ಸೋಮವಾರಪೇಟೆ, ನ. ೧ : ಚಿತ್ರದುರ್ಗ ಬೃಹನ್ಮಠಕ್ಕೆ ಸೇರಿದ ಕೊಡಗು ಜಿಲ್ಲೆಯಲ್ಲಿರುವ ಆಸ್ತಿಗಳ ರಕ್ಷಣೆಗೆ ಕ್ರಮ ವಹಿಸಲಾಗಿದ್ದು, ಅಕ್ರಮ ಸಾಗುವಳಿ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಚಿತ್ರದುರ್ಗ ಬೃಹನ್ಮಠದ ಆಡಳಿತಾಧಿಕಾರಿಗಳು ಹಾಗೂ ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರಾದÀ ರೇಖಾ ತಿಳಿಸಿದರು.

ಸಮೀಪದ ಬೇಳೂರು ಗ್ರಾಮದಲ್ಲಿರುವ ಚಿತ್ರದುರ್ಗ ಬೃಹನ್ಮಠಕ್ಕೆ ಸೇರಿದ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಮಠ ಹಾಗೂ ಮಠದ ಆಸ್ತಿಯ ಕುಂದುಕೊರತೆ ಹಾಗೂ ಅಭಿವೃದ್ದಿಗೆ ಸಂಬAಧಿಸಿದ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದೆ ಕೊಡಗಿನ ಅರಸರು ಮಠಕ್ಕೆ ನೀಡಿರುವ ಆಸ್ತಿಗಳು ಎಂದಿಗೂ ಮತ್ತೊಬ್ಬರ ವೈಯಕ್ತಿಕ ಸ್ವತ್ತಾಗಲು ಸಾಧ್ಯವಿಲ್ಲ. ಬೃಹನ್ಮಠದ ಆಸ್ತಿಯನ್ನು ಸಂರಕ್ಷಿಸಲು ಹಾಗೂ ಕಾನೂನು ಹೋರಾಟ ನಡೆಸಲು ಹಿರಿಯ ಹಾಗೂ ಅನುಭವಿ ವಕೀಲರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ಮಠದ ಆಸ್ತಿಯನ್ನು ಪ್ರಸ್ತುತದ ಪರಿಸ್ಥಿತಿಗೆ ಅನುಗುಣವಾಗಿ ಕೆಂಪು, ಹಳದಿ ಹಾಗೂ ಹಸಿರು ವಲಯಗಳನ್ನಾಗಿ ವಿಭಜಿಸಿ ಕಾನೂನು ಘಟಕ ಕ್ರಮಕೈಗೊಳ್ಳಲು ಸಿದ್ದವಾಗಿದೆ ಎಂದರು.

ಮಠದ ಆಸ್ತಿ ಪರಭಾರೆ, ಮರಗಳ ಹನನ ಸೇರಿದಂತೆ ಇನ್ನಿತರ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಮಠಗಳಲ್ಲಿ ದಾಸೋಹಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಆದರೆ ಇಲ್ಲಿ ಅದಾವುದೂ ನಡೆಯುತ್ತಿಲ್ಲ. ಆದ್ದರಿಂದ ತಕ್ಷಣವೇ ಬೇಳೂರು ಮಠದಲ್ಲಿ ದಾಸೋಹ ಆರಂಭಿಸುವAತೆ ವ್ಯವಸ್ಥಾಪಕ ಮಠಗಳಿಗೂ ಸ್ವಾಮೀಜಿಗಳನ್ನು ನೇಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಎಸ್. ಮಹೇಶ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಸಾಂಬಾಶಿವಾಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸತೀಶ್, ತಾಲೂಕು ಅಧ್ಯಕ್ಷ ಹಾಲಪ್ಪ, ಮಾಜಿ ಜಿಲ್ಲಾಧ್ಯಕ್ಷ ಡಿ.ಬಿ.ಧರ್ಮಪ್ಪ, ಗ್ರಾಮಸ್ಥ ಪ್ರಜ್ವಲ್, ವೀರಶೈವ ಸಮಾಜದ ಮುಖಂಡರುಗಳಾದ ಶಾಂತವೇರಿ ವಸಂತ್, ಚಂಗಡಹಳ್ಳಿಯ ಹಾಲಪ್ಪ, ಸಂತೋಷ್ ಕೊಡ್ಲಿಪೇಟೆ, ನಿರ್ಮಲ ನಾಗರಾಜ್ ಅವರುಗಳು ಮಠಕ್ಕೆ ಸಂಬAಧಿಸಿದAತೆ ನ್ಯಾಯಾಧೀಶ ರೊಂದಿಗೆ ಚರ್ಚಿಸಿದರು.

ಕೊಡಗಿನ ಅರಸರು ೩೦೦೦ ಎಕರೆಗಳಿಗಿಂತಲೂ ಹೆಚ್ಚಿನ ಭೂಮಿಯನ್ನು ಮುರುಘಾ ಮಠಕ್ಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಪ್ರಸ್ತುತ ೫೫೦ ಎಕರೆ ಉಳಿದಿದೆ. ಇಂದು ಬಹುತೇಕ ಭೂಮಿ ಅಕ್ರಮವಾಗಿ ಬಳಕೆಯಾಗುತ್ತಿದೆ. ಅವುಗಳನ್ನು ವಾಪಸ್ ಪಡೆಯಬೇಕು. ಅದು ಸಮಾಜದ ಆಸ್ತಿಯಾಗಿ ಉಳಿಯಬೇಕೆಂದು ಹೇಳಿದರು.

ತೋಟದ ಒಳಗೆ ಇದ್ದ ಮರಗಳನ್ನು ಕಡಿದು ಮಾರಲಾಗಿದೆ. ಇದರ ಹಣ ಮಠಕ್ಕೆ ಸೇರಿದೆಯೇ ಎಂದು ಹಲವರು ಪ್ರಶ್ನಿಸಿದರು. ೨೦೦ ಎಕರೆ ತೋಟವನ್ನು ಹೊರರಾಜ್ಯದ ವ್ಯಕ್ತಿಗಳಿಗೆ ಅತ್ಯಂತ ಕಡಿಮೆ ಹಣಕ್ಕೆ ಗುತ್ತಿಗೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಮಠದ ಭಕ್ತರು ಆರೋಪಿಸಿದರು.

ಎಲ್ಲಾ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತಾಧಿಕಾರಿಗಳು, ವ್ಯವಸ್ಥಾಪಕ ಶಶಿಧರ್ ಅವರಿಗೆ ಎಚ್ಚರಿಕೆ ನೀಡಿ, ಮುಂದಿನ ದಿನಗಳಲ್ಲಿ ತಪ್ಪು ನಡೆದರೆ ಕಠಿಣ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.

ಬೃಹನ್ಮಠದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಕುಮಾರ್, ಮಾನವ ಸಂಪನ್ಮೂಲ ಅಧಿಕಾರಿ ವಿಜಯ, ಕಾನೂನು ಸಲಹೆಗಾರ ವಿಶ್ವನಾಥ, ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ವೇದಿಕೆಯಲ್ಲಿದ್ದರು. ಬೇಳೂರು, ಶನಿವಾರಸಂತೆ, ಕೊಡ್ಲಿಪೇಟೆ, ಚಂಗಡಹಳ್ಳಿ ಸುತ್ತಮುತ್ತಲ ಕೆಲವು ಗ್ರಾಮಸ್ಥರು ಮತ್ತು ವೀರಶೈವ ಮುಖಂಡರು ಹಾಜರಿದ್ದರು.