ಗೋಣಿಕೊಪ್ಪ, ಅ. ೨೩: ವಿಶ್ವ ಬಾಂಧವ್ಯ ಮತ್ತು ಮಾನವನ ಸಮಾನತೆಯ ಸಂದೇಶವು ಮನುಷ್ಯ ಕುಲದ ಉದ್ದಾರಕ್ಕೆ ಪ್ರವಾದಿ ಮುಹಮ್ಮದ್(ಸ) ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಅವರು ಹೇಳಿದ್ದಾರೆ.

ಅವರು ಗೋಣಿಕೊಪ್ಪ ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಶಾಖೆ ಏರ್ಪಡಿಸಿದ್ದ ಸಮಾನತೆಯ ಸಮಾಜದ ಶಿಲ್ಪಿ ಮುಹಮ್ಮದ್(ಸ) ಎಂಬ ಶೀರ್ಷಿಕೆ ಯಲ್ಲಿ ನಡೆದ ಸೀರತ್ ಅಭಿಯಾನದ ಸಮಾರೋಪದ ಅಂಗವಾಗಿ ನಡೆದ ಸೌಹಾರ್ದ ಕಾರ್ಯಕ್ರಮದಲ್ಲಿ ಸೀರತ್ ಸಂದೇಶವನ್ನು ನೀಡಿ ಮಾತನಾಡು ತ್ತಿದ್ದರು. “ಪ್ರವಾದಿಯವರು ಸಮಾನತೆಯ ಉದಾತ್ತ ಸಿದ್ಧಾಂತಗಳನ್ನು ಕೇವಲ ಬೋಧನೆಗೆ ಸೀಮಿತಗೊಳಿಸದೆ ಕಾರ್ಯರೂಪಕ್ಕೆ ತಂದರು.

೨೩ ವರ್ಷಗಳ ತಮ್ಮ ಪ್ರವಾದಿತ್ವದ ಅವಧಿಯಲ್ಲಿ ಜಗತ್ತು ಹಿಂದೆAದೂ ಕಂಡರಿಯದ ಉತ್ತಮ ಸಮಾಜವೊಂದನ್ನು ನಿರ್ಮಿಸಿ ಜಗತ್ತಿಗೆ ಮಾದರಿಯಾದರು” ಎಂದರು.

ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ, ಸಾಹಿತಿ ಅರ್ಜುನ್ ಮೌರ್ಯ ಮಾತನಾಡುತ್ತಾ “ಮಾನವ ಕುಲದ ಮೂಲ ಒಂದೇ ಆಗಿರುವುದರಿಂದ ಯಾರಿಗೂ ಯಾರ ಮೇಲೆಯೂ ಯಾವ ಅರ್ಥದಲ್ಲೂ ಮೇಲ್ಮೆಯಿಲ್ಲ. ಯಾರೂ ಯಾರಿಗಿಂತಲೂ ಕೀಳೂ ಅಲ್ಲ.

ಮನುಷ್ಯ ಸಮೂಹದ ಸಮಾನತೆಯ ಪ್ರಾಯೋಗಿಕ ರೂಪವನ್ನು ಪ್ರವಾದಿ ಮುಹಮ್ಮದರು ಜಗತ್ತಿಗೆ ತೋರಿಸಿಕೊಟ್ಟರು. ಜಾತಿಯ, ಕೋಮಿನ ಹೆಸರಿನಲ್ಲಿ ನಡೆಯುವ ಹಿಂಸೆ ಅಪರಾಧಗಳು ಹೆಚ್ಚುತ್ತಿರುವ ಪ್ರಸಕ್ತ ದಿನಗಳಲ್ಲಿ ಪ್ರವಾದಿ ಸಂದೇಶಗಳಿಗೆ ಸಾಕಷ್ಟು ಪ್ರಸ್ತುತತೆ ಇದೆ. ಪ್ರವಾದಿಗಳು ತಮ್ಮ ಬದುಕಿನ ಅವಧಿಯಲ್ಲಿಯೇ ಸಮಾನತೆಯ ತತ್ವಗಳ ಆಧಾರದಲ್ಲಿ ಒಂದು ತತ್ವನಿಷ್ಠ, ಆದರ್ಶನಿಷ್ಠ ಸಮಾಜವನ್ನು ನಿರ್ಮಿಸಿ ಜಗತ್ತಿಗೆ ನೀಡಿದರು. ಒಂದು ಆದರ್ಶ ಪ್ರಾಯ ಸಮಾಜವನ್ನು ನಿರ್ಮಿಸಿದ ಪ್ರವಾದಿ ಮುಹಮ್ಮದರು ಕೇವಲ ಮುಸ್ಲಿಮ್ ಸಮುದಾಯದ ಪ್ರವಾದಿ ಎಂಬ ಕಲ್ಪನೆ ತಪ್ಪು. ಇಡೀ ಮನುಷ್ಯ ಕುಲದ ವಿಮೋಚನೆಗಾಗಿ ಪ್ರವಾದಿಗಳ ನಿಯೋಜನೆಯಾಯ್ತು. ಅದು ಮನುಷ್ಯ ಸಮಾಜದ ಬೇಡಿಕೆಯೂ ಆಗಿತ್ತು” ಎಂದರು.

ಕಾಫಿ ಮಂಡಳಿ ನಿವೃತ್ತ ಅಧಿಕಾರಿ ಟಿ. ಲಕ್ಷö್ಮಣ, ಜ.ಇ. ವರ್ತುಲ ಸಂಚಾಲಕ ಎ.ಪಿ. ತನ್ವೀರ್ ಅಹ್ಮದ್ ವೇದಿಕೆಯಲ್ಲಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ವಲಯ ಸಂಚಾಲಕ ಯು. ಅಬ್ದುಸ್ಸಲಾಮ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಸಂಚಾಲಕ ಪಿ.ಕೆ. ಅಬ್ದುಲ್ ರೆಹೆಮಾನ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ತನ್‌ಝೀಲ್‌ರವರು ನಿರೂಪಣೆಗೈದರು. ಶಮೀರ್ ರವರು ಧನ್ಯವಾದವಿತ್ತರು.