ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮದ ಕಿಂಗ್ಪಿನ್ ಬಂಧನ
ಕಲಬುರಗಿ, ನ. ೧೦: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣದ ಕಿಂಗ್ ಪಿನ್ ಆರ್.ಡಿ. ಪಾಟೀಲ್ನನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಾರಾಷ್ಟçದಲ್ಲಿ ಆರ್.ಡಿ. ಪಾಟೀಲ್ ಅಡಗಿರುವುದನ್ನು ಪತ್ತೆ ಹಚ್ಚಿದ ಕಲಬುರಗಿ ಜಿಲ್ಲಾ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದು ಮಹಾರಾಷ್ಟçದಿಂದ ಕಲಬುರಗಿಗೆ ಕರೆತರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ತನ್ನ ಬಂಧಿಸಲು ಬರುತ್ತಿದ್ದಾರೆ ಎಂಬುದನ್ನು ತಿಳಿದ ಆರ್.ಡಿ. ಪಾಟೀಲ್ ತಾ. ೬ ರಂದು ಕಲಬುರಗಿಯ ವರ್ಧಾ ಲೇಔಟ್ನಲ್ಲಿರುವ ಮಹಾಲಕ್ಷಿö್ಮ ಅಪಾರ್ಟ್ಮೆಂಟ್ ಕಾಂಪೌAಡ್ ಹಾರಿ ಪರಾರಿಯಾಗಿದ್ದನು. ಆರ್.ಡಿ. ಪಾಟೀಲ್ಗೆ ಫ್ಲ್ಯಾಟ್ ಬಾಡಿಗೆ ನೀಡಿದ ತಪ್ಪಿಗೆ ಶಹಾಪೂರದ ಶಂಕರ್ ಗೌಡಯಾಳವಾರ್ ಮತ್ತು ಅಪಾರ್ಟ್ಮೆಂಟ್ ವ್ಯವಸ್ಥಾಪಕ ದಿಲೀಪ್ ಪವಾರ್ ಬಂಧಿತರಾಗಿದ್ದಾರೆ.
ಹಾಸನಾಂಬೆ ದರ್ಶನಕ್ಕೆ ನಿಂತಿದ್ದ ಭಕ್ತರಿಗೆ ವಿದ್ಯುತ್ ಸ್ಪರ್ಶ
ಹಾಸನ, ನ. ೧೦: ಜಿಲ್ಲೆಯ ಹಾಸನಾಂಬ ದೇಗುಲದಲ್ಲಿ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದಾಗ ವಿದ್ಯುತ್ ಶಾಕ್ ಆಘಾತದಿಂದ ೧೭ ಮಂದಿ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನೂಕುನುಗ್ಗಲು ನಿರ್ವಹಿಸಲು ಬಳಸಿದ ಬ್ಯಾರಿಕೇಡ್ಗಳ ನಡುವೆ ಹಲವು ಜನರು ನಿಂತಿದ್ದರು. ಆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಶಾಕ್ ಅನುಭವವಾಗಿದ್ದು, ಕಬ್ಬಿಣದ ಬ್ಯಾರಿಕೇಡ್ಗಳ ಮೂಲಕ ವಿದ್ಯುತ್ ಸ್ಪರ್ಶವಾಗಿರುವುದಾಗಿ ಭಕ್ತರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿದ್ಯುತ್ ಶಾಕ್ ಅನುಭವವಾಗುತ್ತಿದ್ದಂತೆಯೇ ಭಕ್ತರು ಏಕಾಏಕಿ ಓಡಲು ಆರಂಭಿಸಿದ್ದು, ಹದಿನೇಳು ಜನರನ್ನು ಬ್ಯಾರಿಕೇಡ್ಗಳಿಂದ ಹೊರಕ್ಕೆ ಸ್ಥಳಾಂತರಿಸಲಾಯಿತು. ಮಹಿಳೆಯರು