ಕುಶಾಲನಗರ, ಅ. ೩೧: ಗ್ರೀನ್ ಎನರ್ಜಿ ಬಗ್ಗೆ ಹೇಳುವ ಕೇಂದ್ರ ಸರ್ಕಾರ ರೈತರ ಪಂಪ್ ಸೆಟ್ಗೆ ಸಹಾಯಧನ ನೀಡದೆ ಅನ್ಯಾಯ ಮಾಡಿದೆ ಎಂದು ಆಮ್ ಆದ್ಮಿ ಪಕ್ಷದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಭೋಜಣ್ಣ ಸೋಮಯ್ಯ ಆರೋಪಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ಸೋಲಾರ್ ಪಂಪ್ ಸೆಟ್ಗೆ ಶೇ. ೫೦ ಸಬ್ಸಿಡಿ ನೀಡಲು ಆಪ್ ಪಕ್ಷ ಒತ್ತಾಯಿಸಿದೆ. ಈ ವರ್ಷ ಮಳೆ ಕಡಿಮೆ ಇರುವುದರಿಂದ ಕಾಫಿ ಬೆಳೆಗಾರರು ಬಹಳ ಸಂಕಟದಲ್ಲಿ ಇದ್ದಾರೆ. ತಮ್ಮ ಫಸಲು ಉಳಿಸಿಕೊಳ್ಳಲು ನೀರು ಪಂಪ್ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ ಎಂದಿದ್ದಾರೆ.
ರಾಜ್ಯದ ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರ್ಕಾರ ಪ್ರತಿವರ್ಷ ೬,೯೦೦ ಕೋಟಿ ರೂ. ಖರ್ಚು ಮಾಡುತ್ತಿದೆ. ರಾಜ್ಯದಲ್ಲಿ ಒಟ್ಟು ೩೪ ಲಕ್ಷ ಪಂಪ್ಸೆಟ್ಗಳಿದ್ದು, ಇವುಗಳ ಅಳವಡಿಕೆಗೆ ಒಟ್ಟು ೧೩,೮೦೦ ಕೋಟಿ ರೂ. ಖರ್ಚಾಗುತ್ತದೆ ಎಂಬ ಅಂದಾಜಿದೆ. ಇನ್ನುಳಿದ ೬೯೦೦ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರವು ಭರಿಸುವ ಮೂಲಕ ಉಚಿತವಾಗಿ ಸರ್ಕಾರವೇ ಪ್ರತಿಯೊಬ್ಬ ರೈತರಿಗೂ ಸೋಲಾರ್ ಪಂಪ್ ವಿತರಿಸಿದರೆ ರೈತರಿಗೂ ಅನುಕೂಲವಾಗಲಿದೆ ಎಂದು ಭೋಜಣ್ಣ ಸೋಮಯ್ಯ ಹೇಳಿದರು.
ದೇಶದಲ್ಲಿ ಶೇ. ೭೦ ರಷ್ಟು ರೈತರಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಉಚಿತವಾಗಿ ಸೋಲಾರ್ ಪಂಪ್ಸೆಟ್ ವಿತರಣೆ ಮಾಡಿದರೆ, ದೀರ್ಘಾವಧಿಯಲ್ಲಿ ಸರ್ಕಾರಗಳಿಗೂ ಲಾಭವಾಗಲಿದೆ. ಸರ್ಕಾರವು ಸೋಲಾರ್ ಪ್ಲಾಂಟ್ಗಳನ್ನು ಅಳವಡಿಸಲು ನೀಡುತ್ತಿರುವ ನೂರಾರು ಕೋಟಿ ಹಣ ಉಳಿಯುತ್ತದೆ. ಇದಲ್ಲದೆ ಹೆಚ್ಚಿನ ವಿದ್ಯುತ್ತನ್ನು ಉತ್ಪಾದಿಸಿ ಪವರ್ ಗ್ರಿಡ್ಗೆ ನೀಡಿದಲ್ಲಿ ರೈತರಿಗೆ ಸಹ ಸಾಕಷ್ಟು ಆರ್ಥಿಕ ಸಹಾಯವು ಆಗುತ್ತದೆ. ಇದುವರೆಗೂ ನಿರಂತರ ವಿದ್ಯುತ್ ಇಲ್ಲದೆ ಬೆಳೆ ನಾಶ ಆಗುತ್ತಿದ್ದು, ಸೋಲಾರ್ ಪಂಪ್ನಿAದ ರೈತರಿಗೆ ಬೆಳೆ ಉತ್ಪಾದನೆ ಹೆಚ್ಚಾಗಲಿದೆ. ಇದು ಜಿಡಿಪಿ ಬೆಳವಣಿಗೆಗೆ ಕೂಡ ಸಹಕಾರಿಯಾಗಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ೨೦೧೭ರಲ್ಲಿ ಕುಸುಮ್ ಯೋಜನೆ ಜಾರಿ ಮಾಡಿದ್ದು, ಕರ್ನಾಟಕ ರಾಜ್ಯಕ್ಕೆ ೧೦,೩೧೪ ಪಂಪ್ಸೆಟ್ ನೀಡಿದೆ. ಶೇ ೩೦ರಷ್ಟು ಸಬ್ಸಿಡಿ ನೀಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಇದರಲ್ಲಿ ಕೇವಲ ೩೧೪ ಪಂಪ್ಸೆಟ್ ಮಾತ್ರ ರಾಜ್ಯದಲ್ಲಿ ವಿತರಣೆಯಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಆಪ್ ಸಂಘಟನಾ ಕಾರ್ಯದರ್ಶಿ ಎಂ.ಕೆ. ಅಪ್ಪಯ್ಯ, ಕಾರ್ಯದರ್ಶಿ ಪೃಥ್ವಿ ಇದ್ದರು.