ಮಡಿಕೇರಿ, ನ. ೧೨: ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಮಕ್ಕಳ ದುಡಿಮೆಯನ್ನು ನಿಯಂತ್ರಿಸಲು ಹಾಗೂ ನಿಷೇಧಿಸಲು ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ೧೯೮೬ ತಿದ್ದುಪಡಿ ೨೦೧೬ರ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಪ್ರಸ್ತಾಪಿತ ಕಾಯ್ದೆಯನ್ವಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ೧೪ ರಿಂದ ೧೮ ರ ವಯಸ್ಸಿನ ಕಿಶೋರಾವಸ್ಥೆಯ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೊಡಗು ಜಿಲ್ಲಾದ್ಯಂತ ದೀಪಾವಳಿ ಹಾಗೂ ಹುತ್ತರಿ ಹಬ್ಬದ ಪ್ರಯುಕ್ತ ಪಟಾಕಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಪಟಾಕಿ ತಾಯಾರಿಕೆ, ಮಾರಾಟ ಹಾಗೂ ಇತರ ಪ್ರಕ್ರಿಯೆಗಳು ಅಪಾಯಕಾರಿ ಉದ್ದಿಮೆಗಳ ವ್ಯಾಪ್ತಿಗೆ ಬರುವುದರಿಂದ ಈ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ೧೮ ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳಬಾರದು. ತಪ್ಪಿದ್ದಲ್ಲಿ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ೧೯೮೬ ತಿದ್ದುಪಡಿ ೨೦೧೬ರ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೊಡಗು ಉಪ ವಿಭಾಗದ ಕಾರ್ಮಿಕ ಅಧಿಕಾರಿ ಹರ್ಷವರ್ಧನ ತಿಳಿಸಿದ್ದಾರೆ.