ಶನಿವಾರಸಂತೆ, ಅ. ೨೩: ಸಮೀಪದ ಕೊಡ್ಲಿಪೇಟೆಯ ಶ್ರೀರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಸ್ಥಾನ ಸಮಿತಿ ವತಿಯಿಂದ ಶರನ್ನವರಾತ್ರಿ ಪ್ರಯುಕ್ತ ಶುಕ್ರವಾರ ರಾತ್ರಿ ದುರ್ಗಾಕಲ್ಪೋಕ್ತ ಪೂಜೆ, ಸರಸ್ವತ್ಯವಾಹನಂ ಪೂಜೆ ನಡೆದು ಸಾಮೂಹಿಕ ಪ್ರಾರ್ಥನೆ, ಮಹಾಮಂಗಳಾರತಿಯಾಗಿ ಅನ್ನಸಂತರ್ಪಣೆ ನಡೆಯಿತು. ಬೆಳಿಗ್ಗೆ ದೇವಾಲಯದಲ್ಲಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮಾಡಿ ಪೂಜಿಸಲಾಗಿತ್ತು. ರಾತ್ರಿ ಕೊಡ್ಲಿಪೇಟೆಯ ಹೇಮಾವತಿ ರೋಟರಿ ಸಂಸ್ಥೆ ಸೇವಾರ್ಥ ನಡೆದ ಪೂಜಾ ಕಾರ್ಯಕ್ರಮದಲ್ಲಿ ರೊಟೇರಿಯನ್ ಕುಟುಂಬಸ್ಥರು, ಪಟ್ಟಣ ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಹಾಗೂ ಶ್ರೀ ಚೌಡೇಶ್ವರಿ ಮಹಿಳಾ ಬಳಗದ ಸದಸ್ಯೆಯರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಶ್ರೀ ಕ್ಷೇತ್ರದ ಅರ್ಚಕ ಮಹಾಬಲೇಶ್ವರ ಜೋಶಿ ಪೂಜಾ ಕೈಂಕರ್ಯ ನೆರವೇರಿಸಿದರು. ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.