ವೀರಾಜಪೇಟೆ, ಅ. ೨೩: ಕೊಡವ ಸಮಾಜದ ಒಕ್ಕೂಟದ ಅಧೀನದಲ್ಲಿ ಬಾಳುಗೋಡುವಿನಲ್ಲಿ ನವೆಂಬರ್ ೧೯ ರಂದು ಅಂತರ ಕೊಡವ ಸಮಾಜಗಳ ನಡುವೆ ಸಾಂಸ್ಕೃತಿಕ ಪೈಪೋಟಿಗಳ ಕೊಡವ ನಮ್ಮೆ ನಡೆಯಲಿದೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಾಳಿಮಾಡ ಮೋಟಯ್ಯ ತಿಳಿಸಿದ್ದಾರೆ.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಸಮಾಜಗಳ ಒಕ್ಕೂಟದ ಅಧೀನದಲ್ಲಿ ೩೩ ಕೊಡವ ಸಮಾಜಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಕೊಡವ ಸಮಾಜಗಳ ನಡುವೆ ನಡೆಯಲಿದೆ. ಪೈಪೋಟಿಯಲ್ಲಿ ಕೋಲಾಟ್, ಕತ್ತಿಯಾಟ್, ಬೊಳಕಾಟ್, ಉಮ್ಮತಾಟ್, ಪರೆಯಕಳಿ, ಸಮ್ಮಂದ ಅಡಕುವೊ, ತಾಲಿಪಾಟ್ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿದೆ. ಒಂದು ಸಮಾಜದಿಂದ ಒಂದು ತಂಡಗಳು ಮಾತ್ರ ಭಾಗವಹಿಸಬಹುದಾಗಿದೆ. ಈಗಾಗಲೇ ಎಲ್ಲಾ ಕೊಡವ ಸಮಾಜಗಳಿಗೆ ಮನವಿ ಪತ್ರವನ್ನು ಕಳುಹಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ನವೆಂಬರ್ ೧೦ ಒಳಗಾಗಿ ಪೊನ್ನಂಪೇಟೆ ಕೊಡವ ಸಮಾಜದ ಕಚೇರಿಯಲ್ಲಿ ಹೆಸರನ್ನು ನೊಂದಾಯಿಸಿ ಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ೯೮೪೫೩೦೮೨೨೮/ ೯೪೮೩೮೩೬೧೧೫ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕ ಅಂಚೇಟಿರ ಮನು ಮುದ್ದಪ್ಪ, ನಿರ್ದೇಶಕ ಬಾಚಿರ ಜಗದೀಶ್ ಉಪಸ್ಥಿತರಿದ್ದರು.