ವಿದ್ಯುತ್ ಗೋಪುರದ ಬಳಿ ಎಚ್ಚರ ವಹಿಸಲು ಸೂಚನೆ
ಮಡಿಕೇರಿ, ನ. ೧ : ಮೈಸೂರು ವಲಯದ ಕವಿಪ್ರನಿನಿ, ಕೊಡಗು ಬೃಹತ್ ಕಾಮಗಾರಿ ವಿಭಾಗದ ವತಿಯಿಂದ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನಲ್ಲಿರುವ ಹಾಲಿ ೬೬/೧೧ ಕೆ.ವಿ ಮಡಿಕೇರಿ ವಿದ್ಯುತ್ ವಿತರಣಾ ಕೇಂದ್ರದಿAದ ವೀರಾಜಪೇಟೆ ತಾಲೂಕಿನಲ್ಲಿರುವ ಹಾಲಿ ೬೬/೩೩/೧೧ ಕೆ.ವಿ ವೀರಾಜಪೇಟೆ ವಿದ್ಯುತ್ ವಿತರಣಾ ಕೇಂದ್ರದವರೆಗೆ ನಿರ್ಮಾಣ ಹಂತದಲ್ಲಿದ್ದ ೩೭.೩೮ ಕಿ.ಮೀ ಉದ್ದದ ೬೬ ಕೆ.ವಿ ಮಡಿಕೇರಿ-ವೀರಾಜಪೇಟೆ ಪ್ರಸರಣ ಮಾರ್ಗದ ಕಾಮಗಾರಿ ಕೆಲಸವು ಮುಗಿದಿದ್ದು, ಈ ಮಾರ್ಗವನ್ನು ನವೆಂಬರ್ ೫ ಅಥವಾ ನಂತರದ ಯಾವುದೇ ದಿನಗಳಲ್ಲಿ ಚಾಲನೆಗೊಳಿಸಲಾಗುವುದು (ವಿದ್ಯುತ್ ಹರಿಸಲಾಗುವುದು).
ಈ ವಿದ್ಯುತ್ ಮಾರ್ಗವು ಕೊಡಗು ಜಿಲ್ಲೆಯ ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕುಗಳ ಗ್ರಾಮಗಳಾದ ಮಗ್ಗುಲ, ಕೊಮ್ಮೆತೋಡು, ಐಮಂಗಲ, ಚೆಂಬೆಬೆಳ್ಳೂರು, ದೇವಣಗೇರಿ, ಬೆಳ್ಳಾರಿಮಾಡು, ಮೈತಾಡಿ, ನಾಲ್ಕೇರಿ, ಎಂ. ಬಾಡಗ, ಮೂರ್ನಾಡು, ಕಾಂತೂರು, ಮರಗೋಡು, ಹಾಕತ್ತೂರು, ಮೇಕೇರಿ, ಕದನೂರು, ಬಿಳಿಗೇರಿ, ಕಗ್ಗೋಡ್ಲು, ಕಡಗದಾಳ್, ಇಬ್ನಿವಳವಾಡಿ, ಕರ್ಣಂಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸರಹದ್ದಿನಲ್ಲಿ ಹಾದು ಹೋಗುತ್ತದೆ.
ಈ ೬೬ ಕೆವಿ ಮಾರ್ಗದ ವಿದ್ಯುತ್ ಗೋಪುರಗಳ ಮೇಲಿರುವ ವಿದ್ಯುತ್ ವಾಹಕವು ಚಾಲನೆಗೊಳ್ಳುವುದರಿಂದ ಸಾರ್ವಜನಿಕರು ಗೋಪುರಗಳಿಗೆ ದನಕರುಗಳನ್ನು ಮತ್ತು ಇತರೆ ಸಾಕುಪ್ರಾಣಿಗಳನ್ನು ಕಟ್ಟುವುದಾಗಲಿ, ಲೋಹದ ಪಟ್ಟಿಯನ್ನು ತೆಗೆಯುವುದಾಗಲಿ, ಗೋಪುರಗಳನ್ನು ಹತ್ತುವುದಾಗಲಿ, ತಂತಿಗಳನ್ನು ಮುಟ್ಟುವುದಾಗಲಿ, ಗೋಪುರಗಳ ಕೆಳಗೆ ಮರಗಿಡಗಳನ್ನು ನೆಡುವುದಾಗಲಿ, ಗೋಪುರಗಳಿಗೆ ಬಳ್ಳಿ, ತಂತಿ, ಹಗ್ಗ ಮುಂತಾದುವುಗಳನ್ನು ಎಸೆಯುವುದಾಗಲಿ, ಗಾಳಿಪಟ ಮುಂತಾದುವುಗಳನ್ನು ಗೋಪುರದ ಹತ್ತಿರ ಹಾರಿಸುವುದಾಗಲಿ ಮಾಡಬಾರದಾಗಿ ಕೋರಲಾಗಿದೆ. ಹಾಗೆ ಮಾಡುವುದರಿಂದ ತುಂಬಾ ಅಪಾಯಕಾರಿ ಅಪಘಾತ ಮತ್ತು ಪ್ರಾಣಹಾನಿಯಾಗುವ ಸಂಭವವಿರುತ್ತದೆ ಎಂದು ಈ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗಿದೆ.
ಈ ಸೂಚನೆಯನ್ನು ಉಲ್ಲಂಘಿಸಿದ ಪಕ್ಷದಲ್ಲಿ ಉಂಟಾಗುವ ಯಾವುದೇ ತರಹದ ಅಪಘಾತ ಅಥವಾ ಪ್ರಾಣಹಾನಿಗೆ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ಜವಾಬ್ದಾರರಲ್ಲ ಎಂದು ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದು ಕೊಡಗು ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಕೋರಿದ್ದಾರೆ.