ಸೋಮವಾರಪೇಟೆ, ನ. ೭: ಬೆಂಗಳೂರಿನ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಕೆಂಗಲ್ ಹನುಮಂತಯ್ಯ ಪ್ರಶಸ್ತಿಗೆ ಭಾಜನರಾದ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಅವರನ್ನು ಹಾಸನ ಪ್ಲಾಂರ್ಸ್ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಹಾಸನ ಜಿಲ್ಲೆಯ ಪ್ಲಾಂರ್ಸ್ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾಗಿರುವ ತಾಕೇರಿ ಗ್ರಾಮದ ಎ.ಆರ್. ಮುತ್ತಣ್ಣ ಅವರು ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಕೆಂಗಲ್ ಹನುಮಂತಯ್ಯ ಪ್ರಶಸ್ತಿಯನ್ನು ನೀಡಲಾಗಿದ್ದು, ಹಾಸನದಲ್ಲಿ ನಡೆದ ಸಹಕಾರ ಸಂಘದ ಕಾರ್ಯಕ್ರಮವೊಂದರಲ್ಲಿ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಬಿ.ಎಂ. ನಾಗರಾಜ್, ಉಪಾಧ್ಯಕ್ಷ ಜೈ ಮಾರುತಿ ದೇವರಾಜು, ಕಾರ್ಯನಿರ್ವಹಣಾಧಿಕಾರಿ ಚೈತ್ರ ಸೇರಿದಂತೆ ಸಹಕಾರ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು.