ಸುಂಟಿಕೊಪ್ಪ, ನ. ೭: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಅಸುನೀಗಿದ ಘಟನೆ ಕಳೆದ ರಾತ್ರಿ ಸಂಭವಿಸಿದೆ.

ಇಲ್ಲಿನ ಮಧುರಮ್ಮ ಬಡಾವಣೆಯ ಏಳುಮಲೈ ಎಂಬವರ ಪುತ್ರ ಉದಯ (೨೧), ದಿ. ಗಣಪತಿ, ಪೊನ್ನವ್ವ ಅವರ ಪುತ್ರ ಚಂದನ್ (೨೦) ಮೃತ ದುರ್ದೈವಿಗಳು. ಕಳೆದ ರಾತ್ರಿ ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಅಂದಗೋವೆ ಜಂಕ್ಷನ್ ಬಳಿ ಕೂರ್ಗ್ ಹಳ್ಳಿ ತೋಟದ ಸಮೀಪ ಬರ್ಚ್ವುಡ್ ರೆಸಾರ್ಟ್ ಹತ್ತಿರ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಹೊಡೆದಿದೆ. ಪರಿಣಾಮ ಬೈಕ್ ಸವಾರರು ರಸ್ತೆ ಬದಿಯ ಪೊದೆಗೆ ಎಸೆಯಲ್ಪಟ್ಟು ಮುಖ, ತಲೆ, ಕೈಕಾಲುಗಳಿಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ತೋಟಕ್ಕೆ ಕೂಲಿಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಜೀಪ್ ಚಾಲಕರೊಬ್ಬರು ಇಂದು ಅಪಘಾತ ನಡೆದು ಸಾವು ಸಂಭವಿಸಿರುವ ಬಗ್ಗೆ ಗಮನಿಸಿ ನೀಡಿದ ಮಾಹಿತಿಯನ್ವಯ ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಮೃತ ಚಂದನ್ ಹಾಗೂ ಉದಯ್ ಕೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಸ್ಥಳಕ್ಕೆ ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಠಾಣಾಧಿಕಾರಿ ಎಂ.ಸಿ. ಶ್ರೀಧರ್ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು.