇರಿದಂತೆ ಲೋಹದ ಆಭರಣಗಳು ಕಂಡುಬAದಿವೆ. ನಂತರ ಕಂದಾಯ ಇಲಾಖೆ ಅಧಿಕಾರಿಗಳ ಹಾಗೂ ಪೊಲೀಸರ ಸಮ್ಮುಖದಲ್ಲಿ ಡಬ್ಬಗಳಿಂದ ಹೊರತೆಗೆದ ಲೋಹಗಳನ್ನು ಮಹಜರು ಮಾಡಿ ಎರಡು ಸಣ್ಣ ಡಬ್ಬಗಳು ಸೇರಿದಂತೆ ಅದರೊಳಗಿರುವ ಚಿನ್ನ, ಬೆಳ್ಳಿ ಲೋಹಗಳು ಅಂದಾಜು ೧ ಕೆಜಿ ೧೫೦ ಗ್ರಾಂಗಳಷ್ಟು ಇರುವುದಾಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನಿಧಿಯನ್ನು ಭದ್ರಪಡಿಸಿ ವೀರಾಜಪೇಟೆಯ ತಾಲೂಕು ಕಚೇರಿಯ ಖಜಾನೆಗೆ ರವಾನಿಸ ಲಾಗಿದೆ.

ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಾದ ಓಮಪ್ಪ ಬಣಕರ್, ಪ್ರವೀಣ್, ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ, ಮುಖ್ಯ ಪೇದೆಗಳಾದ ಸಂತೋಷ್, ರತನ್ ಹಾಗೂ ಪೊಲೀಸ್ ಸಿಬ್ಬಂದಿಗಳು ಕಂದಾಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

- ವರದಿ: ವಾಸು ಆಚಾರ್ಯ

ಕಾರ್ಮಿಕರು ಕೆಲಸ ಮಾಡುವ ಸಂದರ್ಭ ನಿಧಿ ಪತ್ತೆಯಾಗಿದ್ದು, ನಿಯಮನುಸಾರ ಕ್ರಮಕೈಗೊಳ್ಳಲಾಗಿದೆ. ಕೋರ್ಟ್ ಅನುಮತಿಯ ಬಳಿಕ ಪುರಾತತ್ವ ಇಲಾಖೆಗೆ ನಿಧಿಯನ್ನು ಹಸ್ತಾಂತರಿಸಲಾಗುವುದು.

- ಕೆ. ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