ವರದಿ:ಕೆ.ಈಶಾನ್ವಿ

ವೀರಾಜಪೇಟೆ, ನ. ೧೦ : ಬದಲಾಗುತ್ತಿರುವ ವಾತಾವರಣ ದೇಶದ ಕೃಷಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಕಳೆದ ಹಿಂಗಾರು ಹಂಗಾಮಿನಲ್ಲಿ ಕಂಡುಬAದಿದೆ. ಕಳೆದ ನೂರು ವರ್ಷಗಳ ಮಳೆಯ ಏರಿಳಿತ ಗಮನಿಸಿದಾಗ, ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ತೀರಾ ಅಸ್ತವ್ಯಸ್ತವಾಗುತ್ತಿದೆ. ಇದರಿಂದಾಗಿ, ಇಳುವರಿ ಕುಸಿದು ಸಣ್ಣ ಹಾಗೂ ಮಧ್ಯಮ ರೈತರು ತೀವ್ರ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ವರ್ಷದ ಜನವರಿ-ಏಪ್ರಿಲ್ ಅವಧಿಯಲ್ಲಿ ಸುರಿದ ಅನಿಯಮಿತ ಮಳೆಯಿಂದ ರೈತರು ಹಿಂಗಾರು ಫಸಲು ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಬಂದ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಬಿತ್ತನೆ ಪ್ರದೇಶದಲ್ಲಿ ಬೆಳೆ ಹಾಳಾಗಿದ್ದು, ಕೋಟಿ ಲೆಕ್ಕದಲ್ಲಿ ನಷ್ಟ ಸಂಭವಿಸಿದೆ.

ಅವೈಜ್ಞಾನಿಕ ಪರಿಹಾರ ಕ್ರಮ : ಬೆಳೆ ನಷ್ಟದ ಸಂದರ್ಭದಲ್ಲಿ ನೀಡುತ್ತಿರುವ ಪರಿಹಾರ ವೈಜ್ಞಾನಿಕವಾಗಿಲ್ಲ.

(ಮೊದಲ ಪುಟದಿಂದ) ಎಷ್ಟು ಪರಿಹಾರ ನೀಡಬೇಕೆಂಬುದು ತಜ್ಞರ ಬದಲಿಗೆ ರಾಜಕೀಯ ನಿರ್ಣಯವಾಗಿದೆ. ಎಷ್ಟೋ ಸಂದರ್ಭಗಳಲ್ಲಿ ಹಾನಿ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡದೆ ಅಂದಾಜು ಮಾಡಲಾಗುತ್ತದೆ.

ಪ್ರಕೃತಿಯಲ್ಲಿನ ಬದಲಾವಣೆಯಿಂದಾಗಿರುವ ಪರಿಣಾಮ, ಮಳೆ ಏರಿಳಿತದಿಂದಾಗಿ ಮುಂಗಾರು ಹಂಗಾಮಿನ ಬೆಳೆ ಹಾಗೂ ತೀವ್ರ ಚಳಿಯಿಂದಾಗಿ ಹಿಂಗಾರು ಬೆಳೆಗಳ ಮೇಲೆ ಪ್ರಭಾವ ಬೀರಿದೆ. ತಾಪಮಾನ ಏರಿಕೆಯಿಂದ, ಹಿಂಗಾರು ಹಂಗಾಮಿನಲ್ಲಿ ಬೆಳೆ ಮೇಲೆ ಪರಿಣಾಮ, ಭತ್ತ, ಹಾಗೂ ತೋಟಗಾರಿಕೆ ಬೆಳೆಗಳ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತಿದೆ.

