ಸೋಮವಾರಪೇಟೆ, ಅ. ೨೩: ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ ಸಂಸ್ಕಾರ ಬೆಳೆಸಿದರೆ ಮುಂದೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯವಾಗುತ್ತದೆ ಎಂದು ಸೋಮೇಶ್ವರ ದೇವಾಲಯದ ಪ್ರಧಾನ ಅರ್ಚಕ ಚಿತ್ರಕುಮಾರ ಭಟ್ ಕರೆ ನೀಡಿದರು.
ಶರನ್ನವರಾತ್ರಿ ಅಂಗವಾಗಿ ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಆಯೋಜಿಸಿದ್ದ ಸರಸ್ವತಿ ಪೂಜೆ-ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಅಕ್ಷರ ಕಲಿಸುವ ಮೂಲಕ ಅವರ ಜೀವನದಲ್ಲಿ ಕಲಿಕೆಯ ಮುನ್ನುಡಿ ಬರೆಯುತ್ತಿದ್ದು, ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪೋಷಕರು ಕಾಳಜಿ ವಹಿಸಬೇಕು. ಮಕ್ಕಳು ತಾವು ಹೇಳಿಕೊಟ್ಟದ್ದನ್ನು ಹಾಗೂ ನಮ್ಮ ಸುತ್ತಲಿನ ಪರಿಸರವನ್ನು ನೋಡಿ ಕಲಿಯುತ್ತಾರೆ. ಆದ್ದರಿಂದ ತಂದೆ, ತಾಯಿಗಳು ಮನೆಯಲ್ಲಿ ಸಂಸ್ಕಾರದ ಜೀವನ ಸಾಗಿಸಬೇಕು. ಅದನ್ನೇ ಮಕ್ಕಳಿಗೂ ಕಲಿಸಬೇಕು ಎಂದರು.
ದೇವಾಲಯದ ಶಕ್ತಿ ಪಾರ್ವತಿ ದೇವಿಗೆ ಸರಸ್ವತಿ ಅಲಂಕಾರದೊAದಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನೆರವೇರಿತು. ಈ ಸಂದರ್ಭ ಅರ್ಚಕರಾದ ರವಿಶಂಕರ್, ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸ, ಕಾರ್ಯದರ್ಶಿ ವಿಜೇತ, ಸದಸ್ಯರುಗಳಾದ ಶ್ಯಾಮಸುಂದರ್, ಹರೀಶ್ ಮತ್ತಿತರರು ಹಾಜರಿದ್ದರು.