ಸಿದ್ದಾಪುರ, ನ. ೧೦: ೨೦೨೨-೨೩ನೇ ಸಾಲಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲೆಕ್ಕ ಪರಿಶೋಧನೆ ಹಾಗೂ ಜಮಾಬಂಧಿ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಗೋಪಾಲ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಿದ್ದಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಸಾಲಿನ ಅಧ್ಯಕ್ಷೆ ರೀನಾ ತುಳಸಿ ಅವಧಿಯಲ್ಲಿ ಕೈಗೊಳ್ಳಲಾದ ಸೋಲಾರ್ ಪ್ಯಾನಲ್ ಅಳವಡಿಕೆಗೆ ಹಾಗೂ ವಿವಿಧ ಕಾಮಗಾರಿಗಳ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕಪತ್ರ ಮಂಡಿಸಲಾಯಿತು.
ದುಬಾರಿ ಖರ್ಚುವೆಚ್ಚ ಮಾಡಿರುವುದು ಬೆಳಕಿಗೆ ಬಂದಿದ್ದು ಸೋಲಾರ್ ಪ್ಯಾನಲ್ ಅಳವಡಿಕೆ ಸಂಬAಧ ಗುತ್ತಿಗೆದಾರರಿಗೆ ದೊಡ್ಡ ಮೊತ್ತದ ಹಣವನ್ನು ಪಾವತಿ ಮಾಡಿರುವುದು ಕಂಡು ಬಂದಿದ್ದು ಸಾರ್ವಜನಿಕರು ಈ ಬಗ್ಗೆ ತನಿಖೆ ನಡೆಸುವಂತೆ ನೋಡಲ್ ಅಧಿಕಾರಿಯನ್ನು ಒತ್ತಾಯಿಸಿದರು.
ಲೆಕ್ಕ ಪತ್ರಗಳಲ್ಲಿ ಈ ಹಿಂದಿನ ಆಡಳಿತ ಮಂಡಳಿ ಭಾರಿ ಮೊತ್ತದ ಹಣವನ್ನು ದುರುಪಯೋಗ ಮಾಡಿದ್ದು ಈ ಸಂಬAಧ ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಮುಖಂಡ ರಮೇಶ್ ಒತ್ತಾಯಿಸಿದರು.
ಕಳೆದ ಆಡಳಿತ ಮಂಡಳಿ ಸುಮಾರು ರೂ.೮,೪೫,೯೨೧ ಮೊತ್ತದ ಸೋಲಾರ್ ಪ್ಯಾನಲ್ ದುರಸ್ತಿ ಹಾಗೂ ಅಳವಡಿಕೆಯನ್ನು ಮಾಡಿದರು ಕೂಡ ದೊಡ್ಡ ಮೊತ್ತದ ವಿದ್ಯುತ್ ಬಿಲ್ ಬಂದಿರುವುದು ಕಂಡು ಬಂದಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಸ ವಿಲೇವಾರಿ ಹಾಗೂ ಪೌರಕಾರ್ಮಿಕರ ಪರಿಕರ ಖರೀದಿಸುವಿಕೆಗೆ ರೂ ೧೦,೨೧,೭೨೬ ವೆಚ್ಚ ಮಾಡಿರುವುದಾಗಿ ಮಾಹಿತಿ ನೀಡಿರುವುದರ ಗ್ರಾಮ ಪಂಚಾಯಿತಿಯ ವಿರುದ್ಧ ಹೌಹಾರಿದ ಗ್ರಾಮಸ್ಥರು ಇದರಲ್ಲಿ ದೊಡ್ಡ ಮೊತ್ತದ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದು ತನಿಖೆಗೆ ಒತ್ತಾಯಿಸಿದರು.
ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕಿ ಕವಿತಾ ಸಭೆಯಲ್ಲಿ ಮಾತನಾಡಿ ಕಳೆದ ಸಾಲಿನ ಆಡಳಿತ ಮಂಡಳಿ ಅವಧಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ಆಕ್ಷೇಪಣೆ ವ್ಯಕ್ತಪಡಿಸಿರುವುದರಿಂದ ತಾಲೂಕು ಕಾರ್ಯನಿರ್ವಾಹಣಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದರು. ಇದಲ್ಲದೆ ಮುಂದಿನ ಏಳು ದಿನಗಳೊಳಗಾಗಿ ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಉದ್ಯೋಗ ಖಾತ್ರಿ ಅಧಿಕಾರಿ ಸತೀಶ್ ಮಾತನಾಡಿ ಯೋಜನೆಗಳಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಪಳನಿ ಸ್ವಾಮಿ, ಮಾಜಿ ಅಧ್ಯಕ್ಷೆ ರೀನಾ ತುಳಸಿ ಅಭಿವೃದ್ಧಿ ಅಧಿಕಾರಿ ಶಫೀಕ್, ಕಾರ್ಯದರ್ಶಿ ಮೋಹನ್, ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.