ಅಕಾಲಿಕ ಮಳೆಗೆ ಪಟ್ಟಣ ಸುತ್ತಮುತ್ತಲಿನ ರೈತರು ಬೆಳೆದಿದ್ದ ಭತ್ತ ನೆಲಕಚ್ಚಿದೆ. ಇದೀಗ ಫಸಲುಗಟ್ಟುತ್ತಿರುವ ಭತ್ತದ ಬೆಳೆಯ ಮೇಲೂ ಮಾರಕ ಪರಿಣಾಮ ಉಂಟುಮಾಡುತ್ತಿದೆ. ಭತ್ತದ ಗಿಡಗಳಲ್ಲಿ ಹೂವುಗಳು ಅರಳಿದಾಗ ಆ ಹೂವುಗಳ ಒಳಗೆ ಮಳೆ ಹನಿಗಳು ಸೇರಿ ಫಸಲುಗಟ್ಟುವುದರ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ. ಈ ವರ್ಷ ರೈತರಿಗೆ ಅನುಕೂಲವಾಗುವ ಹಾಗೆ ಮಳೆಯೇ ಬರಲಿಲ್ಲ. ಈ ಅಕಾಲಿಕ ಮಳೆ ಭತ್ತವಷ್ಟೇ ಅಲ್ಲ, ಕಾಫಿ, ಕರಿಮೆಣಸು ಫಸಲಿನ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ಮಳೆಯ ಅವಕೃಪೆ : ಮಳೆಯಾಗಬೇಕಾದ ದಿನಗಳಲ್ಲಿ ಮಳೆ ಇಲ್ಲದೆ ಬೆಳೆ ಒಣಗಿ ಹಾಳಾಯಿತು. ಇದೀಗ ಕಷ್ಟಪಟ್ಟು ಬೆಳೆದ ಒಂದಷ್ಟು ಕೃಷಿ ಫಸಲಿಗೆ ಮಳೆ ಅಕಾಲಿಕವಾಗಿ ಸುರಿದು ಹಾಳು ಮಾಡುತ್ತಿದೆ ಎಂದು ಮಳೆಯ ಅವಕೃಪೆ ಬಗ್ಗೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಬೆಳೆದಿದ್ದ ಭತ್ತದ ಫಸಲು ಕೆಲವೇ ದಿನಗಳಲ್ಲಿ ಕಟಾವಿಗೆ ಬಂದು ನಿಂತಿತ್ತು. ಕಳೆದ ಆರೇಳು ತಿಂಗಳಿನಿAದ ಬರದ ಪರಿಸ್ಥಿತಿಯಲ್ಲಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಸಾಲದ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿಯಲ್ಲಿ ಸಿಲುಕಿದಂತಾಗಿದೆ.

ಕಾಫಿಗೆ ಹೊಡೆತ : ಮಳೆಗಾಲ ಮುಗಿದರೂ ಅಕಾಲಿಕ ಮಳೆಯಾಗುತ್ತಿರುವುದರಿಂದ ಕಾಫಿ ಬೆಳೆಯುವ ರೈತರು ಗಿಡಗಳಲ್ಲಿ ಉಳಿದಿರುವ ಬೆಳೆಯನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಸರಿಯಾಗಿ ಮಳೆಯಾಗದ ಪರಿಣಾಮ ಇರುವ ಕಾಫಿ ಮತ್ತು ಮೆಣಸಿನ ಪಸಲು ನಷ್ಟವಾಯಿತು. ಕೆಲವು ಗಿಡಗಳಲ್ಲಿ ಈಗಾಗಲೇ ಕಾಫಿ ಹಣ್ಣಾಗಿದ್ದು ಕೆಲವರು ಹಣ್ಣು ಕಾಫಿಯನ್ನು ಕುಯ್ಲು ಮಾಡಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಕಾಫಿ ಗಿಡದಲ್ಲಿಯೇ ಕೊಳೆಯುತ್ತಿದೆ. ಕೆಲವು ಕಾಫಿ ಬೆಳೆಗಾರರು ಕೊಯ್ಲು ಮಾಡುತ್ತಿದ್ದು ಫಸಲನ್ನು ಒಣಗಿಸಲು ಸಾಧ್ಯವಿಲ್ಲದಂತಾಗಿದೆ. ಬಿಸಿಲಲ್ಲಿ ಒಣಗಿಸಿದರೆ ಮಾತ್ರ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು. ಇಲ್ಲದಿದ್ದರೆ ಕಾಫಿಯನ್ನು ಕೊಳ್ಳುವವರು ಇಲ್ಲದಂತಾಗುತ್ತದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೊಂದು ವಾರ ಮಳೆ ಮುಂದುವರಿದರೆ ಕಾಫಿ ಬೆಳೆಗಾರರು ದೊಡ್ಡ ಮಟ್ಟದ ನಷ್ಟ ಎದುರಿಸಬೇಕಾಗುತ್ತದೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕಾಫಿ ಬೆಳೆಯಾಗಲಿಲ್ಲ. ಕಾಳು ಮೆಣಸಿನ ತೆನೆ ಸರಿಯಾಗಿ ಬರಲಿಲ್ಲ. ಬಿಸಿಲಿಗೆ ಕಾಳು ಕಟ್ಟದೇ ಉದುರಿ ಹೋಗಿದೆ.