ಸೇರಿದಂತೆ ಎಲ್ಲಾ ೧೭ ಜನರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಬ್ಯಾರಿಕೇಡ್ಗಳ ನಡುವೆ ನಿಂತಿದ್ದಾಗ ಕರೆಂಟ್ ಶಾಕ್ ಹೊಡೆಯಿತು ಎಂದು ಹೇಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಕಾಲ್ತುಳಿತ ಸಂಭವಿಸಿಲ್ಲ, ಇದು ಕೇವಲ ಗದ್ದಲವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಬಸ್ಗೆ ಟ್ರಕ್ ಡಿಕ್ಕಿ-ಆರು ಮಂದಿ ಸಾವು
ಗೋರಖ್ಪುರ, ನ. ೧೦: ಜಗದೀಶ್ಪುರ ಸಮೀಪದ ಗೋರಖ್ಪುರ-ಕುಶಿನಗರ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟ್ರಕ್ ನಿಂತಿದ್ದ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, ೨೭ ಮಂದಿ ಗಾಯ ಗೊಂಡಿದ್ದಾರೆ. ಐದು ಆ್ಯಂಬ್ಯುಲೆನ್ಸ್ಗಳ ಸಹಾಯದಿಂದ ಗಾಯಾಳುಗಳನ್ನು ಜಿಲ್ಲಾಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಗೋರಖ್ಪುರದಿಂದ ಬರುತ್ತಿದ್ದ ಬಸ್ ಪ್ರಯಾಣಿಕರೊಂದಿಗೆ ಪರೌನಾ ಕಡೆಗೆ ಹೋಗುತ್ತಿತ್ತು ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ ಎಂದು ಕಂಟೋನ್ಮೆAಟ್ ಪೊಲೀಸ್ ಸರ್ಕಲ್ ಆಫೀಸರ್ ಮನುಷ್ ಪರೀಕ್ ತಿಳಿಸಿದ್ದಾರೆ. ಜಗದೀಶ್ಪುರದ ಮಲ್ಲಾಪುರ ಬಳಿ ಬಸ್ ಟೈರ್ ಪಂಕ್ಚರ್ ಆಗಿದ್ದು, ಚಾಲಕ ರಸ್ತೆ ಬದಿಯಲ್ಲಿ ಬಸ್ನ್ನು ನಿಲ್ಲಿಸಿದ್ದಾರೆ. ಪ್ರಯಾಣಿಕರನ್ನು ಸಾಗಿಸಲು ಕಂಡಕ್ಟರ್ ಮತ್ತೊಂದು ಬಸ್ಗೆ ಕರೆ ಮಾಡಿದ್ದಾರೆ. ಕೆಲವು ಪ್ರಯಾಣಿಕರು ಗೋರಖ್ಪುರದಿಂದ ಬಂದ ಮತ್ತೊಂದು ಬಸ್ಗೆ ಹತ್ತಿದ್ದರೆ, ಮತ್ತೆ ಕೆಲವರು ಬಸ್ ಹತ್ತಲು ಇಳಿಯುತ್ತಿದ್ದರು ಮತ್ತು ಅನೇಕ ಪ್ರಯಾಣಿಕರು ಎರಡು ಬಸ್ಗಳ ನಡುವೆ ನಿಂತಿರುವಾಗ ವೇಗವಾಗಿ ಬಂದ ಲಾರಿಯೊಂದು ಬಸ್ಗೆ ಡಿಕ್ಕಿ ಹೊಡೆದಿದೆ. ಇದರ ಡಿಕ್ಕಿಯ ರಭಸಕ್ಕೆ ೬ ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮುರುಘಾ ಶರಣರ ಬಿಡುಗಡೆ ಆದೇಶ ಮುಂದೂಡಿಕೆ
