ಸೋಮವಾರಪೇಟೆ, ಅ. ೩೧: ಕೊಡಗಿನ ರೈತರ ಬಹುಕಾಲದ ಬೇಡಿಕೆಯಾಗಿರುವ ೧೦ ಹೆಚ್.ಪಿ. ವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಇತರ ಜಿಲ್ಲೆಗಳಂತೆ ಉಚಿತ ವಿದ್ಯುತ್ ಒದಗಿಸುವುದು, ಸೋಮವಾರಪೇಟೆ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಣೆ ಸೇರಿದಂತೆ ಕಸ್ತೂರಿ ರಂಗನ್ ವರದಿ ಅನುಷ್ಠಾನ ಸಂಬAಧ ಉಂಟಾಗುವ ಸಾಧಕ ಬಾಧಕಗಳ ಬಗ್ಗೆ ಸರ್ಕಾರ ತಕ್ಷಣ ಗಮನ ಹರಿಸಬೇಕೆಂದು ಕೊಡಗು ಜಿಲ್ಲಾ ರೈತ ಸಂಘ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರಗಳ ಬಗ್ಗೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಎಲ್ಲಾ ಸರ್ಕಾರಗಳೂ ಸಹ ಕೊಡಗಿನ ರೈತರ ಬಗ್ಗೆ ಮಲತಾಯಿ ಧೋರಣೆ ತಾಳಿವೆ. ರೈತರ ನ್ಯಾಯಪರ ಬೇಡಿಕೆಗಳಿಗೆ ಮನ್ನಣೆ ನೀಡುತ್ತಿಲ್ಲ. ಇದೇ ಮಾದರಿ ಮುಂದು ವರೆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೊಡಗಿನ ಕೃಷಿಕರಿಗೆ ೧೦ ಹೆಚ್‌ಪಿವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಈವೆರಗೆ ಫಲ ಕಂಡಿಲ್ಲ. ಕಳೆದ ಸಾಲಿನಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಆದೇಶ ಹೊರಡಿಸಿದರೂ ಕಾರ್ಯರೂಪಕ್ಕೆ ಬಂದಿಲ್ಲ. ಈ ನಡುವೆ ಡಿಬಿಟಿ ಮೂಲಕ ಯೋಜನೆ ಅನುಷ್ಠಾನ ಗೊಳಿಸುವುದಕ್ಕೆ ರೈತ ಸಂಘ ವಿರೋಧ ವ್ಯಕ್ತಪಡಿಸಿದ ಮೇರೆ, ಅಂದಿನ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರು ಮತ್ತೊಮ್ಮೆ ಸಿ.ಎಂ. ಅವರ ಗಮನಕ್ಕೆ ತಂದಿದ್ದು, ಡಿಬಿಟಿ ಯೋಜನೆ ಯನ್ನು ಕೈಬಿಡುವಂತೆ ಮನವಿ ಮಾಡಲಾಗಿತ್ತು. ಆದರೆ ಸೆಸ್ಕ್ನ ವ್ಯವಸ್ಥಾಪಕರು ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಈಗಿನ ಇಂಧನ ಸಚಿವರನ್ನು ರೈತ ಸಂಘದ ರಾಜ್ಯಾಧ್ಯಕ್ಷರು ಭೇಟಿ ಮಾಡಿ ಈ ಬಗ್ಗೆ ಗಮನ ಸೆಳೆದ ಸಂದರ್ಭ, ಹಳೆಯ ಸರ್ಕಾರದಲ್ಲಿದ್ದ ನಿಯಮವನ್ನೇ ಉಲ್ಲೇಖಿಸಿದ್ದಾರೆ. ಇದು ಅವೈಜ್ಞಾನಿಕವಾಗಿದ್ದು, ತಕ್ಷಣ ಕೈಬಿಟ್ಟು ಉಚಿತ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲೆಯ ಈರ್ವರು ಶಾಸಕರು ಗಮನ ಹರಿಸಬೇಕೆಂದು ಮನವಿ ಮಾಡಿದರು.

ಕಸ್ತೂರಿ ರಂಗನ್ ವರದಿ ಜಾರಿ ಸಂಬAಧ ಅರಣ್ಯ ಸಚಿವರ ನಡೆ ಆಕ್ಷೇಪಾರ್ಹವಾಗಿದೆ. ಸಚಿವರು ಕೇವಲ ಎನ್‌ಜಿಓಗಳಿಗೆ ಮಾತ್ರ ಸಚಿವರಾಗಿರುವಂತೆ ಭಾಸವಾಗುತ್ತಿದೆ. ಕಸ್ತೂರಿ ರಂಗನ್ ಪರವಾದ ನಿಲುವನ್ನು ವ್ಯಕ್ತಪಡಿಸುವ ಮೂಲಕ ಪರೋಕ್ಷವಾಗಿ ಕೊಡಗಿನ ಗ್ರಾಮೀಣ ಪ್ರದೇಶದ ರೈತರ ಜೀವನ, ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುವ ಹಂತದಲ್ಲಿದ್ದಾರೆ. ಈ ಬಗ್ಗೆ ಜಿಲ್ಲೆಯ ಶಾಸಕರುಗಳು, ಸಚಿವರ ಗಮನ ಸೆಳೆಯಬೇಕು. ತಪ್ಪಿದ್ದಲ್ಲಿ ಸಚಿವರ ಖಾತೆ ಬದಲಾವಣೆಗೆ ರೈತ ಸಂಘ ಹೋರಾಟ ರೂಪಿಸಲಿದೆ ಎಂದರು.

ಗೋಷ್ಠಿಯಲ್ಲಿದ್ದ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್ ಮಾತನಾಡಿ, ಸೋಮವಾರಪೇಟೆ ತಾಲೂಕಿನಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದ್ದು, ಕೃಷಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿದೆ. ಸೋಮವಾರಪೇಟೆಯನ್ನು ಬರಪೀಡಿತ ತಾಲೂಕೆಂದು ಘೋಷಿಸುವಂತೆ ಈರ್ವರು ಶಾಸಕರಿಗ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೆ ಅಧಿಕೃತ ಆದೇಶ ಬಂದಿಲ್ಲ. ತಕ್ಷಣ ಸೋಮವಾರಪೇಟೆಯನ್ನು ಬರಪೀಡಿತ ತಾಲೂಕಾಗಿ ಘೋಷಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್, ಪದಾಧಿಕಾರಿಗಳಾದ ಸುಭಾಷ್, ಪ್ರಸನ್ನ ಅವರುಗಳು ಉಪಸ್ಥಿತರಿದ್ದರು.