ಮಡಿಕೇರಿ, ಅ. ೩೧: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಹುಲಿ ಉಗುರು ಪ್ರಕರಣಕ್ಕೆ ಸಂಬAಧಿಸಿದAತೆ ಕೊಡಗಿನ ಜನತೆ ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಕ್ಷೇತ್ರದ ಶಾಸಕರೂ ಆದ ಎ.ಎಸ್. ಪೊನ್ನಣ್ಣ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊಡಗಿನಲ್ಲಿ ಐನ್‌ಮನೆಗಳು ಸೇರಿದಂತೆ ಬಹುತೇಕ ಮನೆಗಳಲ್ಲಿ ಪುರಾತನ ಕಾಲದಿಂದಲೇ ವನ್ಯಜೀವಿಗಳ ದೇಹದ ಭಾಗಗಳಿವೆ. ಅವುಗಳನ್ನು ಬಳಸಿ ಮಾಡಿರುವ ಪರಿಕರಗಳಿವೆ. ಚರ್ಮ, ಕೊಂಬು, ನವಿಲುಗರಿಗಳಿವೆ. ಇವುಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್ ಒನ್ ಕ್ಯಾಟಗರಿಗೆ ಬರುವುದಿಲ್ಲ. ಕಳ್ಳ ಬೇಟೆಯಲ್ಲಿ ಕೊಂದ ಪ್ರಾಣಿಯ ಕೊಂಬು, ಹಲ್ಲು-ಉಗುರುಗಳನ್ನು ಇಟ್ಟುಕೊಳ್ಳುವುದು ಅಪರಾಧವಾಗುತ್ತದೆ. ಪಾರಂಪರಿಕವಾಗಿ ಕೊಂಬು, ಉಗುರುಗಳನ್ನು ಹೊಂದಿದ್ದರೆ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಪೊನ್ನಣ್ಣ ಹೇಳಿದರು. ಈಗಾಗಲೇ ರಾಜ್ಯಸಭಾ ಸದಸ್ಯರಾದ ಜಗ್ಗೇಶ್ ಅವರ ಪ್ರಕರಣದಲ್ಲಿ ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಈ ಪ್ರಕರಣ ಇತ್ಯರ್ಥವಾಗುವವರೆಗೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಬಾರದು. ಈ ಸಂಬAಧ ಈಗಾಗಲೇ ಅರಣ್ಯ ಸಚಿವರೊಂದಿಗೆ ತಾನು ಮಾತನಾಡಿದ್ದು, ಮುಖ್ಯಮಂತ್ರಿಗಳೊAದಿಗೆ ಈ ಕುರಿತು ಸದ್ಯದಲ್ಲಿಯೆ ಮಾತನಾಡಲಿದ್ದೇನೆ ಎಂದರು. ದಾರಿಯಲ್ಲಿ ತೆರಳುವಾಗ ಹುಲಿ ಉಗುರು ಸಿಕ್ಕಿತೆಂದರೆ ಅದು ಅಪರಾಧವಾಗಲು ಸಾಧ್ಯವಿಲ್ಲ. ಅಧಿಕಾರಿಗಳು ಕಾನೂನನ್ನು ಅರಿತು ಕೆಲಸ ಮಾಡಬೇಕು. ಇದರಲ್ಲಿ ಯಾವುದೇ ಎಫ್‌ಐಆರ್ ದಾಖಲು ಮಾಡಲು ಅವಕಾಶ ಇಲ್ಲ. ಅಧಿಕಾರಿಗಳು ಕಾನೂನು ಮೀರಿ ಕೆಲಸ ಮಾಡಿ ಜನರಿಗೆ ತೊಂದರೆ ಕೊಟ್ಟರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊನ್ನಣ್ಣ ನುಡಿದರು.

ಕೊಡಗಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಶ್ರೀಮಂಗಲದಲ್ಲಿ

(ಮೊದಲ ಪುಟದಿಂದ) ೬೬ ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ನ.೩ರಂದು ಉದ್ಘಾಟನೆಗೊಳ್ಳಲಿದೆ. ಜಿಲ್ಲೆಯಲ್ಲಿ ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ. ಸಾರ್ವಜನಿಕರು ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಲಂಚಕ್ಕೆ ಬೇಡಿಕೆಯಿಟ್ಟರೆ ಸಾಕ್ಷಿ ಸಹಿತ ದೂರು ನೀಡಿದರೆ ಕ್ರಮಕೈಗೊಳ್ಳುವ ಜವಬ್ದಾರಿ ತನ್ನದು ಎಂದು ಪೊನ್ನಣ್ಣ ತಿಳಿಸಿದರು.

ಹತಾಶೆಯಿಂದ ಮೈತ್ರಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಲು ಸಾಧ್ಯವಿಲ್ಲ. ೨೫ ಸಂಸದರನ್ನು ಹೊಂದಿರುವ ಬಿಜೆಪಿ ೧೯ ಶಾಸಕರನ್ನು ಹೊಂದಿರುವ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದು ಬಿಜೆಪಿ ಸಂಸದರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ. ಅಭಿವೃದ್ಧಿ ಕೆಲಸ ಮಾಡಿದ್ದರೆ ಮೈತ್ರಿ ಇಲ್ಲದೆ ಗೆಲುವು ಸಾಧಿಸಬಹುದಿತ್ತು. ಆದರೆ ಸೋಲುವ ಹತಾಶೆಯಿಂದ ಬಿಜೆಪಿ ಮೈತ್ರಿ ಮಾಡಿಕೊಂಡಿದೆ ಎಂದು ಪೊನ್ನಣ್ಣ ಕುಟುಕಿದರು.

ತಮ್ಮ ಪಕ್ಷವನ್ನು ಉಳಿಸಿಕೊಳ್ಳುವುದಕ್ಕಾಗಿ ಮೈತ್ರಿ ಮಾಡಿಕೊಂಡಿರುವುದಾಗಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಇಲ್ಲಿ ಜನಹಿತದ ಬದಲು ಸ್ವಾರ್ಥ ರಾಜಕಾರಣ ಕಂಡು ಬರುತ್ತಿದೆ ಎಂದು ಪೊನ್ನಣ್ಣ ಟೀಕಿಸಿದರು.

ಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಉಪಸ್ಥಿತರಿದ್ದರು.