ಕೂಡಿಗೆ, ನ. ೧೦: ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಮೀಸಲು ಅರಣ್ಯ ಪ್ರದೇಶದ ಜಾಗವೆಂದು ಗಡಿಕಲ್ಲು ಅಳವಡಿಸಿ ಜನರ ಆಕ್ರೋಶಕ್ಕೆ ತುತ್ತಾಗಿದೆ. ನೀರಾವರಿ ಇಲಾಖೆ ಜಾಗದ ಮಾಹಿತಿಯನ್ನು ಪತ್ರ ವ್ಯವಹಾರದ ಮೂಲಕ ಒದಗಿಸಿದರೂ ಅರಣ್ಯ ಇಲಾಖೆ ಗಡಿಕಲ್ಲು ತೆರವುಗೊಳಿಸದಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಈಗಾಗಲೇ ಅರಣ್ಯ ಇಲಾಖೆಯ ಮೈಸೂರು ವಿಭಾಗಕ್ಕೆ ನೀರಾವರಿ ಇಲಾಖೆಯ ಜಾಗದ ದಾಖಲೆಯನ್ನು ನೀಡಲಾಗಿದೆ. ಸ್ಥಳ ಪರಿಶೀಲನೆ ನಡೆಸಿ ಸಮಗ್ರವಾದ ದಾಖಲೆಯನ್ನು ಪರಿಶೀಲನೆ ಮಾಡಿ ತೆರವುಗೊಳಿಸುವಂತೆ ಮನವಿಯನ್ನು ಮಾಡಿದ್ದರು. ಇದುವರೆಗೂ ಗಡಿಕಲ್ಲಿನ ತೆರವು ಆಗಿಲ್ಲದಿರುವುದು ಅತೃಪ್ತಿ ಮೂಡಿಸಿದೆ.

ಐದು ತಿಂಗಳ ಹಿಂದೆ ಕಲ್ಲು ಅಳವಡಿಕೆಗೆ ಮುಂದಾದಾಗ ನೀರಾವರಿ ಇಲಾಖೆಯ ಅಧಿಕಾರಿಗಳು ತಡೆಯೊಡ್ಡಿದ ಘಟನೆ ನಡೆದಿತ್ತು. ಈ ನಡುವೆಯೂ ಸರ್ವೆ ಮಾಡಿ ಗಡಿಕಲ್ಲನ್ನು ಅರಣ್ಯ ಇಲಾಖೆ ನೆಟ್ಟಿತ್ತು. ಇದರಿಂದಾಗಿ ಮುಖ್ಯ ನಾಲೆಯ ಕಾಮಗಾರಿಗಳಿಗೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಭಾಗದ ರೈತರಿಗೆ, ಸಾರ್ವಜನಿಕರಿಗೆ ತೊಂದರೆಗಳು ಆಗುತ್ತಿವೆ. ಇದನ್ನು ತೆರವುಗೊಳಿಸುವಂತೆ ಈ ಭಾಗದ ರೈತರು, ಸಾರ್ವಜನಿಕರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆ ಮೇಲಧಿಕಾರಿಗಳ ಸೂಚನೆಯಂತೆ ಯಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಗಡಿ ಗುರುತು ಮತ್ತು ಹುದುಗೂರು ವ್ಯಾಪ್ತಿಯ ಅರಣ್ಯ ಪ್ರದೇಶದ ಗಡಿ ಕಲ್ಲುಗಳನ್ನು ಅಳವಡಿಕೆ ಮಾಡುವ ಸರ್ವೆ ಕಾರ್ಯವನ್ನು ಮಾಡಿದ್ದಾರೆ. ನೀರಾವರಿ ಇಲಾಖೆಯವರ ಗಮನಕ್ಕೆ ಬಾರದೆ ಬ್ರಿಟಿಷ್ ಸರ್ಕಾರ ನಕ್ಷೆಯ ಆಧಾರದಲ್ಲಿ ಹಾರಂಗಿಯ ಮುಖ್ಯ ನಾಲೆಯ ಅಂಚಿಗೆ ಅರಣ್ಯ ಗಡಿ ಕಲ್ಲನ್ನು ನೆಡಲು ಬಂದು ಜಾಗವನ್ನು ಗುರುತಿಸಿದಾಗ ನೀರಾವರಿ ಇಲಾಖೆ ಗಮನಕ್ಕೆ ಸ್ಥಳೀಯರು ತಿಳಿಸಿದ ತಕ್ಷಣವೇ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಸೂಚನೆಯಂತೆ ಇಂಜಿನಿಯರ್ ಸಿದ್ದರಾಜಶೆಟ್ಟಿ ಮತ್ತು ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆಯು ನಿರ್ಮಾಣಗೊಂಡು ೫೫ ವರ್ಷಗಳು ಕಳೆದಿದ್ದು, ನೀರಾವರಿ ಇಲಾಖೆಯ ಮೂಲಕ ನಾಲೆಯ ಸರ್ವೆ ನಡೆಸಿ ಅದರ ಮುಖೇನ ನಾಲೆಯ ಹದ್ದುಬಸ್ತನ್ನು ಗುರುತಿಸಿ ಅದರ ಪ್ರಕಾರವಾಗಿ ಹಾರಂಗಿಯ ಮುಖ್ಯ ನಾಲೆಯ ಕಾಮಗಾರಿಯು ನಡೆದಿದೆ. ಅದರೆ, ೫೫ ವರ್ಷಗಳ ನಂತರ ಅರಣ್ಯ ಇಲಾಖೆ ಗಡಿ ಪ್ರದೇಶದ ಗುರುತಿಸುವಿಕೆಯಲ್ಲಿ ಹಾರಂಗಿಯ ಮುಖ್ಯ ನಾಲೆ ಅಂಚಿನಲ್ಲಿ ಗಡಿ ಕಲ್ಲನ್ನು ನೆಟ್ಟು ವಿವಾದ ಸೃಷ್ಟಿಸಿ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಅರಣ್ಯ ಇಲಾಖೆಯವರಿಗೆ ನೀರಾವರಿ ಇಲಾಖೆ ವಿಸ್ತಾರ ಮಾಹಿತಿ ನೀಡಿದ್ದರೂ ಗಡಿಕಲ್ಲು ತೆರವು ಮಾತ್ರ ಆಗಿರುವುದಿಲ್ಲ. - ಕೆ.ಕೆ. ನಾಗರಾಜಶೆಟ್ಟಿ