*ಸಿದ್ದಾಪುರ, ಅ. ೩೧: ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ವಿವಿಧೆಡೆ ಕಾಡಾನೆ ಹಾವಳಿ ಮಿತಿ ಮೀರಿದೆ. ಸ್ಥಳೀಯ ನಿವಾಸಿ ಚೇನಂಡ ಮಾಚಮ್ಮ ಎಂಬವರ ಮನೆಯ ಬಳಿ ದಾಳಿ ಮಾಡಿದ ಕಾಡಾನೆಗಳು ಕಾಫಿ ಮತ್ತು ಅಡಿಕೆ ಗಿಡಗಳನ್ನು ನಾಶ ಮಾಡಿವೆ.

ಅದೃಷ್ಟವಶಾತ್ ಮಾಚಮ್ಮ ಅವರು ಬೆಂಗಳೂರಿನಲ್ಲಿರುವ ಪುತ್ರಿಯ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಾಗ ಪಕ್ಕದ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಅಪಾರ ನಷ್ಟ ಉಂಟು ಮಾಡಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮಾಚಮ್ಮ ಅವರು, ಹಿಂದೆಯೂ ಅನೇಕ ಬಾರಿ ಕಾಡಾನೆಗಳು ಮನೆಯ ಬಳಿ ದಾಂಧಲೆ ನಡೆಸಿವೆ. ಇಲ್ಲಿಯವರೆಗೆ ಅರಣ್ಯ ಇಲಾಖೆಯಿಂದ ಯಾವುದೇ ಪರಿಹಾರ ದೊರೆತಿಲ್ಲ. ನಮಗೆ ಆಗಿರುವ ನಷ್ಟವನ್ನು ಇಲಾಖೆ ಭರಿಸಬೇಕು ಮತ್ತು ಕಾಡಾನೆಗಳು ದಾಳಿ ಮಾಡದಂತೆ ಶಾಶ್ವತ ಪರಿಹಾರ ಸೂಚಿಸಬೇಕೆಂದು ಒತ್ತಾಯಿಸಿದ್ದಾರೆ.