ವೀರಾಜಪೇಟೆ, ನ. ೧೨: ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ನಡೆಯುತ್ತಿರುವ ಅಂತರ ಕೊಡವ ಸಮಾಜಗಳ ನಡುವಿನ ೨ನೇ ದಿನದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು ೩ ಕೊಡವ ಸಮಾಜ ತಂಡಗಳು ಮುನ್ನಡೆ ಸಾಧಿಸಿದವು.
ಪಟ್ಟಣದ ಚಿಕ್ಕಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಾಟದಲ್ಲಿ ಮಂದ ಬೆಳಕು ಪರಿಣಾಮ ಮೂರು ಪಂದ್ಯಾಟಗಳಿಗಷ್ಟೆ ಸೀಮಿತವಾಯಿತು.
ವೀರಾಜಪೇಟೆ (ಬಿ) ತಂಡ ಮತ್ತು ಟಿ.ಶೆಟ್ಟಿಗೇರಿ (ಎ) ಕೊಡವ ಸಮಾಜ ತಂಡಗಳ ನಡುವೆ ನಡೆದ ರೋಚಕ ಪಂದ್ಯಾಟದಲ್ಲಿ ವೀರಾಜಪೇಟೆ ಬಿ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ವೀರಾಜಪೇಟೆ ಒಂದು ವಿಕೆಟ್ ನಷ್ಟಕ್ಕೆ ೧೨ ಓವರುಗಳಲ್ಲಿ ೧೦೧ ರನ್ ಗುರಿ ನೀಡಿತು. ಟಿ.ಶೆಟ್ಟಿಗೇರಿ ತಂಡವು ೧೨ ಓವರ್ಗಳಲ್ಲಿ ೫ ವಿಕೆಟ್ಗಳನ್ನು ಕಳೆದುಕೊಂಡು ೧೦೦ ರನ್ ಪೇರಿಸಿ ವಿರೋಚಿತ ಸೋಲು ಕಂಡಿತು. ಪಂದ್ಯ ಪುರುಷೋತ್ತಮ ಪ್ರಶಸ್ತಿ ವೀರಾಜಪೇಟೆ ತಂಡದ ಬೊಪ್ಪಂಡ ಪ್ರಖ್ಯಾತ್ ಪಡೆದುಕೊಂಡರು.
ಪೊನ್ನAಪೇಟೆ ಮತ್ತು ಕುಶಾಲನಗರ ಕೊಡವ ಸಮಾಜ ನಡುವಿನ ಪಂದ್ಯದಲ್ಲಿ ಪೊನ್ನಂಪೇಟೆ ಗೆದ್ದು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪೊನ್ನಂಪೇಟೆ ತಂಡ ನಿಗದಿತ ೧೨ ಓವರುಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೧೧೮ ರನ್ ಗಳಿಸಿತು. ಕುಶಾಲನಗರ ಕೊಡವ ಸಮಾಜ ತಂಡ ೧೨ ಓವರುಗಳಲ್ಲಿ ತನ್ನ ೭ ವಿಕೆಟ್ ಕಳೆದುಕೊಂಡು ೮೩ ರನ್ ಮಾತ್ರ ಗಳಿಸಿ ಸೋಲು ಅನುಭವಿಸಿತು. ಪೊನ್ನಂಪೇಟೆ ತಂಡದ ನಾಪಂಡ ಸೋಮಯ್ಯ ಅವರು ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಡೆದುಕೊಂಡರು.
ಬಾಳೆಲೆ ಮತ್ತು ಟಿ.ಶೆಟ್ಟಿಗೇರಿ (ಬಿ) ಕೊಡವ ಸಮಾಜ ತಂಡಗಳ ಪಂದ್ಯದಲ್ಲಿ ಟಿ. ಶೆಟ್ಟಿಗೇರಿ ವಿಜಯಿಯಾಯಿತು. ಬ್ಯಾಟಿಂಗ್ ಮಾಡಿದ ಬಾಳಲೆ ಕೊಡವ ಸಮಾಜವು ೧೨ ಓವರುಗಳಲ್ಲಿ ೪ ವಿಕೆಟ್ ಕಳೆದುಕೊಂಡು ೧೦೫ ರನ್ ಗಳಿಸಿತು. ಟಿ.ಶೆಟ್ಟಿಗೇರಿ ೧೧.೪ ಓವರುಗಳಲ್ಲಿ ೫ ವಿಕೆಟ್ ನಷ್ಟಕ್ಕೆ ಎದುರಾಳಿ ನೀಡಿದ್ದ ೧೦೬ ರನ್ ಗಳಿಸಿ ಗೆಲುವು ಪಡೆಯಿತು.
ಟಿ.ಶೆಟ್ಟಿಗೇರಿ ಬಿ ಕೊಡವ ಸಮಾಜದ ಗೌತಮ್ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಕೊಡವ ಸಮಾಜ ವೀರಾಜಪೇಟೆ ಎ ತಂಡ ಮತ್ತು ಮೂರ್ನಾಡು ಕೊಡವ ಸಮಾಜ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯಾಟವು ತಾ. ೧೩ ಕ್ಕೆ ಮುಂದೂಡಲಾಯಿತು. ಕೊಡವ ಅಕಾಡೆಮಿಯ ಪದಾಧಿಕಾರಿಗಳು ಮತ್ತು ಸದಸ್ಯರು ವಿವಿಧ ತಂಡಗಳ ಆಟಗಾರರು ಹಾಜರಿದ್ದರು.
-ಕಿಶೋರ್ ಕುಮಾರ್ ಶೆಟ್ಟಿ