ಚಿತ್ರದುರ್ಗ, ನ. ೧೦: ಪೋಕ್ಸೊ ಪ್ರಕರಣಕ್ಕೆ ಹೈಕೋರ್ಟ್ನಲ್ಲಿ ಜಾಮೀನು ಪಡೆದಿರುವ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರನ್ನು ನ್ಯಾಯಾಂಗ ಬಂಧನದಿAದ ಬಿಡುಗಡೆ ಮಾಡುವ ಅದೇಶವನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಾ. ೧೫ಕ್ಕೆ ಮುಂದೂಡಿದೆ. ಜಾಮೀನು ಮಂಜೂರು ಮಾಡಿದ ಹೈಕೋರ್ಟ್ ಆದೇಶದ ಪ್ರತಿಯನ್ನು ಶರಣರ ಪರ ವಕೀಲರು ಶುಕ್ರವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಹೈಕೋರ್ಟ್ ವಿಧಿಸಿದ ಷರತ್ತುಗಳ ಅನ್ವಯ ಇಬ್ಬರ ಭದ್ರತಾ ಖಾತರಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಸರ್ಕಾರಿ ಪರ ವಕೀಲ ಜಗದೀಶ್ ಅವರು ಅರ್ಜಿ ಯೊಂದನ್ನು ನ್ಯಾಯಾಲಯದ ಮುಂದಿಟ್ಟರು. ಇದನ್ನು ತಾ. ೧೫ ರಂದು ಪರಿಶೀಲನೆ ಮಾಡುವುದಾಗಿ ನ್ಯಾಯಾಧೀಶೆ ಬಿ.ಕೆ. ಕೋಮಲಾ ಪ್ರಕಟಿಸಿದರು.
ಪುರಿ ಜಗನ್ನಾಥ ದೇವಾಲಯದಲ್ಲಿ ನೂಕುನುಗ್ಗಲು : ೧೦ ಮಂದಿಗೆ ಗಾಯ
ಪುರಿ, ನ. ೧೦: ಪುರಿ ಜಗನ್ನಾಥನ ದರ್ಶನಕ್ಕೆ ಜನಸಾಗರ ಬರುತ್ತಿದ್ದು ನೂಕುನುಗ್ಗಲು ಉಂಟಾಗಿ ಕನಿಷ್ಟ ೧೦ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ತಿಕ ಮಾಸದ ಹಿನ್ನೆಲೆ ಜಗನ್ನಾಥನ ದರ್ಶನ ಪಡೆಯಲು ಅಪಾರ ಪ್ರಮಾಣದಲ್ಲಿ ಭಕ್ತರು ಪುರಿಗೆ ಭೇಟಿ ನೀಡುತ್ತಿದ್ದಾರೆ ಮುಂಜಾನೆ ಸಂಭವಿಸಿದ ಘಟನೆಗೆ ಭಕ್ತರ ನೂಕುನುಗ್ಗಲು ಕಾರಣ ಎಂದು ಜಗನ್ನಾಥ ದೇವಸ್ಥಾನದ ಆಡಳಿತ (ಎಸ್ಜೆಟಿಎ) ಮುಖ್ಯ ಆಡಳಿತಾಧಿಕಾರಿ ರಂಜನ್ ಕುಮಾರ್ ದಾಸ್ ಹೇಳಿದ್ದಾರೆ. ನೂಕು ನುಗ್ಗಲಿಗೆ ಒಳಗಾದವರಲ್ಲಿ ಹೆಚ್ಚಿನವರು ವಯಸ್ಸಾದವರು. ಘಟನೆಯ ಬಳಿಕ ಸುರಕ್ಷಿತವಾಗಿ ದೇವರ ದರ್ಶನ ಪಡೆಯಲು ಹೆಚ್ಚಿನ ವ್ಯವಸ್ಥೆ ಮಾಡಲಾಗಿದೆ ಎಂದು ದಾಸ್ ಹೇಳಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ, ಮಂಗಳಾರತಿ ತೆಗೆದುಕೊಳ್ಳುವ ವೇಳೆ ನೂಕುನುಗ್ಗಲು ಉಂಟಾಗಿದ್ದು, ೧೦ ಮಂದಿ ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಎಲ್ಲರಿಗೂ ಚಿಕಿತ್ಸೆ ಕೊಡಿಸಲಾಗಿದ್ದು, ಬಹುತೇಕರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.